×
Ad

60 ಲಕ್ಷ ಹುದ್ದೆಗಳು ಖಾಲಿಯಿವೆ, ಶಿಕ್ಷಿತ ಯುವಕರು ಇ-ರಿಕ್ಷಾ ಚಲಾಯಿಸುತ್ತಿದ್ದಾರೆ: ಬಿಜೆಪಿ ಸಂಸದ ವರುಣ್ ಗಾಂಧಿ

Update: 2022-06-08 14:16 IST
ವರುಣ್ ಗಾಂಧಿ (File Photo: PTI)

ಬರೇಲಿ: ಹಲವಾರು ಖಾಲಿ ಸರಕಾರಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳದೇ ಇರುವ ನಡುವೆ ದೇಶದಲ್ಲಿ ಏರುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಎತ್ತಿರುವ ಬಿಜೆಪಿಯ ಪಿಲಿಬಿಟ್ ಕ್ಷೇತ್ರದ ಸಂಸದ ವರುಣ್ ಗಾಂಧಿ, ಸಿಟಿಇಟಿ ಅರ್ಹತೆ ಪಡೆದ ಯುವಕನೊಬ್ಬ ಇ-ರಿಕ್ಷಾ ಚಲಾಯಿಸುತ್ತಿರುವ ವೀಡಿಯೋ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಯಾವುದೇ ಕೆಲಸ ಮೇಲು ಕೀಳೆಂದಿಲ್ಲ. ಆದರೆ ಕುಶಲ ಮತ್ತು ಶಿಕ್ಷಿತ ವ್ಯಕ್ತಿಯೊಬ್ಬರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ದೊರೆಯದೇ ಇರುವುದು ಬೇಸರವುಂಟು ಮಾಡುತ್ತದೆ. ದೇಶದಲ್ಲಿ  60 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿಯಿರುವಾಗ ಸಿಟಿಇಟಿ ತೇರ್ಗಡೆ ಹೊಂದಿದ ಯುವಕ ಅನಿವಾರ್ಯವಾಗಿ ಇ-ರಿಕ್ಷಾ ಚಲಾಯಿಸುವಂತಾಗಿದೆ. ಇದು ನಮ್ಮ ಸಂಸತ್ತಿನ ಸಂಘಟಿತ ವೈಫಲ್ಯವಾಗಿದೆ,''ಎಂದು ಅವರು ಬರೆದಿದ್ದಾರೆ.

ದೇಶದ ನಿರುದ್ಯೋಗ ಸಮಸ್ಯೆಯ ಬಗ್ಗೆ ವರುಣ್ ಗಾಂಧಿ ಅವರ ಟ್ವೀಟ್ ಅನ್ನು ಅಮನ್ ಖಾನ್ ಎಂಬವರು ಶ್ಲಾಘಿಸಿದ್ದಾರೆ. ವರುಣ್ ಅವರ ಮಧ್ಯಪ್ರವೇಶದ ನಂತರ ಆರ್‌ಆರ್‌ಬಿ- ಎನ್‌ಟಿಪಿಸಿ ಪರೀಕ್ಷೆಗೆ ಪ್ರವೇಶ ಪಡೆದ ಖಾನ್  ಅವರು ವರುಣ್ ಅವರ ಸಹಾಯಕ್ಕಾಗಿ ಧನ್ಯವಾದ ಸಲ್ಲಿಸುತ್ತಾ "ನಮ್ಮ ಕುಟುಂಬ ಮತ್ತು ನಾನು ನಿಮಗೆ ಆಭಾರಿಯಾಗಿದ್ದೇವೆ.  ನಮ್ಮಂತಹ ಯುವಜನರಿಗೆ ಮಾರ್ಗದರ್ಶನ ನೀಡಬಲ್ಲ ನಾಯಕರ ಅಗತ್ಯ ದೇಶಕ್ಕಿದೆ,'' ಎಂದು ಬರೆದಿದ್ದಾರೆ.

ಝಾನ್ಸಿ ನಿವಾಸಿಯಾಗಿರುವ ಖಾನ್‌ಗೆ ಅವರ ಮನೆಯಿಂದ 950 ಕಿಮೀ ದೂರದಲ್ಲಿರುವ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಪರೀಕ್ಷಾ ಕೇಂದ್ರ ನೀಡಲಾಗಿತ್ತು. ಆದರೆ ಆರ್ಥಿಕ ಅಡಚಣೆಯಿಂದಾಗಿ ಅವರಿಗೆ ಅಷ್ಟು ದೂರ ಪ್ರಯಾಣಿಸುವುದು ಅಸಾಧ್ಯವಾಗಿತ್ತು.

ವರುಣ್ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದು ದೂರದ ಪರೀಕ್ಷಾ ಕೇಂದ್ರಗಳಿಗೆ ತೆರಳುವವರಿಗೆ ಸಹಾಯ ಮಾಡಲು ರೈಲು ಟಿಕೆಟ್ ದರಗಳಲ್ಲಿ ರಿಯಾಯಿತಿ ಹಾಗೂ ಹೆಚ್ಚುವರಿ ಬೋಗಿಗಳ ಸೇರ್ಪಡೆಗೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News