ನಾಗಾಲ್ಯಾಂಡ್ ಹೊಂಚುದಾಳಿ ಪ್ರಕರಣ: ಪೊಲೀಸ್ ಆರೋಪ ಪಟ್ಟಿಯಲ್ಲಿ 30 ಯೋಧರ ಹೆಸರು

Update: 2022-06-11 17:13 GMT

ಗುವಾಹತಿ, ಜೂ. 11: ಕಳೆದ ವರ್ಷ 14 ನಾಗರಿಕರ ಸಾವಿಗೆ ಕಾರಣವಾದ ಹೊಂಚು ದಾಳಿ ಕುರಿತು ನಾಗಾಲ್ಯಾಂಡ್ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸೇನೆಯ ವಿಶೇಷ ಪಡೆಗಳ 30 ಯೋಧರು ಹೆಸರುಗಳನ್ನು ಉಲ್ಲೇಖಿಲಾಗಿದೆ.

ನಮ್ಮ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಓರ್ವ ಸೇನಾಧಿಕಾರಿ ಹಾಗೂ 29 ಮಂದಿ ಯೋಧರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ರಾಜ್ಯ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.

ಪಿಕ್‌ಅಪ್ ಟ್ರಕ್‌ನಲ್ಲಿ ರಾತ್ರಿ ಮನೆಗೆ ಹಿಂದಿರುಗುತ್ತಿದ್ದ 14 ಮಂದಿ ನಾಗರಿಕರನ್ನು ಹೊಂಚು ದಾಳಿ ನಡೆಸಿ ಹತ್ಯೆ ನಡೆಸಿದ ಸಂದರ್ಭ 21 ಪ್ಯಾರಾ ವಿಶೇಷ ಪಡೆಯ ಯೋಧರು ಪ್ರಮಾಣಿತ ಕಾರ್ಯ ವಿಧಾನವನ್ನು ಅನುಸರಿಸಿಲ್ಲ ಎಂದು ಎಸ್‌ಐಟಿಯ ತನಿಖೆ ಸೂಚಿಸಿದೆ.

ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಯೋಧರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಮತಿ ನೀಡುವಂತೆ ನಾಗಾಲ್ಯಾಂಡ್ ಸರಕಾರ ಕೇಂದ್ರ ಸರಕಾರವನ್ನು ಕೋರಿದೆ. ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿ ರಾಜ್ಯ ಪೊಲೀಸರು ರಕ್ಷಣಾ ಸಚಿವಾಲಯಕ್ಕೆ ಪತ್ರ ರವಾನಿಸಿದ್ದಾರೆ.

ಸೇನೆಯ ತನಿಖಾ ನ್ಯಾಯಾಲಯದ ಭಾಗವಾದ ಪ್ರತ್ಯೇಕ ಸೇನಾ ತಂಡ ಕೂಡ ಈ ಘಟನೆ ಕುರಿತು ತನಿಖೆ ನಡೆಸುತ್ತಿದೆ. ತನಿಖಾ ನ್ಯಾಯಾಲಯದ ತಂಡದ ನೇತೃತ್ವ ವಹಿಸಿದ ಮೇಜರ್ ಜನರಲ್ ಅವರು ಈಗಾಗಲೇ ಓಟಿಂಗ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ, ಘಟನೆ ನಡೆಯಲು ಕಾರಣವಾದ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಲು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಡಿಸೆಂಬರ್ 4ರಂದು ನಾಗಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು-ಒಟಿಂಗ್ ರಸ್ತೆಯಲ್ಲಿ ಬರುತ್ತಿದ್ದ ಟ್ರಕ್‌ನಲ್ಲಿ ರೈಫಲ್‌ಗಳನ್ನು ನೋಡಿರುವುದಾಗಿ 21 ಪಾರಾ ವಿಶೇಷ ಪಡೆಗಳ ಘಟಕ ಭಾವಿಸಿ ಭಯಾನಕ ಹೊಂಚು ದಾಳಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News