ರಣಜಿ ಪಂದ್ಯ: ಬಂಗಾಳದ 9 ಆಟಗಾರರಿಂದ 50ಕ್ಕೂ ಅಧಿಕ ರನ್, 129 ವರ್ಷ ಹಳೆಯ ಜಾಗತಿಕ ದಾಖಲೆ ಪತನ

Update: 2022-06-09 13:41 GMT

 ಬೆಂಗಳೂರು, ಜೂ.9: ಬಂಗಾಳದ ರಣಜಿ ಟ್ರೋಫಿ ತಂಡ ಗುರುವಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಾಗತಿಕ ದಾಖಲೆಯೊಂದನ್ನು ನಿರ್ಮಿಸಿತು. ಜಾರ್ಖಂಡ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳದ ಎಲ್ಲ 9 ಬ್ಯಾಟರ್‌ಗಳು 50ಕ್ಕೂ ಅಧಿಕ ರನ್ ಗಳಿಸಿ 129 ವರ್ಷ ಹಳೆಯ ದಾಖಲೆ ಪತನವಾಗಲು ನೆರವಾದರು.

ಮೂರನೇ ದಿನವಾದ ಗುರುವಾರ ಬಂಗಾಳ ತಂಡವು ಬ್ಯಾಟರ್‌ಗಳ ಅದ್ಭುತ ಸಾಧನೆಯ ನೆರವಿನಿಂದ ಜಾರ್ಖಂಡ್ ವಿರುದ್ಧ ತನ್ನ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 773 ರನ್ ಗಳಿಸಿತು. ದಿನದಾಟದಂತ್ಯಕ್ಕೆ ಜಾರ್ಖಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಇದೀಗ 634 ರನ್ ಹಿನ್ನಡೆಯಲ್ಲಿರುವ ಜಾರ್ಖಂಡ್ ತಂಡ ಬಂಗಾಳವನ್ನು ಸೆಮಿ ಫೈನಲ್ ಪ್ರವೇಶಿಸುವುದನ್ನು ತಡೆಗಟ್ಟಲು ಅಸಾಮಾನ್ಯ ಸಾಧನೆ ಮಾಡಬೇಕಾಗಿದೆ.

ಈ ಪಂದ್ಯವು ದಾಖಲೆಯ ಮೂಲಕ ಸದಾ ಕಾಲ ನೆನಪಿನಲ್ಲಿ ಉಳಿಯಲಿದೆ. 1893ರಲ್ಲಿ ಕಂಬೈನ್ಡ್ ಯುನಿವರ್ಸಿಟಿ(ಆಕ್ಸ್‌ಫರ್ಡ್ ಹಾಗೂ ಕ್ಯಾಂಬ್ರಿಡ್ಜ್)ವಿರುದ್ಧದ ಪ್ರಥಮ ದರ್ಜೆ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ತಂಡದ 8 ಬ್ಯಾಟರ್‌ಗಳು ಅರ್ಧಶತಕ ಇಲ್ಲವೇ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದರು.

 ಬಂಗಾಳದ ನಾಯಕ ಅಭಿಮನ್ಯು ಈಶ್ವರನ್(65 ರನ್)ಸಹ ಆರಂಭಿಕ ಅಭಿಷೇಕ್ ರಮಣ್(61 ರನ್)ಜೊತೆಗೂಡಿ ಮೈಲಿಗಲ್ಲಿಗೆ ಅಡಿಪಾಯ ಹಾಕಿದರು.ಆನಂತರ ಸುದೀಪ್ ಘರಮಿ(186 ರನ್)ಹಾಗೂ ಹಿರಿಯ ಬ್ಯಾಟರ್ ಅನುಶ್ ಮಜುಂದಾರ್(117 ರನ್)ಎರಡನೇ ವಿಕೆಟ್‌ಗೆ 243 ರನ್ ಸೇರಿಸಿದರು.

ಬಂಗಾಳದ ಜೂನಿಯರ್ ಕ್ರೀಡಾ ಸಚಿವ ಮನೋಜ್ ತಿವಾರಿ(73 ರನ್) ಅವರು ಅಭಿಷೇಕ್ ಪೊರೆಲ್(68 ರನ್)ಜೊತೆಗೂಡಿ ಪಟ್ಟಿಗೆ ತನ್ನ ಹೆಸರನ್ನೂ ಸೇರಿಸಿದರು. ಆರ್‌ಸಿಬಿ ಆಲ್‌ರೌಂಡರ್ ಶಹಬಾಝ್ ಅಹ್ಮದ್(78 ರನ್)ಹಾಗೂ ಸಯಾನ್ ಮಂಡಲ್(53 ರನ್)ಕೂಡ ಅರ್ಧಶತಕ ಸಿಡಿಸಿದರು.ಆಕಾಶ್ ದೀಪ್ 18 ಎಸೆತಗಳಲ್ಲಿ 8 ಸಿಕ್ಸರ್‌ಗಳ ಸಹಿತ 53 ರನ್ ಗಳಿಸುವುದರೊಂದಿಗೆ 129 ವರ್ಷಗಳ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನ ಜಾಗತಿಕ ದಾಖಲೆಯನ್ನು ಮುರಿಯಲು ನೆರವಾದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News