ನಮ್ಮನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ: ಸಿಎಎ ವಿರೋಧಿ ಪ್ರತಿಭಟನಾಕಾರರ ಅಳಲು

Update: 2022-06-11 14:01 GMT

ಹೊಸದಿಲ್ಲಿ,ಜೂ.11: ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಪ್ರತಿಭಟನೆಗಳು ಶುಕ್ರವಾರ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಉತ್ತರ ಪ್ರದೇಶ ಪೊಲೀಸರು 100ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ.

ಪ್ರಯಾಗರಾಜ್ ಯೊಂದರಲ್ಲೇ ಶುಕ್ರವಾರ ತಡರಾತ್ರಿಯವರೆಗೆ ಸುಮಾರು 40 ಜನರನ್ನು ಬಂಧಿಸಲಾಗಿದೆ. ಖುಲ್ದಾಬಾದ್ ಮತ್ತು ಕರೇಲಿ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ 36 ಜನರನ್ನು ಗುರುತಿಸಲಾಗಿದ್ದು,1,000 ಜನರನ್ನು ಅಪರಿಚಿತರು ಎಂದು ಹೆಸರಿಸಲಾಗಿದೆ.

‘ಪ್ರಮುಖ ಆರೋಪಿಗಳ’ಪೈಕಿ 10 ಜನರ ಬಂಧನಕ್ಕಾಗಿ ಪೊಲೀಸ್ ತಂಡಗಳು ಹಲವಾರು ಕಡೆ ದಾಳಿಗಳನ್ನು ನಡೆಸಿವೆ. ಪೊಲೀಸರು ಹೊರಡಿಸಿರುವ ಆರೋಪಿಗಳ ಪಟ್ಟಿಯು 2019ರಲ್ಲಿ ಸಿಎಎ ವಿರುದ್ಧ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ಪ್ರಮುಖರ ಹೆಸರುಗಳನ್ನು ಒಳಗೊಂಡಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕರು, ವಿದ್ಯಾರ್ಥಿ ಕಾರ್ಯಕರ್ತರು ಮತ್ತು ಎಡಪಕ್ಷಗಳ ಕಾಯಕರ್ತರು ಪಟ್ಟಿಯಲ್ಲಿರುವ ಇತರ ಆರೋಪಿಗಳಾಗಿದ್ದಾರೆ ಎಂದು thewire.in ವರದಿ ಮಾಡಿದೆ.

ಆರೋಪಿಗಳ ಪಟ್ಟಿಯಲ್ಲಿ ಅಟಾಲಾ ಬಡಿ ಮಸೀದಿಯ ಇಮಾಂ ಅಲಿ ಅಹ್ಮದ್, ಎಐಎಂಐಎಂ ಜಿಲ್ಲಾಧ್ಯಕ್ಷ ಶಾ ಆಲಮ್ ಮತ್ತು ನಾಯಕ ಝೀಶನ್ ರಹಮಾನಿ,ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದ ಸಾಮಾಜಿಕ ಕಾರ್ಯಕರ್ತೆ ಸಾರಾ ಅಹ್ಮದ್, ಎಡಪಕ್ಷಗಳ ನಾಯಕರಾದ ಡಾ.ಆಶಿಷ್ ಮಿತ್ತಲ್ ಮತ್ತು ಅಲಿ ಅಹ್ಮದ್ ಅವರು ಹೆಸರುಗಳಿವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಪ್ರಯಾಗರಾಜ್ ಎಡಿಜಿ ಪ್ರೇಮಪ್ರಕಾಶ ಅವರು, ಈ ‘ಸುವ್ಯವಸ್ಥಿತ ಹಿಂಸಾಚಾರ’ದ ಹಿಂದಿರುವ ಇನ್ನೂ ಹಲವರನ್ನು ಗುರುತಿಸಲಾಗಿದೆ ಎಂದಿದ್ದಾರೆ.

ಸಮಾಜವಾದಿ ಪಾರ್ಟಿಯ ನಾಯಕರನ್ನೂ ಪೊಲೀಸರು ಹೆಸರಿಸಿದ್ದಾರೆ ಎನ್ನಲಾಗಿದೆ.

ಹಿಂಸಾಚಾರಕ್ಕೆ ಹೊಣೆಯಾಗಿದ್ದವರ ವಿರುದ್ಧ ಗೂಂಡಾ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮವನ್ನು ಜರುಗಿಸಲಾಗುವುದು. ಇದರ ಜೊತೆಗೆ ಅಟಾಲಾ ಪ್ರದೇಶದಲ್ಲಿ ಅಕ್ರಮ ನಿರ್ಮಾಣಗಳನ್ನು ಗುರುತಿಸಿದ ಬಳಿಕ ಅವುಗಳನ್ನು ನೆಲಸಮಗೊಳಿಸಲಾಗುವುದು ಎಂದು ಪ್ರೇಮಪ್ರಕಾಶ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ಶುಕ್ರವಾರ ತಡರಾತ್ರಿ ವೆಲ್ಫೇರ್ ಪಕ್ಷದ ನಾಯಕ ಜಾವೇದ್ ಮುಹಮ್ಮದ್, ಅವರ ಪತ್ನಿ ಪರ್ವೀನ್ ಮತ್ತು ಪುತ್ರಿ ಸುಮಯ್ಯ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತುರ್ತು ಹಸ್ತಕ್ಷೇಪವನ್ನು ಕೋರಿ ಮುಹಮ್ಮದ್ ರ ಇನ್ನೋರ್ವ ಪುತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಫ್ರೀನ್ ಫಾತಿಮಾ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಪೊಲೀಸರು ಯಾವುದೇ ವಾರಂಟ್ ಇಲ್ಲದೆ ತನ್ನ ಕುಟುಂಬ ಸದಸ್ಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಳೆದ ಹಲವಾರು ಗಂಟೆಗಳಿಂದಲೂ ಅವರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ತಮಗೆ ಸಾಧ್ಯವಾಗಿಲ್ಲ ಎಂದಿದ್ದಾರೆ.

ಶುಕ್ರವಾರ ರಾತ್ರಿ ತಮ್ಮ ನಿವಾಸಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಗಳ ತಂಡವು ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸದೆ ಠಾಣೆಗೆ ಬರುವಂತೆ ತನ್ನ ಕುಟುಂಬ ಸದಸ್ಯರಿಗೆ ಸೂಚಿಸಿದ್ದರು. ಅವರು ನಿರಾಕರಿಸಿದಾಗ ಮನೆಯನ್ನು ತೆರವುಗೊಳಿಸುವಂತೆ ಮತ್ತು ಬೀಗ ಹಾಕುವಂತೆ ಪೊಲೀಸ್ ಅಧಿಕಾರಿಗಳು ಹೇಳಿದ್ದರು ಎಂದು ಅಫ್ರೀನ್ The Wireಗೆ ತಿಳಿಸಿದರು.

ಹಿಂಸಾಚಾರಕ್ಕೆ ಎರಡು ದಿನಗಳ ಮುನ್ನ ಪೊಲೀಸರು ತನ್ನ ತಂದೆಯ ವಿರುದ್ಧ ಐಪಿಸಿಯ ಕಲಂ 107 (ಪ್ರಚೋದನೆ)ರಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಗರದಲ್ಲಿ ಏನಾದರೂ ಸಂಭವಿಸಿದರೆ ತನ್ನ ತಂದೆಯನ್ನು ಹೊಣೆಯಾಗಿಸಿ ಬಂಧಿಸುವುದು ಇದರ ಉದ್ದೇಶವಾಗಿತ್ತು ಎಂದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಾರಾ ಅಹ್ಮದ್, "ನನಗೆ ಪ್ರತಿಭಟನೆಯ ಬಗ್ಗೆ ಗೊತ್ತೇ ಇರಲಿಲ್ಲ, ಆದರೂ ಪೊಲೀಸರು ನನ್ನನ್ನು ಪ್ರತಿಭಟನೆಯ ರೂವಾರಿಯಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ನಾನು ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಹಲವಾರು ಜನರು ಕರೆ ಮಾಡಿ ಪ್ರಕರಣದಲ್ಲಿ ಮುಖ್ಯ ಸಂಚುಕೋರಳಾಗಿ ನನ್ನನ್ನು ಹೆಸರಿಸಲಾಗಿದೆ ಎಂದು ತಿಳಿಸಿದ್ದರು. ಹಲವಾರು ಸುದ್ದಿವಾಹಿನಿಗಳು ನನ್ನ ಹೆಸರಿನೊಂದಿಗೆ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದಕ್ಕಾಗಿ ನಮ್ಮನ್ನು ಗುರಿ ಮಾಡಲಾಗುತ್ತಿದೆ. ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಪ್ರತಿಭಟನೆಗೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News