ಲೈಂಗಿಕ ದೌರ್ಜನ್ಯ ವಿರೋಧಿಸುವ ಪ್ರಯತ್ನದಲ್ಲಿ ಇರಿತಕ್ಕೊಳಗಾದ ಮಹಿಳೆ: ಸಂತ್ರಸ್ತೆಯ ಮುಖಕ್ಕೆ 118 ಹೊಲಿಗೆಗಳು

Update: 2022-06-12 16:22 GMT

ಭೋಪಾಲ (ಮ.ಪ್ರ), ಜೂ.12: ತನ್ನ ಮೇಲಿನ ಲೈಂಗಿಕ ಹಲ್ಲೆಯನ್ನು ಪ್ರತಿರೋಧಿಸುವ ಪ್ರಯತ್ನದಲ್ಲಿ ದುಷ್ಕರ್ಮಿಗಳಿಂದ ಪೇಪರ್ ಕಟರ್ನ ದಾಳಿಗೀಡಾಗಿ ತೀವ್ರವಾಗಿ ಗಾಯಗೊಂಡ ಭೋಪಾಲ ನಿವಾಸಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮುಖಕ್ಕೆ 118 ಹೊಲಿಗೆಗಳನ್ನು ಹಾಕಲಾಗಿದೆ. ಭೋಪಾಲದ ಟಿಟಿ ನಗರ ಪ್ರದೇಶದಲ್ಲಿ ಶುಕ್ರವಾರ ಘಟನೆ ನಡೆದಿತ್ತು.

ಮಹಿಳೆ ತನ್ನ ಪತಿಯೊಂದಿಗೆ ಟಿಟಿ ನಗರದ ರೋಷನಪುರ ಪ್ರದೇಶದಲ್ಲಿಯ ಶ್ರೀ ಪ್ಯಾಲೇಸ್ ಹೋಟೆಲ್ಗೆ ತೆರಳಿದ್ದಾಗ ಬೈಕ್ ಪಾರ್ಕಿಂಗ್ ಕುರಿತು ಆಕೆಯ ಮತ್ತು ಆರೋಪಿಗಳ ನಡುವೆ ವಾಗ್ವಾದ ಉಂಟಾಗಿತ್ತು.

ಪತಿ ಹೋಟೆಲ್ನೊಳಗೆ ಇದ್ದಾಗ ಮೂವರು ದುಷ್ಕರ್ಮಿಗಳು ಆಕೆಯನ್ನು ಅಶ್ಲೀಲವಾಗಿ ಚುಡಾಯಿಸಿದ್ದರು ಮತ್ತು ಶಿಳ್ಳೆಗಳನ್ನು ಹಾಕಿದ್ದರು. ಆರೋಪಿಗಳನ್ನು ಎದುರಿಸಿದ ಮಹಿಳೆ ಅವರ ಪೈಕಿ ಓರ್ವನಿಗೆ ಕಪಾಳಮೋಕ್ಷವನ್ನೂ ಮಾಡಿದ್ದಳು. ಬಳಿಕ ಆಕೆ ಹೋಟೆಲ್ನೊಳಗೆ ತೆರಳಿ ಪತಿಯನ್ನು ಸೇರಿಕೊಂಡಿದ್ದಳು. ದಂಪತಿ ಹೋಟೆಲ್ನಿಂದ ಹೊರಬಂದಾಗ ಕಾದು ನಿಂತಿದ್ದ ಆರೋಪಿಗಳು ಪೇಪರ್ ಕಟರ್ನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪತಿ ಆಕೆಯನ್ನು ಆಸತ್ರೆಗೆ ಸಾಗಿಸಿದ್ದು,ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಹೋಟೆಲ್ನ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಆರೋಪಿಗಳ ಪೈಕಿ ಬಾದಶಾಹ್ ಬೇಗ್ ಮತ್ತು ಅಜಯ್ ಅಲಿಯಾಸ್ ಬಿಟ್ಟಿ ಸಿಬ್ಡೆ ಎನ್ನುವವರನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮೂರನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರವಿವಾರ ಬೆಳಿಗ್ಗೆ ಆಸ್ಪತ್ರೆಗೆ ತೆರಳಿ ದಂಪತಿಯನ್ನು ಭೇಟಿಯಾದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಅವರು, ಮಹಿಳೆಯ ವೈದ್ಯಕೀಯ ಚಿಕಿತ್ಸೆಗೆ ಸಂಪೂರ್ಣ ನೆರವಿನ ಭರವಸೆಯನ್ನು ನೀಡಿದರು. ಮಹಿಳೆಯ ಧೈರ್ಯವನ್ನು ಪ್ರಶಂಸಿಸಿದ ಅವರು ಆಕೆಗೆ ಒಂದು ಲ.ರೂ.ಬಹುಮಾನವನ್ನೂ ನೀಡಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News