ಉತ್ತರಪ್ರದೇಶ: ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ; 227 ಮಂದಿಯ ಬಂಧನ

Update: 2022-06-11 17:56 GMT

ಲಕ್ನೋ, ಜೂ. 11: ಪ್ರವಾದಿ ಅವರ ನಿಂದನೆ ವಿರೋಧಿಸಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಿಂದ ಒಟ್ಟು 227 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಕ್ನೋದಲ್ಲಿ ಶನಿವಾರ ಹೇಳಿಕೆ ಬಿಡುಗಡೆ ಮಾಡಿದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಹಾಗೂ ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು, ‘‘ಶುಕ್ರವಾರದ ಹಿಂಸಾಚಾರಕ್ಕೆ ಸಂಬಂಧಿಸಿ ರಾಜ್ಯದಲ್ಲಿ 227 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಯಾಗ್‌ರಾಜ್‌ನ 68, ಹಾಥರಸ್‌ನ 50, ಶಹರಣಪುರದ 48, ಅಂಬೇಡ್ಕರ್‌ನಗರದ 28, ಮೊರದಾಬಾದ್‌ನ 25 ಹಾಗೂ ಫಿರೋಝಾಬಾದ್‌ನ 8 ಮಂದಿ ಸೇರಿದ್ದಾರೆ’’ ಎಂದಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ಬಳಿಕ ನಡೆದ ಪ್ರತಿಭಟನೆಯ ಸಂದರ್ಭ ಪ್ರಯಾಗ್‌ರಾಜ್ ಹಾಗೂ ಶಹರಣಪುರದಲ್ಲಿ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ವಜಾಗೊಂಡ ಬಿಜೆಪಿಯ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿ ಸಂದರ್ಭ ಕನಿಷ್ಠ ನಾಲ್ಕು ನಗರಗಳು ಇದೇ ರೀತಿಯ ಘಟನೆಗಳಿಗೆ ಸಾಕ್ಷಿಯಾಗಿವೆ. ಪ್ರಯಾಗ್‌ರಾಜ್‌ನಲ್ಲಿ ಗುಂಪೊಂದು ಕೆಲವು ಮೋಟಾರುಸೈಕಲ್ ಹಾಗೂ ಗಾಡಿಗಳಿಗೆ ಬೆಂಕಿ ಹಚ್ಚಿತು. ಪೊಲೀಸರ ವಾಹನಕ್ಕೆ ಕೂಡ ಬೆಂಕಿ ಹಚ್ಚಿತು. ಗುಂಪನ್ನು ಚದುರಿಸಲು ಹಾಗೂ ಶಾಂತಿ ಕಾಪಾಡಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು ಹಾಗೂ ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಟಿ.ವಿ. ಚರ್ಚೆಯ ಸಂದರ್ಭ ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿರುವುದನ್ನು ಹಲವು ರಾಷ್ಟ್ರಗಳು ಖಂಡಿಸಿದ ಬಳಿಕ ಬಿಜೆಪಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ವಜಾಗೊಳಿಸಿತ್ತು. ಶಹರಣಪುರದಲ್ಲಿ ಪ್ರತಿಭಟನಕಾರರು ಶರ್ಮಾ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಹಾಗೂ ಅವರಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿದ್ದರು. ಬಿಜ್ನೂರು, ಮೊರದಾಬಾದ್, ರಾಂಪುರ ಹಾಗೂ ಲಕ್ನೋದಲ್ಲಿ ಪ್ರತಿಭಟನೆ ನಡೆಯಿತು. ಲಕ್ನೋದಲ್ಲಿ ಪ್ರತಿಭಟನಕಾರರು ಶರ್ಮಾ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಪ್ರಯಾಗ್‌ರಾಜ್‌ನಲ್ಲಿ 15 ನಿಮಿಷಗಳ ಕಾಲ ಕಲ್ಲು ತೂರಾಟ ನಡೆಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಮುಖ್ಯ ರಸ್ತೆಯಲ್ಲಿ ನಿಯೋಜಿಸಿದ್ದ ಪೊಲೀಸ್ ತಂಡದ ಮೇಲೆ ಕೆಲವು ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News