ಕೆಲಸಕ್ಕೆ ಹೋಗುವಂತೆ ಒತ್ತಾಯ: ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ
ಜಬಲ್ಪುರ, ಜೂ. 11: ಕೆಲಸಕ್ಕೆ ಹೋಗುವಂತೆ ನಿರಂತರ ಒತ್ತಾಯ ಮಾಡುತ್ತಿದ್ದ ಪತ್ನಿಯನ್ನು ಪತಿ ಕತ್ತರಿಯಿಂದ ಇರಿದು ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಜಬಲ್ಪುರದಲ್ಲಿರುವ ತಮ್ಮ ಮನೆಯಲ್ಲಿ ವಿಭೋರ್ ಸಾಹು (30) ಹಾಗೂ ಅವರ ಪತ್ನಿ ರಿಟ್ಜು (23) ಅವರ ಮೃತದೇಹ ಪತ್ತೆಯಾಗಿದೆ ಎಂದು ರಂಝಿ ಪೊಲೀಸ್ ಠಾಣೆಯ ಉಸ್ತುವಾರಿ ಸಹದೇವ್ರಂ ಸಾಹು ತಿಳಿಸಿದ್ದಾರೆ.
ಘಟನೆ ನಡೆಯುವ ಸಂದರ್ಭ ವಿಭೋರ್ ಸಾಹು ಅವರ ತಾಯಿ ಹಾಗೂ ಸಹೋದರ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅವರು ಹಿಂದಿರುಗಿ ಬಂದಾಗ ಮನೆಯಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಭೋರ್ ಸಾಹು ಚಾಲಕ. ಆತ ಕಳೆದ 15 ದಿನಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಪತ್ನಿ ಕೆಲಸಕ್ಕೆ ಹೋಗುವಂತೆ ಹಾಗೂ ಜೀವನ ನಿರ್ವಹಣೆಗೆ ಸಂಪಾದನೆ ಮಾಡುವಂತೆ ಮತ್ತೆ ಮತ್ತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖಾ ವರದಿ ಹೇಳಿದೆ. ಇಬ್ಬರ ನಡುವೆ ವಾಗ್ವಾದ ನಡೆದ ಬಳಿಕ ವಿಭೂರ್ ಸಾಹು ಪತ್ನಿಯನ್ನು ಕತ್ತರಿಯಿಂದ ಇರಿದು ಹತ್ಯೆಗೈದಿದ್ದಾನೆ. ಅನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.