×
Ad

ಉತ್ತರಪ್ರದೇಶ: ಪ್ರಯಾಗ್‌ರಾಜ್‌ನಲ್ಲಿ ಕೆಡವಲಾದ ಮನೆ ಆರೋಪಿಗೆ ಸೇರಿದ್ದಲ್ಲ; ವರದಿ

Update: 2022-06-12 23:29 IST
ಸಾಂದರ್ಭಿಕ ಚಿತ್ರ (PTI)

ಪ್ರಯಾಗ್‌ರಾಜ್‌: ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿ ನಾಯಕರು ನೀಡಿದ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ, ಹಿಂಸಾಚಾರದ ರುವಾರಿ ಎಂದು ಆರೋಪಿಸಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಾಯಕ ಮತ್ತು ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪ್ರಮುಖ ದನಿಯಾಗಿದ್ದ ಜಾವೇದ್ ಮುಹಮ್ಮದ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಆದರೆ, ಅಧಿಕಾರಿಗಳು ಧ್ವಂಸಗೊಳಿಸಿದ ಮನೆ ಅವರ ಹೆಸರಿನಲ್ಲೇ ಇಲ್ಲ ಎಂಬ ಅಂಶ ಈಗ ಬೆಳಕಿಗೆ ಬಂದಿದೆ ಎಂದು nationalheraldindia.com ವರದಿ ಮಾಡಿದೆ.

ಜೆಎನ್‌ಯು ವಿದ್ಯಾರ್ಥಿ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಅವರ ತಂದೆಯಾಗಿರುವ ಜಾವೇದ್ ಮುಹಮ್ಮದ್ ರನ್ನು ಇತರ 10 ಮಂದಿಯೊಂದಿಗೆ ಹಿಂಸಾಚಾರದ ಪ್ರಮುಖ ಸಂಚುಕೋರ ಎಂದು ಯುಪಿ ಪೊಲೀಸರು ಹೆಸರಿಸಿದ್ದಾರೆ.

ಶನಿವಾರ ರಾತ್ರಿ ಫಾತಿಮಾ ಅವರ ಸಹೋದರಿ ಮತ್ತು ತಾಯಿಯನ್ನು ಬಂಧಿಸಲಾಗಿದ್ದು, ಅವರಿಗೆ ವಕೀಲರ ಜೊತೆ ಮಾತನಾಡಲೂ ಅವಕಾಶ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಆಕ್ರೋಶ ಹೆಚ್ಚಾದ ಬಳಿಕ ಕಡೆಗೂ ಮಹಿಳಾ ವಕೀಲರನ್ನು ಮತ್ತು ಹೋರಾಟಗಾರ್ತಿ ಸೀಮಾ ಆಝಾದ್‌ ಅವರನ್ನು ಭೇಟಿಯಾಗಲು ಅನುಮತಿಸಲಾಯಿತು ಎಂದು ನ್ಯಾಷನಲ್‌ ಹೆರಾಲ್ಡ್‌ ವರದಿ ಮಾಡಿದೆ.

ತರಾತುರಿಯಲ್ಲಿ ನೀಡಲಾದ ನೋಟಿಸ್‌ನತ್ತ ಗಮನಸೆಳೆದ ಸೀಮಾ ಆಝಾದ್, ಧ್ವಂಸಗೊಳಿಸಿದ ಮನೆ ಜಾವೇದ್‌ಗೆ ಸೇರಿಲ್ಲ, ಅದು ಅವರ ಹೆಂಡತಿಗೆ ಸೇರಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಹಿಂದಿನ ದಿನಾಂಕದ ನೋಟಿಸ್ ಅನ್ನು ಜಾವೇದ್ ಮುಹಮ್ಮದ್ ಹೆಸರಿನಲ್ಲಿ ನೀಡಲಾಗಿದೆ, ಆದರೆ ಮನೆ ಕೇವಲ ಅವರ ಹೆಂಡತಿಗೆ ಸೇರಿದ್ದು, ಅದರ ಜಮೀನು ಜಾವೇದ್‌ ಅವರ ಪತ್ನಿಯ ಪೂರ್ವಜರ ಆಸ್ತಿ, ಜಾವೇದ್ ಮುಹಮ್ಮದ್ ಅದರಲ್ಲಿ ಯಾವುದೇ ಕಾನೂನು ಪಾಲನ್ನು ಹೊಂದಿಲ್ಲ,” ಎಂದು ಸೀಮಾ ಆಝಾದ್ ಬರೆದಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಪತಿಗೆ ತನ್ನ ಹೆಂಡತಿಗೆ ಸೇರಿದ ಆಸ್ತಿಯ ಮೇಲೆ ಯಾವುದೇ ಕಾನೂನು ಹಕ್ಕಿಲ್ಲ. ಪತಿಯ ವಿರುದ್ಧ ಕಾನೂನು ಕ್ರಮದ ಮೂಲಕವೂ ಮಹಿಳೆಗೆ ಸೇರಿದ ಆಸ್ತಿಯನ್ನು ಅಧಿಕಾರಿಗಳು ಲಗತ್ತಿಸಲು ಅಥವಾ ಕೆಡವಲು ಸಾಧ್ಯವಿಲ್ಲ ಎಂದು ಪ್ರಯಾಗರಾಜ್‌ನ ಕೆಲವು ವಕೀಲರು ಹೇಳಿರುವುದಾಗಿ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News