ತಿರುಚಿದ ವೀಡಿಯೋವನ್ನು ನಂಬಿ ಕತರ್‌ ಏರ್‌ವೇಸ್‌ ಮುಖ್ಯಸ್ಥರನ್ನು ʻಈಡಿಯಟ್‌ʼ ಎಂದು ಹೀಗಳೆದು ಪೇಚಿಗೀಡಾದ ಕಂಗನಾ

Update: 2022-06-08 10:13 GMT

ಹೊಸದಿಲ್ಲಿ: ಒಂದು ವಿಡಂಬನಾತ್ಮಕ ವೀಡಿಯೋ ಕ್ಲಿಪ್ ನೋಡಿ ಮೋಸ ಹೋದ ಬಾಲಿವುಡ್ ನಟಿ ಕಂಗನಾ ರಣೌತ್, ಕತರ್ ಏರ್‌ವೇಸ್‌ ಸಿಇಒ ಅಕ್ಬರ್‌ ಅಲ್‌ ಬಕರ್‌ ಅವರನ್ನು ʻಈಡಿಯಟ್‌ ಆಫ್‌ ಎ ಮ್ಯಾನ್‌ʼ ಎಂದು ಹೇಳುವ ಮೂಲಕ ಮತ್ತೆ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.

ಈ ನಿರ್ದಿಷ್ಟ ತಿರುಚಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪ್ರವಾದಿ ಮುಹಮ್ಮದ್‌ ರ ವಿರುದ್ಧ ನಿಂದನಾತ್ಮಕ ಹೇಳಿಕೆಯನ್ನು ಇಬ್ಬರು ಬಿಜೆಪಿ ನಾಯಕರು ನೀಡಿದ ಬೆನ್ನಲ್ಲಿ ವಿವಿಧ ರಾಷ್ಟ್ರಗಳು ಭಾರತವನ್ನು ಖಂಡಿಸಿದ ಹಿನ್ನೆಲೆಯಲ್ಲಿ ಕತರ್‌ ಏರ್‌ವೇಸ್‌ ಬಹಿಷ್ಕರಿಸುವಂತೆ ವಶುದೇವ್‌ ಎಂಬಾತ ವೀಡಿಯೋದಲ್ಲಿ ಕರೆ ನೀಡಿದ್ದ.

ʻʻಭಾರತೀಯ ದೇವರುಗಳ ನಗ್ನ ಚಿತ್ರಗಳನ್ನು ರಚಿಸಿದ ಕಲಾವಿದ ಎಂ ಎಫ್‌ ಹುಸೈನ್‌ ಅವರಿಗೆ ಕತರ್‌ ಆಶ್ರಯ ನೀಡಿತ್ತು. ಅದೇ ಕತರ್‌ ನಮಗೆ ಉಪದೇಶ ನೀಡುತ್ತಿದೆ ಆದುದರಿಂದ ಕತರ್‌ ಉತ್ಪನ್ನಗಳನ್ನು ಮತ್ತು ಕತರ್‌ ಏರ್‌ವೇಸ್‌ ಅನ್ನು ಬಹಿಷ್ಕರಿಸಬೇಕು,ʼʼಎಂದು ವಿವಾದದ ಹಿನ್ನೆಲೆಯಲ್ಲಿ ಕತರ್‌ನಲ್ಲಿ ಭಾರತೀಯ ಉದ್ಯೋಗಿಗಳನ್ನು ಕೈಬಿಡಲಾಗಿದೆ ಎಂಬ ಸುದ್ದಿಗಳನ್ನು ನಂಬಿ ಹೀಗೆ ಹೇಳಲಾಗಿದೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಇನ್ನೊಬ್ಬ ಟ್ವಿಟ್ಟರ್‌ ಬಳಕೆದಾರ ಇದಕ್ಕೆ ಪ್ರತಿಕ್ರಿಯೆಯಾಗಿ ಸ್ಪೂಫ್‌ ವೀಡಿಯೋ ಮಾಡಿ ಕತರ್‌ ಏರ್‌ವೇಸ್‌ ಮುಖ್ಯಸ್ಥರು ಅಲ್‌ ಜಝೀರಾಗೆ ನೀಡಿದ ಸಂದರ್ಶನದ ಡಬ್ಬಿಂಗ್‌ ಮಾಡಿದ್ದೇ ಅಲ್ಲದೆ ಏರ್‌ವೇಸ್‌ ಮುಖ್ಯಸ್ಥರು ಬಹಿಷ್ಕಾರ ಕರೆ ವಾಪಸ್‌ ಪಡೆಯುವಂತೆ ವೈಯಕ್ತಿಕವಾಗಿ ವಶುದೇವ್‌ಗೆ ಅಪೀಲು  ಸಲ್ಲಿಸಿದ್ದಾರೆಂಬರ್ಥ ಬರುವಂತೆ ಬಿಂಬಿಸಲಾಗಿತ್ತು.

ʻʻವಶುದೇವ್‌ ರೂ 634.50 ಹೂಡಿಕೆಯೊಂದಿಗೆ ನಮ್ಮ ಕಂಪೆನಿಯ ದೊಡ್ಡ ಷೇರುದಾರರಾಗಿದ್ದಾರೆ. ನಮಗೆ ಹೇಗೆ ಕಾರ್ಯಾಚರಿಸುವುದೆಂದು ತಿಳಿದಿಲ್ಲ. ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದ್ದೇವೆ,ʼʼಎಂದು ತಿರುಚಿದ ವೀಡಿಯೋದಲ್ಲಿ ಕತರ್‌ ಏರ್‌ವೇಸ್‌ ಮುಖ್ಯಸ್ಥರು ಹೇಳುತ್ತಿರುವಂತೆ ಬಿಂಬಿಸಲಾಗಿದೆ.

ಆದರೆ ಈ ತಿರುಚಿದ ವೀಡಿಯೋವನ್ನು ನಿಜವೆಂದೇ ನಂಬಿದ ಕಂಗನಾ ʻʻಈ ಈಡಿಯಟ್‌ಗೆ ಬಡ ವ್ಯಕ್ತಿಯನ್ನು ಹೀಗಳೆಯುವಲ್ಲಿ ಯಾವುದೇ ನಾಚಿಕೆಯಿಲ್ಲ. ವಶುದೇವ್‌ ಬಡವನಾಗಿರಬಹುದು ಹಾಗೂ ನಿಮ್ಮಂತಹ ಶ್ರೀಮಂತ ವ್ಯಕ್ತಿಗೆ ಆತ ಮುಖ್ಯವಲ್ಲದೇ ಇರಬಹುದು, ಆದರೆ ಆತನಿಗೆ ತನ್ನ ನೋವು,ನಿರಾಸೆಯನ್ನು ವ್ಯಕ್ತಪಡಿಸುವ  ಹಕ್ಕಿದೆ. ನಾವೆಲ್ಲರೂ ಸಮಾನರಾಗಿರುವ ಈ ಜಗತ್ತಿನಾಚೆಗಿನ  ಜಗತ್ತೊಂದಿದೆ ಎಂಬುದನ್ನು ಮರೆಯಬೇಡಿ,ʼʼ ಎಂದು ಕಂಗನಾ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News