ಭಾರತಕ್ಕೆ ಕನಿಷ್ಠ ಸ್ಥಾನ ನೀಡಿರುವ ಪರಿಸರ ಕಾರ್ಯಕ್ಷಮತೆ ಸೂಚಿ ಅವೈಜ್ಞಾನಿಕವಾಗಿದೆ: ಭಾರತ ಪ್ರತಿಕ್ರಿಯೆ
ಹೊಸದಿಲ್ಲಿ,ಜೂ.8: 180 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಕನಿಷ್ಠ ಸ್ಥಾನವನ್ನು ನೀಡಿರುವ ಪರಿಸರ ಕಾರ್ಯಕ್ಷಮತೆ ಸೂಚಿ 2022 ಅನ್ನು ಬುಧವಾರ ತಿರಸ್ಕರಿಸಿರುವ ಕೇಂದ್ರ ಪರಿಸರ ಸಚಿವಾಲಯವು,ಅದು ಬಳಸಿರುವ ಕೆಲವು ಸೂಚಕಗಳು ಬಹಿರ್ಗಣಿಸಲ್ಪಟ್ಟಿವೆ ಹಾಗೂ ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಆಧರಿಸಿವೆ ಎಂದು ಹೇಳಿದೆ.
ಯೇಲ್ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಲಾ ಆ್ಯಂಡ್ ಪಾಲಿಸಿ ಮತ್ತು ಕೋಲಂಬಿಯಾ ವಿವಿಯ ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಅರ್ತ್ ಸೈನ್ಸ್ ಇನ್ಫಾರ್ಮೇಷನ್ ನೆಟ್‌ವರ್ಕ್ ಇತ್ತೀಚಿಗೆ ಪ್ರಕಟಿಸಿರುವ 2022ರ ಪರಿಸರ ಕಾರ್ಯಕ್ಷಮತೆ ಸೂಚಿ (ಇಪಿಐ)ಯು 11 ವಿಷಯ ವರ್ಗಗಳಲ್ಲಿ 40 ಕಾರ್ಯಕ್ಷಮತೆ ಸೂಚಕಗಳನ್ನು ಬಳಸಿಕೊಂಡು ಹವಾಮಾನ ಬದಲಾವಣೆ ನಿರ್ವಹಣೆ,ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ತಾಳಿಕೆ ಕುರಿತು ದೇಶಗಳಿಗೆ ಶ್ರೇಯಾಂಕಗಳನ್ನು ನೀಡುತ್ತದೆ.
ಇತ್ತಿಚಿಗೆ ಬಿಡುಗಡೆಗೊಂಡ ಇಪಿಐ ಯಾವುದೇ ಆಧಾರವಿಲ್ಲದ ಮತ್ತು ಊಹೆಗಳನ್ನು ಅವಲಂಬಿಸಿರುವ ಹಲವಾರು ಸೂಚಕಗಳನ್ನು ಹೊಂದಿದೆ. ಬಳಕೆಯಾಗಿರುವ ಕೆಲವು ಸೂಚಕಗಳು ಬಹಿರ್ಗಣಿಸಲ್ಪಟ್ಟಿವೆ ಹಾಗೂ ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಆಧರಿಸಿವೆ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
‘2050ರಲ್ಲಿ ಪ್ರಕ್ಷೇಪಿತ ಹಸಿರುಮನೆ ಅನಿಲ ಹೊರಸೂಸುವಿಕೆ ಮಟ್ಟಗಳು ’ ಹವಾಮಾನ ನೀತಿ ವಸ್ತುನಿಷ್ಠತೆಯಲ್ಲಿ ಹೊಸ ಸೂಚಕವಾಗಿದೆ. ಇದನ್ನು ಆಯಾ ದೇಶಗಳ ದೀರ್ಘಾವಧಿ,ನವೀಕರಿಸಬಹುದಾದ ಶಕ್ತಿಯ ಸಾಮಥ್ಯ ಮತ್ತು ಬಳಕೆಯ ಪ್ರಮಾಣ,ಕಾರ್ಬನ್ ಸಿಂಕ್‌ಗಳು ಅಥವಾ ವಾತಾವರಣದಿಂದ ಹೆಚ್ಚುವರಿ ಇಂಗಾಲವನ್ನು ಹೀರಿಕೊಳ್ಳುವ ಅರಣ್ಯ,ಮಹಾಸಾಗರ ಮತ್ತು ಇತರ ನೈಸರ್ಗಿಕ ಪರಿಸರಗಳು,ಶಕ್ತಿ ಕ್ಷಮತೆ ಇತ್ಯಾದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ವಿಧಾನದ ಬದಲು ಹಿಂದಿನ 10 ವರ್ಷಗಳ ಹೊರಸೂಸುವಿಕೆಯಲ್ಲಿ ಬದಲಾವಣೆಯ ಸರಾಸರಿ ದರದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ ಎಂದು ಹೇಳಿರುವ ಸಚಿವಾಲಯವು,ಇಪಿಐ 2050ರ ಮಟ್ಟಗಳನ್ನು ಅಂದಾಜಿಸುವಾಗ ದೇಶದಲ್ಲಿಯ ನಿರ್ಣಾಯಕ ಕಾರ್ಬನ ಸಿಂಕ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಬೆಟ್ಟು ಮಾಡಿದೆ.
ಭಾರತವು ಉತ್ತಮ ಸಾಧನೆಯನ್ನು ತೋರಿಸಿರುವ ಸೂಚಕಗಳಿಗೆ ಅಂಕಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಇಂತಹ ಬದಲಾವಣೆಗೆ ವರದಿಯಲ್ಲಿ ಯಾವುದೇ ಕಾರಣವನ್ನು ನೀಡಲಾಗಿಲ್ಲ ಎಂದು ಸಚಿವಾಲಯವು ಹೇಳಿದೆ.