ಉತ್ತರ ಪ್ರದೇಶ ಗೂಂಡಾ ಪ್ರದೇಶವಾಗಿದೆ: ಪ್ರಶಾಂತ್ ಭೂಷಣ್

Update: 2022-06-12 13:35 GMT
Photo: PTI

ಲಕ್ನೋ: ಪ್ರವಾದಿ ಮುಹಮ್ಮದ್‌ ಅವರ ನಿಂದನೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಾಮಾಜಿಕ ಕಾರ್ಯಕರ್ತರು, ನಾಯಕರ ಮನೆಗಳ ಮೇಲೆ ಆದಿತ್ಯನಾಥ್‌ ಸರ್ಕಾರ ಬುಲ್ಡೋಝರ್‌ ಚಲಾಯಿಸಲು ಆರಂಭಿಸಿದೆ.

ಅಕ್ರಮ ಕಟ್ಟಡವೆಂದು ಆರೋಪಿಸಿ ಉತ್ತರ ಪ್ರದೇಶದ ಸ್ಥಳೀಯಾಡಳಿತ ಆರೋಪಿಗಳ ಮನೆ ಧ್ವಂಸಗೊಳಿಸುತ್ತಿದೆ. ಪ್ರವಾದಿ ಅವಹೇಳನಕ್ಕೆ ವಿರುದ್ಧದ ನೆಪದಲ್ಲಿ ಈ ಹಿಂದೆ ಸಿಎಎ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಲಾಗುತ್ತಿದೆ ಎಂಬ ಆರೋಪವೂ ವ್ಯಾಪಕವಾಗಿ ಕೇಳಿಬಂದಿದೆ. 

ಇದೇ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಅವರ ಮನೆಗೂ ಉತ್ತರ ಪ್ರದೇಶ ಸರ್ಕಾರ ಬುಲ್ಡೋಝರ್‌ ಚಲಾಯಿಸಿದ್ದು, ಫಾತಿಮಾ ತಂದೆ, ಜಾವೇದ್ ಮುಹಮ್ಮದ್ ಹಿಂಸಾಚಾರದ ಮಾಸ್ಟರ್‌ ಮೈಂಡ್‌ ಎಂದು ಸರ್ಕಾರದ ಮೂಲಗಳು ಆರೋಪಿಸಿದೆ. ವಿದ್ಯಾರ್ಥಿ ಹೋರಾಟಗಾರ್ತಿ ಅಫ್ರೀನ್‌ ನಿವಾಸಕ್ಕೆ ಬುಲ್ಡೋಝರ್‌ ಚಲಾಯಿಸುವುದರ ವಿರುದ್ಧ ಅನೇಕ ಹೋರಾಟಗಾರರು, ಪತ್ರಕರ್ತರು , ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಭ್ಯವಾಗಿರುವ ದಾಖಲೆ ಪ್ರಕಾರ ಜಾವೇದ್‌ ಅವರ ನಿವಾಸ ಅಕ್ರಮವಲ್ಲ ಎಂದು ಸಾಬೀತಾಗಿದೆ ಎಂದು ಹಲವರು ಹೇಳಿದ್ದು, ಉತ್ತರ ಪ್ರದೇಶ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. 

ಈ ಕುರಿತು ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್‌ ಭೂಷಣ್‌ ಟ್ವೀಟ್‌ ಮಾಡಿದ್ದು, “ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದರೂ ಸಹ ಯುಪಿ ಸರ್ಕಾರವು ಅಫ್ರೀನ್‌ ಫಾತಿಮಾ ಅವರ ಮನೆಯನ್ನು ಕೆಡವುತ್ತಿದೆ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ! ಗೂಂಡಾ ಪ್ರದೇಶವಾಗಿ ಮಾರ್ಪಟ್ಟಿದೆ” ಎಂದು ಬರೆದಿದ್ದಾರೆ. 

ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಜಾವೇದ್ ಅವರ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವಲಾಗಿದೆ. ಜೆಎನ್‌ಯುನಲ್ಲಿ ಓದುತ್ತಿರುವ ಅಫ್ರೀನ್‌ ಪರವಾಗಿ ಮತ್ತು ಆದಿತ್ಯನಾಥ್‌ ಸರ್ಕಾರದ ಬುಲ್ಡೋಝರ್ ನೀತಿ ವಿರುದ್ಧ ಜೆಎನ್‌ಯುನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವರದಿಯಾಗಿದೆ.

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅಫ್ರೀನ್‌ ಅವರು, ಹಿಜಾಬ್ ನಿಷೇಧದ ಸಮಯದಲ್ಲಿಯೂ ದೊಡ್ಡ ದನಿಯಾಗಿದ್ದರು.  ಹಿಜಾಬ್ ನಿಷೇಧದ ಸಮಯದಲ್ಲಿ ದಕ್ಷಿಣ ಭಾರತದ ಹಲವಾರು ನಗರಗಳಿಗೆ ಅಫ್ರೀನ್‌ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  

ಅಫ್ರೀನ್ ಅವರನ್ನು ಬೆಂಬಲಿಸಿ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. “ಜೆಎನ್‌ಯು ವಿದ್ಯಾರ್ಥಿನಿಯ ಕುಟುಂಬದ ಮನೆಯನ್ನು ಕೆಡವಲಾಗಿದೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಕಾನೂನು ಪ್ರಕ್ರಿಯೆಯ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕು. ಯಾವ ಕಾನೂನಿನ ಅಡಿಯಲ್ಲಿ ಮತ್ತು ಯಾವ ವಿಧಾನವನ್ನು ಅನುಸರಿಸಿ ಮನೆ ಕೆಡವಲಾಗಿದೆ? ಭಾರತದ ಸಂವಿಧಾನದಿಂದ ಯುಪಿ ತನ್ನನ್ನು ತಾನು ವಿನಾಯಿತಿ ಮಾಡಿಕೊಂಡಿದೆಯೇ?” ಎಂದು ಸಂಸದ ತರೂರು ಪ್ರಶ್ನಿಸಿದ್ದಾರೆ. 

"ವಿದ್ಯಾರ್ಥಿ ಕಾರ್ಯಕರ್ತೆ ಮತ್ತು ವಿದ್ವಾಂಸೆ ಅಫ್ರೀನ್‌ ಫಾತಿಮಾ ಅವರ ಪೋಷಕರು ಮತ್ತು ಸಹೋದರಿಯನ್ನು ಅಲಹಾಬಾದ್ ಪೊಲೀಸರು ಯಾವುದೇ ವಾರಂಟ್ ಇಲ್ಲದೆ ಮಧ್ಯರಾತ್ರಿಯಲ್ಲಿ ಬಂಧಿಸಿದ್ದಾರೆ ಮತ್ತು ಅವರು ಅವರ ಮನೆಯನ್ನು ಕೆಡವುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಭಿನ್ನಾಭಿಪ್ರಾಯ ಅಪರಾಧವಲ್ಲ" ಎಂದು ಸುಚಿತ್ರಾ ವಿಜಯನ್‌ ಟ್ವೀಟ್‌ ಮಾಡಿದ್ದಾರೆ. 

“ಅಫ್ರೀನ್ ಫಾತಿಮಾ ಅವರ ಮನೆಯ ಧ್ವಂಸವು ಮೋದಿ ಸರ್ಕಾರದ ಎಲ್ಲಾ ಭಿನ್ನಮತೀಯರಿಗೆ ಮತ್ತು ಟೀಕಾಕಾರರಿಗೆ ಒಂದು ಪ್ರತಿಧ್ವನಿಸುವ ಸಂದೇಶವಾಗಿದೆ. ಈ ವೀಡಿಯೊ ಫ್ಯಾಸಿಸಂನ ಅತ್ಯಂತ ನಿಖರವಾದ ವ್ಯಾಖ್ಯಾನವಾಗಿದೆ. ಭಾರತೀಯರು ಸಾಮೂಹಿಕವಾಗಿ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ. ಈ ಕ್ಷುಲ್ಲಕ ಸೇಡಿನ ಮನೋಭಾವವು ಒಂದು ರಾಷ್ಟ್ರವಾಗಿ ನಮಗೆ ನಾಚಿಕೆ ಆಗಿದೆ” ಎಂದು ಪತ್ರಕರ್ತೆ ರಾಣಾ ಅಯ್ಯೂಬ್‌ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News