ಸುದ್ದಿ ವಾಹಿನಿಗಳ ಬೇಜವಾಬ್ದಾರಿ ವರ್ತನೆ ದೇಶವನ್ನು ಮುಜುಗರಕ್ಕೀಡು ಮಾಡಿದೆ: ಎಡಿಟರ್ಸ್ ಗಿಲ್ಡ್

Update: 2022-06-08 11:16 GMT
ನೂಪುರ್ ಶರ್ಮಾ (Photo Credit: Twitter/@NupurSharmaBJP)

ಹೊಸದಿಲ್ಲಿ: ಕೆಲವು ಸುದ್ದಿ ವಾಹಿನಿಗಳ ಬೇಜವಾಬ್ದಾರಿ ವರ್ತನೆ ದೇಶಕ್ಕೆ ಮುಜುಗರ ತಂದಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಬುಧವಾರ ಹೇಳಿದೆ.

ಮೇ 26 ರಂದು ಟೆಲಿವಿಷನ್ ಚಾನೆಲ್ ಟೈಮ್ಸ್ ನೌನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಎಡಿಟರ್ಸ್‌ ಗಿಲ್ಡ್‌ ಸಂಸ್ಥೆ ಈ ಹೇಳಿಕೆ ನೀಡಿದೆ.

ನೂಪುರ್‌ ಶರ್ಮಾ ಹೇಳಿಕೆಯನ್ನು ಖಂಡಿಸಲು ಹಲವಾರು ಮುಸ್ಲಿಂ ರಾಷ್ಟ್ರಗಳು ಭಾರತೀಯ ರಾಯಭಾರಿಗಳನ್ನು ಕರೆಸಿವೆ. ಈ ಕೆಲವು ದೇಶಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆಯನ್ನೂ ನೀಡಿದ್ದಾರೆ.

ಈ ವಿವಾದಾತ್ಮಕ ಹೇಳಿಕೆಯು ಜೂನ್ 3 ರಂದು ಕಾನ್ಪುರದಲ್ಲಿ ಹಿಂಸಾಚಾರವನ್ನು ಹುಟ್ಟುಹಾಕಿದ್ದು, ಇದರಿಂದ ಕನಿಷ್ಠ 40 ಜನರು ಗಾಯಗೊಂಡಿದ್ದರು.

“ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಕೋಮು ಪರಿಸ್ಥಿತಿಯನ್ನು ನಿಭಾಯಿಸಲು ಹೊರಡಿಸಿದ ಪತ್ರಿಕೋದ್ಯಮ ನೀತಿಗಳು ಮತ್ತು ಮಾರ್ಗಸೂಚಿಗಳು ಹಾಗೂ ಜಾತ್ಯತೀತತೆಗೆ ರಾಷ್ಟ್ರದ ಸಾಂವಿಧಾನಿಕ ಬದ್ಧತೆಯ ಕುರಿತು ಕೆಲವು ಟಿವಿ ಚಾನೆಲ್‌ಗಳು ಗಮನಹರಿಸಿದ್ದರೆ, ದೇಶಕ್ಕೆ ಅನಗತ್ಯ ಮುಜುಗರ ಉಂಟು ಮಾಡಿದ ಘಟನೆಯನ್ನು ತಪ್ಪಿಸಬಹುದಿತ್ತು” ಎಂದು ಎಡಿಟರ್ಸ್‌ ಗಿಲ್ಡ್‌ ಹೇಳಿದೆ. 

ಕೆಲವು ಸುದ್ದಿ ವಾಹಿನಿಗಳು ಉದ್ದೇಶಪೂರ್ವಕವಾಗಿ ದುರ್ಬಲ ಸಮುದಾಯಗಳನ್ನು ಗುರಿಯಾಗಿಸುವ ಸನ್ನಿವೇಶಗಳನ್ನು ಸೃಷ್ಟಿಸಿವೆ ಎಂದು ಪತ್ರಿಕಾ ಸಂಸ್ಥೆ ಹೇಳಿದೆ.

"ಈ ಚಾನೆಲ್‌ಗಳು ವಿರಾಮ ತೆಗೆದುಕೊಂಡು, ವಿಭಜಕ ಮತ್ತು ವಿಷಕಾರಿ ಧ್ವನಿಗಳಿಗೆ ನ್ಯಾಯಸಮ್ಮತತೆಯನ್ನು ನೀಡುವ ಮೂಲಕ ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ವಿಮರ್ಶಾತ್ಮಕ ನೋಟವನ್ನು ತೆಗೆದುಕೊಳ್ಳಬೇಕು ಎಂದು (ಎಡಿಟರ್ಸ್ ಗಿಲ್ಡ್) ಒತ್ತಾಯಿಸುತ್ತದೆ" ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News