ಉದಾರವಾದಿ ಜಾತ್ಯಾತೀತರು ಮೌನವಾಗಿದ್ದಾರೆ: ನೂಪುರ್‌ ಶರ್ಮಾಗೆ ಗೌತಮ್‌ ಗಂಭೀರ್ ಬೆಂಬಲ

Update: 2022-06-12 18:06 GMT
ಗೌತಮ್‌ ಗಂಭೀರ್ (PTI)

ಹೊಸದಿಲ್ಲಿ: ಪೂರ್ವ ದಿಲ್ಲಿ ಸಂಸದ ಗೌತಮ್ ಗಂಭೀರ್ ಪ್ರವಾದಿ ಮತ್ತು ಮುಸ್ಲಿಂ ಸಮುದಾಯದ ವಿರುದ್ಧದ ಹೇಳಿಕೆಗಳಿಗಾಗಿ ಅಮಾನತುಗೊಂಡ ಬಿಜೆಪಿ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲವನ್ನು ನೀಡಿದ್ದು, ಅವರ ವಿರುದ್ಧ ಬಂದ ಬೆದರಿಕೆಗಳನ್ನು ಖಂಡಿಸಿದ್ದಾರೆ.

“ಈಗಾಗಲೇ ಕ್ಷಮೆಯಾಚಿಸಿದ ಓರ್ವ ಮಹಿಳೆ ವಿರುದ್ಧ ದೇಶಾದ್ಯಂತ ಕೊಲೆ ಬೆದರಿಕೆಗಳು ಮತ್ತು ದ್ವೇಷ ಕಾರುವ ಸಂದೇಶಗಳ ಬಗ್ಗೆ ಜಾತ್ಯಾತೀತ ಉದಾರವಾದಿಗಳು ಎಂದು ಹೇಳಿಕೊಳ್ಳುವವರು ಮೌನವಾಗಿರುವುದು ನಿಜಕ್ಕೂ ಕಿವುಡುತನ” ಎಂದು ಮಾಜಿ ಕ್ರಿಕೆಟಿಗ ಗಂಭೀರ್‌ ಟ್ವೀಟ್‌ ಮಾಡಿದ್ದಾರೆ.  
 
ಆಕೆಯ ಹೇಳಿಕೆಗಳನ್ನು ತಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು “ನೂಪುರ್ ಶರ್ಮಾ ನೀಡಿದ ಹೇಳಿಕೆಗಳನ್ನು ಯಾರೂ ಬೆಂಬಲಿಸಿಲ್ಲ. ಪಕ್ಷವು ಆಕೆಯ ವಿರುದ್ಧ ಕಠಿಣ ಶಿಸ್ತು ಕ್ರಮವನ್ನು ತೆಗೆದುಕೊಂಡಿದೆ ಮತ್ತು ಅದಕ್ಕಾಗಿ ಅವರು ನಿಸ್ಸಂದಿಗ್ಧವಾಗಿ ಕ್ಷಮೆಯಾಚಿಸಿದ್ದಾರೆ.” ಎಂದು ಹೇಳಿದ್ದಾರೆ. 

ಪ್ರವಾದಿ ವಿರುದ್ಧದ ನಿಂದನೆಗಳ ಬಗ್ಗೆ ಹಲವಾರು ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಅವರು “ಆಕೆ ಹಾಗೂ ಆಕೆಯ ಕುಟುಂಬದ ವಿರುದ್ಧ ದ್ವೇಷದ ಪ್ರದರ್ಶನ, ಕೊಲೆ ಬೆದರಿಕೆಗಳು ಮತ್ತು ದೇಶದ ವಿವಿಧ ಭಾಗಗಳಲ್ಲಿ ಸಂಘಟಿತ ಗಲಭೆಗಳು ಕಳವಳಕ್ಕೆ ಕಾರಣವಾಗಿವೆ. ಅಸಹಿಷ್ಣುತೆ ಎಂದು ಕರೆಯಲ್ಪಡುವ ನಮ್ಮ ಪಕ್ಷವನ್ನು ದೂಷಿಸುವ ಆ ಜಾತ್ಯತೀತ ಉದಾರವಾದಿಗಳ ಮೌನ ಇನ್ನೂ ಆಶ್ಚರ್ಯಕರವಾಗಿದೆ. ಗಲಭೆಕೋರರು ನಿರ್ಭಯದಿಂದ ವಿನಾಶವನ್ನು ಸೃಷ್ಟಿಸಿರುವ ಕೆಲವು ರಾಜ್ಯಗಳಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಅಂತಹ ನಡವಳಿಕೆಯನ್ನು ನಿರುತ್ಸಾಹಗೊಳಿಸಲು ಯುಪಿ ಸರ್ಕಾರ ಕೈಗೊಂಡ ಕ್ರಮಗಳನ್ನು ನಾನು ಪ್ರಶಂಸಿಸುತ್ತೇನೆ. 21ನೇ ಶತಮಾನದ ಭಾರತದಲ್ಲಿ ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ.” ಎಂದು ಅವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News