ದಿಲ್ಲಿ: ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ ; ಆಕ್ಸಿಜನ್ ಇಲ್ಲದೆ ರೋಗಿ ಸಾವು
ಹೊಸದಿಲ್ಲಿ, ಜೂ. 11: ದಿಲ್ಲಿಯ ರೋಹಿಣಿ ಪ್ರದೇಶದ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕದಿಂದ ಆಮ್ಲಜನಕ ಪೂರೈಕೆಗೆ ಅಡ್ಡಿ ಉಂಟಾಗಿರುವುದರಿಂದ ಶನಿವಾರ ಮುಂಜಾನೆ 64 ವರ್ಷದ ರೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂತ್‌ಖುರ್ದ್‌ನಲ್ಲಿರುವ ಬ್ರಹ್ಮ ಶಕ್ತಿ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮುಜಾನೆ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದರು. ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿತು ಎಂದು ಪೊಲೀಸ್ ಉಪ ಆಯುಕ್ತ ಪ್ರಣವ್ ಟಾಯಲ್ ಹೇಳಿದ್ದಾರೆ.
ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿದ್ದ ಓರ್ವ ರೋಗಿ ಹೊರತುಪಡಿಸಿ ಉಳಿದ ಎಲ್ಲರನ್ನು ರಕ್ಷಿಸಲಾಗಿದೆ ಎಂದು ಡಿಸಿಪಿ ಅವರು ತಿಳಿಸಿದ್ದಾರೆ. ಪ್ರೇಮ್‌ನಗರದ ನಿವಾಸಿಯಾಗಿರುವ ಮೂತ್ರಪಿಂಡ ಕಾಯಿಲೆಯ ರೋಗಿಯನ್ನು ಹೊರಗೆ ತರಲಾಯಿತು. ಆದರೆ, ವಿದ್ಯುತ್ ಹಾಗೂ ಆಮ್ಲಜನಕದ ಪೂರೈಕೆ ಸಮಸ್ಯೆಯಿಂದ ಅವರು ಮೃಪಟ್ಟರು ಎಂದು ಅವರು ತಿಳಿಸಿದ್ದಾರೆ.