ಇಸ್ಲಾಮಿಕ್‌ ದೇಶಗಳನ್ನು ಪ್ರಚೋದಿಸಿದ ಜನರ ಪಟ್ಟಿ ಮಾಡಿ ದೇಶದ್ರೋಹ ಆರೋಪ ಹೊರಿಸಿ: ಮಾಹಿತಿ ಆಯುಕ್ತ ಉದಯ್ ಮಹುಕರ್

Update: 2022-06-08 15:29 GMT

ಹೊಸದಿಲ್ಲಿ: ಸುದ್ದಿವಾಹಿನಿಯೊಂದರ ಚರ್ಚೆಯ ವೇಳೆ ಪ್ರವಾದಿ ಮುಹಮ್ಮದ್‌ ರನ್ನು ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಲವಾರು ಇಸ್ಲಾಮಿಕ್‌ ರಾಷ್ಟ್ರಗಳು ಈ ಕುರಿತು ಖಂಡನೆ ವ್ಯಕ್ತಪಡಿಸಿತ್ತು. ಇದೀಗ ಈ ಕುರಿತು "ಇಸ್ಲಾಮಿಕ್‌ ರಾಷ್ಟ್ರಗಳನ್ನು ಪ್ರಚೋದಿಸಿದ ಜನರನ್ನು ಪಟ್ಟಿ ಮಾಡಿ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಬೇಕು" ಎಂದು ಭಾರತದ ಮಾಹಿತಿ ಆಯುಕ್ತರು ಟ್ವಿಟರ್‌ ನಲ್ಲಿ ಹೇಳಿದ್ದಾಗಿ newslaubdry ,com ವರದಿ ಮಾಡಿದೆ.

ಮಾಹಿತಿ ಆಯುಕ್ತ ಉದಯ್‌ ಮಹೂರ್ಕರ್‌ ಅವರು, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್‌ ರಾಷ್ಟ್ರಗಳನ್ನು ಪ್ರಚೋದಿಸಿದ ನಾಗರಿಕರ ಹೆಸರನ್ನು ಪಟ್ಟಿ ಮಾಡಬೇಕು ಮತ್ತು ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಬೇಕು" ಎಂದು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ. 

ಉದಯ್‌ ಮಹೂರ್ಕರ್‌ ರವರು ಮಾಜಿ ಪತ್ರಕರ್ತರಾಗಿದ್ದು, ಅವರು ಇಂಡಿಯಾ ಟುಡೇ ನಿಯತಕಾಲಿಕದ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. 2020ರಲ್ಲಿ ಅವರು ಮಾಹಿತಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವವರೆಗೆ ಸುಮಾರು 30 ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಸಿದ್ದರು. ಸರಕಾರದ ಅವರ ಅಧಿಕೃತ ಪರಿಚಯದಲ್ಲಿ, ಅವರು ʼರ್ಯಾಡಿಕಲ್‌ ಇಸ್ಲಾಮಿಕ್‌ ಚಳುವಳಿಗಳುʼ ಹಾಗೂ ʼಧಾರ್ಮಿಕ ಸಂಘರ್ಷದ ಕಾರಣಗಳುʼ ವಿಷಯದಲ್ಲಿ ಪರಿಣಿತಿ ಹೊಂದಿದ್ದಾರೆಂದು ಉಲ್ಲೇಖಿಸಲಾಗಿದೆ. 

"ಪ್ರವಾದಿ ವಿವಾದದ ಬಗ್ಗೆ ರಾಷ್ಟ್ರವು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳನ್ನು ಪ್ರಚೋದಿಸಿದ ಭಾರತೀಯ ನಾಗರಿಕರನ್ನು ಪಟ್ಟಿ ಮಾಡಿ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಲು ಸರಕಾರಕ್ಕೆ ಇದು ಸರಿಯಾದ ಸಮಯ. ಅವರದ್ದು ದೇಶ ವಿರೋಧಿ ಕೃತ್ಯವಾಗಿದೆ. ನಿಯಮವೊಂದನ್ನು ತಂದು ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಬಹುದು" ಎಂದು ಟ್ವಿಟರ್‌ ನಲ್ಲಿ ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News