ಇಂತಹ ಅಪರಾಧಗಳು ಬಿಜೆಪಿಯಿಂದ ನಡೆಯುತ್ತಿವೆಯೇ ಹೊರತು ದೇಶದಿಂದಲ್ಲ: ಪ್ರವಾದಿ ನಿಂದನೆ ಕುರಿತು ಠಾಕ್ರೆ ಪ್ರತಿಕ್ರಿಯೆ
Update: 2022-06-08 23:40 IST
ಮುಂಬೈ: ಕಳೆದ ತಿಂಗಳು ದೂರದರ್ಶನದ ಚರ್ಚೆಯೊಂದರಲ್ಲಿ ಪ್ರವಾದಿ ಮಹಮ್ಮದರ ಕುರಿತು ವಿವಾದಾತ್ಮಕ ಹೇಳಿಕೆಗಳಿಗಾಗಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಟೀಕಿಸಿದ್ದಾರೆ.
ಔರಂಗಾಬಾದ್‌ನ ಸಂಭಾಜಿನಗರದಲ್ಲಿ ಶಿವಸೇನೆಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, “ಬಿಜೆಪಿ ವಕ್ತಾರರು ಹೇಳಿದ್ದು ಅಸಂಬದ್ಧ. ಆಕೆ ಪ್ರವಾದಿಯನ್ನು ಅವಮಾನಿಸಿದಳು... ಅದರ ಅಗತ್ಯವೇನಿತ್ತು? ನಮ್ಮ ದೇವರ ವಿರುದ್ಧ ಯಾರಾದರೂ ಮಾತನಾಡಿದರೆ ನೀವು ಒಪ್ಪುತ್ತೀರ? ಬಿಜೆಪಿ ವಕ್ತಾರರಿಂದಾಗಿ ಇಡೀ ದೇಶವೇ ಅವಮಾನಕ್ಕೊಳಗಾಗಿದೆ. ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳು ನಮ್ಮ ಮೇಲೆ ತೀವ್ರವಾಗಿ ಇಳಿದಿದ್ದು, ಕ್ಷಮೆ ಕೇಳುವಂತೆ ಒತ್ತಾಯಿಸಿವೆ. ಬಿಜೆಪಿಯ ನಿಲುವು ದೇಶದ ನಿಲುವಲ್ಲ. ಇಂತಹ ಅಪರಾಧಗಳು ಬಿಜೆಪಿಯಿಂದ ನಡೆಯುತ್ತಿವೆಯೇ ಹೊರತು ದೇಶದಿಂದಲ್ಲ. ನಾವೇಕೆ ಕ್ಷಮೆ ಕೇಳಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.