ಭಾರೀ ಹಿನ್ನಡೆಯ ಬಳಿಕ ಬಿಜೆಪಿಯ ಆತ್ಮಾವಲೋಕನ: 38 ತಪ್ಪಿತಸ್ಥ ನಾಯಕರ ಪೈಕಿ 27 ಜನರಿಗೆ ಎಚ್ಚರಿಕೆ; ವರದಿ
ಹೊಸದಿಲ್ಲಿ,ಜೂ.8: ಪ್ರವಾದಿ ಮುಹಮ್ಮದ್‌ರ ಕುರಿತು ಪಕ್ಷದ ನಾಯಕಿ ನೂಪುರ್ ಶರ್ಮಾರ ಅವಹೇಳನಕಾರಿ ಹೇಳಿಕೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹಿನ್ನಡೆ ಮತ್ತು ಅವಮಾನದ ಬಳಿಕ ಎಚ್ಚೆತ್ತುಕೊಂಡಿರುವ ಆಡಳಿತಾರೂಢ ಬಿಜೆಪಿಯು ಹಾನಿ ನಿಯಂತ್ರಣಕ್ಕೆ ಮತ್ತು ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದೆ ಎಂದು Dainkbhaskar ವರದಿ ಮಾಡಿದೆ.
ಕಳೆದ ಎಂಟು ವರ್ಷಗಳಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ನಾಯಕರ ಪಟ್ಟಿಯನ್ನು ಸಿದ್ಧಪಡಿಸುವಂತೆ ಬಿಜೆಪಿಯ ಉನ್ನತ ನಾಯಕತ್ವವು ತನ್ನ ಸಂಶೋಧನಾ ಘಟಕಕ್ಕೆ ನಿರ್ದೇಶ ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಪರಿಶೀಲನೆಯ ಬಳಿಕ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಆಗಾಗ್ಗೆ ನೋವನ್ನುಂಟು ಮಾಡಿದ್ದ 38 ನಾಯಕರನ್ನು ಬಿಜೆಪಿಯು ಗುರುತಿಸಿದೆ ಎಂದು ಪ್ರಮುಖ ಹಿಂದಿ ವೃತ್ತಪತ್ರಿಕೆ ‘ದೈನಿಕ ಭಾಸ್ಕರ್’ ತನ್ನ ವರದಿಯಲ್ಲಿ ಹೇಳಿದೆ.
ತಪ್ಪಿತಸ್ಥರೆಂದು ಗುರುತಿಸಲ್ಪಟ್ಟವರಲ್ಲಿ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಗಿರಿರಾಜ ಸಿಂಗ್, ತಥಾಗತ ರಾಯ್, ವಿನಯ ಕಟಿಯಾರ್, ಮಹೇಶ ಶರ್ಮಾ, ರಾಜಾ ಸಿಂಗ್,ಸಾಕ್ಷಿ ಮಹಾರಾಜ ಮತ್ತು ಸಂಗೀತ ಸೋಮ್ ಸೇರಿದ್ದಾರೆ. ಈ ಪೈಕಿ 27 ನಾಯಕರಿಗೆ ಎಚ್ಚರಿಕೆಯನ್ನು ನೀಡಿರುವ ಪಕ್ಷದ ವರಿಷ್ಠರು, ಸೂಕ್ಷ್ಮ ವಿಷಯಗಳ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವ ಮುನ್ನ ನಾಯಕತ್ವದೊಂದಿಗೆ ಸಮಾಲೋಚಿಸುವಂತೆ ಸೂಚಿಸಿದೆ.
‘ದೈನಿಕ ಭಾಸ್ಕರ’ ತಿಳಿಸಿರುವಂತೆ ಬಿಜೆಪಿ ನಾಯಕತ್ವವು ತಪ್ಪಿತಸ್ಥರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ನೆರವಾಗಲು ಐಟಿ ಸಂಸ್ಥೆಯೊಂದನ್ನೂ ನಿಯೋಜಿಸಿಕೊಂಡಿದೆ. ಬಿಜೆಪಿಯು ವಿಶ್ಲೇಷಣೆಯ ಬಳಿಕ ಕಳೆದ ಎಂಟು ವರ್ಷಗಳಲ್ಲಿ ತನ್ನ ನಾಯಕರು ನೀಡಿದ್ದ 5,200 ಹೇಳಿಕೆಗಳು ಅನಗತ್ಯವಾಗಿದ್ದವು ಮತ್ತು 2,700 ಹೇಳಿಕೆಗಳು ಸೂಕ್ಷ್ಮ ಶಬ್ದಗಳನ್ನು ಒಳಗೊಂಡಿದ್ದವು ಎಂಬ ನಿರ್ಧಾರಕ್ಕೆ ಬಂದಿದೆ.
ಟಿವಿ ಚರ್ಚೆಯೊಂದರ ಸಂದರ್ಭ ಶರ್ಮಾರ ಅವಮಾನಕಾರಿ ಹೇಳಿಕೆಯು ಮಧ್ಯಪ್ರಾಚ್ಯದಲ್ಲಿ ಸೃಷ್ಟಿಸಿರುವ ಆಕ್ರೋಶವು ಬಿಜೆಪಿಯ ಆತ್ಮಾವಲೋಕನಕ್ಕೆ ಕಾರಣವಾಗಿದೆ ಎಂದು ಪರಿಗಣಿಸಲಾಗಿದೆ.
ಅರಬ್ ದೇಶಗಳಲ್ಲಿಯ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಭಾರತ ವಿರೋಧಿ ಪ್ರಚಾರವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಬಿಜೆಪಿಯು ತನ್ನ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾರನ್ನು ಅಮಾನತು ಮತ್ತು ಪಕ್ಷದ ದಿಲ್ಲಿ ಘಟಕದ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರ ಉಚ್ಚಾಟನೆಯನ್ನು ಮಾಡಿದೆಯಾದರೂ ಅಸಮಾಧಾನ ತಣ್ಣಗಾಗಿಲ್ಲ,ಅದು ಈಗ ದಕ್ಷಿಣ ಏಶ್ಯಾ ದೇಶಗಳಿಗೂ ಹಬ್ಬಿದೆ.
ವಿವಾದಾತ್ಮಕ ಹೇಳಿಕೆಗಳ ಕುರಿತು ಅರಬ್ ದೇಶಗಳು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ ಬಳಿಕ ಮಾಲ್ದೀವ್ಸ್,ಲಿಬಿಯಾ ಮತ್ತು ಇಂಡೋನೇಶ್ಯಾದಂತಹ ಸಣ್ಣ ರಾಷ್ಟ್ರಗಳೂ ತಮ್ಮ ಅಧಿಕೃತ ಪ್ರತಿಭಟನೆಗಳನ್ನು ದಾಖಲಿಸಿದ್ದು ಇದು ಭಾರತವನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿದೆ.
ಪ್ರವಾದಿಯವರ ಅವಮಾನಕ್ಕಾಗಿ ತೀವ್ರ ಅಸಮಾಧಾನ ಮತ್ತು ತಿರಸ್ಕಾರವನ್ನು ವ್ಯಕ್ತಪಡಿಸಿರುವ ಈ ಎಲ್ಲ ದೇಶಗಳು ಸರಕಾರದಿಂದ ಕ್ಷಮಾಯಾಚನೆಯನ್ನು ಆಗ್ರಹಿಸಿವೆ.