105 ಗಂಟೆಗಳಲ್ಲಿ 75 ಕಿಮೀ ಉದ್ದದ ರಸ್ತೆ ನಿರ್ಮಾಣ: ಗಿನ್ನೆಸ್‌ ದಾಖಲೆ ಪುಟ ಸೇರಿದ ಭಾರತ

Update: 2022-06-08 14:13 GMT

ಹೊಸದಿಲ್ಲಿ: ಸತತವಾಗಿ ದಾಖಲೆ ಸಮಯದಲ್ಲಿ ಅತ್ಯಂತ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಭಾರತವು ಗಿನ್ನೆಸ್ ವಿಶ್ವ ದಾಖಲೆ ಪುಟವನ್ನು ಸೇರಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ,

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ರಸ್ತೆ ನಿರ್ಮಿಸಿದ ರಾಜಪಥ್ ಇನ್‌ಫ್ರಾಕಾನ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆ ಈ 75 ಕಿಮೀ  ಉದ್ದದ ರಸ್ತೆಯನ್ನು ಮಹಾರಾಷ್ಟ್ರದ ಅಮರಾವತಿ ಮತ್ತು ಅಕೋಲ ಜಿಲ್ಲೆಗಳ ನಡುವಿನ ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಏಕಪಥದಲ್ಲಿ  105 ಗಂಟೆಗಳು ಹಾಗೂ 33 ನಿಮಿಷಗಳಲ್ಲಿ ನಿರ್ಮಿಸಿದೆ. ಜೂನ್‌ 3 ರಂದು ಬೆಳಿಗ್ಗೆ 7.27ಕ್ಕೆ ಕಾಮಗಾರಿಗಳು ಆರಂಭಗೊಂಡಿದ್ದರೆ ಜೂನ್‌ 7ರಂದು ಸಂಜೆ 5 ಗಂಟೆಗೆ ಕಾಮಗಾರಿ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಮಾರು 800 ಕೆಲಸಗಾರರು ಹಾಗೂ ರಾಜಪಥ್‌ ಇನ್‌ಫ್ರಾಕಾನ್‌ ಸಂಸ್ಥೆಯ 720 ಕಾರ್ಮಿಕರು ಈ ರಸ್ತೆ ಕಾಮಗಾರಿಯಲ್ಲಿ ಭಾಗಿಯಾಗಿದ್ದರು. ಈ 75 ಕಿಮೀ ಸಿಂಗಲ್‌ ಲೇನ್‌ ರಸ್ತೆಯು 35 ಕಿಮೀ ಉದ್ದದ ದ್ವಿಪಥ ರಸ್ತೆಗೆ ಸಮನಾಗಿದೆ.

ಈ ನಿಟ್ಟಿನಲ್ಲಿ ಈ ಹಿಂದಿನ ಗಿನ್ನೆಸ್‌ ದಾಖಲೆಯನ್ನು ಕತರ್‌ನ ಅಶ್ಘಾಲ್‌ ಇಲ್ಲಿನ ಲೋಕೋಪಯೋಗಿ ಪ್ರಾಧಿಕಾರ ಹೊಂದಿತ್ತು. ಈ ಪ್ರಾಧಿಕಾರವು ಅಲ್‌ ಖೋರ್‌ ಎಕ್ಸ್‌ಪ್ರೆಸ್‌ವೇ ಭಾಗವಾಗಿ 27.25 ಕಿಮೀ ಉದ್ದದ ರಸ್ತೆಯನ್ನು 10 ದಿನಗಳಲ್ಲಿ ಪೂರೈಸಿತ್ತು. ಈ ದಾಖಲೆಯನ್ನು ಫೆಬ್ರವರಿ 27, 2019ರಂದು ನಿರ್ಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News