×
Ad

ಸುಳ್ಳು ಸುದ್ದಿ ಹರಡುವ ಚಾನಲ್ ಗಳ ಬಗ್ಗೆ ಜಾಗರೂಕರಾಗಿರಿ ಎಂದ ಕೆಬಿಸಿ ಪ್ರೊಮೋ

Update: 2022-06-13 15:50 IST
Photo: Twitter/@SonyTV

ಹೊಸದಿಲ್ಲಿ: ಕೇಂದ್ರ ಸರಕಾರ 2016ರಲ್ಲಿ ನೋಟು ಅಮಾನ್ಯೀಕರಣ ಜಾರಿಗೆ ತಂದ ಸಂದರ್ಭದಲ್ಲಿ ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧುರಿ ಹಾಗೂ ಆಜ್ ತಕ್‍ನ ಶ್ವೇತಾ ಸಿಂಗ್ ಅವರು ಮುಂದೆ ಸರಕಾರ ಕಾಳಧನ ನಿಯಂತ್ರಿಸಲು ಹೊಸ ಕರೆನ್ಸಿ ನೋಟುಗಳಲ್ಲಿ ಜಿಪಿಎಸ್ ಟ್ರ್ಯಾಕರ್ ಗಳನ್ನು ಕೂಡ ಅಳವಡಿಸುವ ಸಾಧ್ಯತೆಯಿದೆಯೆಂದು ಹೇಳಿಕೊಂಡು ಈ ಕುರಿತು ಊಹಾಪೋಹ ಹರಡುವಂತೆ ಮಾಡಿದ್ದರು.

ಇದೇ  ವಿಚಾರ ಮತ್ತೆ ಸುದ್ದಿಯಾಗಿದ್ದು ಅಮಿತಾಭ್ ಬಚ್ಚನ್ ನಿರೂಪಕರಾಗಿರುವ ಸೋನಿ ಟಿವಿಯ 'ಕೌನ್ ಬನೇಗಾ ಕರೋಡ್ಪತಿ' ಹಾಗೂ ಸೋನಿ ಟಿವಿ ಈ ಕುರಿತು ಮಾಡಿದ ಟ್ವೀಟ್‍ನಿಂದ.

ಮುಂಬರುವ ಕೌನ್ ಬನೇಗಾ ಕರೋಡ್ಪತಿ ಸೀಸನ್‍ನ ಪ್ರಮೋಷನಲ್ ವೀಡಿಯೋದಲ್ಲಿ ಬಚ್ಚನ್ ಅವರು ಸ್ಪರ್ಧಿ ಗುಡ್ಡಿ ಅವರನ್ನು ಜಿಪಿಎಸ್ ತಂತ್ರಜ್ಞಾನವಿರುವ ಒಂದನ್ನು ಆಯ್ಕೆ ಮಾಡುವಂತೆ ಹೇಳುತ್ತಾರೆ. ಅವರು ನೀಡಿದ್ದ ಆಯ್ಕೆಗಳು ಟೈಪ್‍ರೈಟರ್, ಟೆಲಿವಿಷನ್, ಸ್ಯಾಟಿಲೈಟ್ ಮತ್ತು ರೂ. 2,000 ಕರೆನ್ಸಿ ನೋಟು.

ಆಗ ಸ್ಪರ್ಧಿ ರೂ 2000 ನೋಟು ಎಂದು ಉತ್ತರಿಸಿದರು. ಈ ಬಗ್ಗೆ ಖಚಿತವಾಗಿದ್ದೀರಾ ಎಂದು ಅಮಿತಾಭ್ ಆಕೆಯನ್ನು ಕೇಳಿದಾಗ, ನಾನು ಮಾತ್ರವಲ್ಲ, ಇಡೀ ದೇಶ ಖಚಿತವಾಗಿದೆ ಎಂದರು. ಆಗ ಅಮಿತಾಭ್ ಅವರು ಸರಿಯಾದ ಉತ್ತರ ಸ್ಯಾಟಿಲೈಟ್ ಎಂದು ಹೇಳಿದಾಗ ನೀವು ತಮಾಷೆ ಮಾಡುತ್ತಿದ್ದೀರಾ ಎಂದು ಸ್ಪರ್ಧಿ ಕೇಳುತ್ತಾರೆ.

"ನಾನೇಕೆ ತಮಾಷೆ ಮಾಡಬೇಕು? ನೀವು ಸತ್ಯ ಎಂದು ನಂಬಿರುವಂತಹುದ್ದು ತಮಾಷೆ,'' ಎಂದು ಅಮಿತಾಭ್ ಹೇಳುತ್ತಾರೆ.

ಆದರೆ ಸ್ಪರ್ಧಿ ಸಮಾಧಾನಗೊಳ್ಳದೆ, ಇದು ಸುದ್ದಿಯಲ್ಲಿ ತೋರಿಸಿದ್ದರಿಂದ ಆ ಸಂಸ್ಥೆಯ ತಪ್ಪಲ್ಲವೇ ಎಂದು ಕೇಳುತ್ತಾರೆ. ಆಗ ಅಮಿತಾಭ್, ಸುದ್ದಿ ಸಂಸ್ಥೆಗಳಿಂದ ಲೋಪ ನಡೆದಿದ್ದರೂ ಅಂತಿಮವಾಗಿ ನಷ್ಟ ಅನುಭವಿಸಿದ್ದು ನೀವು ಎಂದು ಹೇಳುತ್ತಾರೆ.

ನಂತರ ಅಮಿತಾಭ್ ಅವರು ಪ್ರೇಕ್ಷಕರನ್ನುದ್ದೇಶಿಸಿ "ನಿಮಗೆ ಎಲ್ಲಿಂದ ದೊರೆಯುತ್ತದೆಯೇ ಅಲ್ಲಿಂದ ಮಾಹಿತಿ ಸಂಗ್ರಹಿಸಿ, ಆದರೆ ಮೊದಲು ಅದನ್ನು ಪರಾಮರ್ಶಿಸಿ'' (ಗ್ಯಾನ್ ಜಹಾನ್ ಸೆ ಮಿಲೆ ಬಟರ್ ಲೀಜಿಯೇ, ಪರ್ ಪೆಹಲೇ ಝರಾ ತಾತೋಲ್ ಲೀಜಿಯೆ) ಎಂದು ಹೇಳುತ್ತಾರೆ.

ಇದೇ ಮಾತುಗಳನ್ನು ಸೋನಿ ಟಿವಿ ತನ್ನ ಟ್ವೀಟ್ ಒಂದರಲ್ಲೂ ಹೇಳಿ "ನಮಗೆ ಇಂತಹ ದೃಢೀಕರಿಸಿದ ಸುದ್ದಿಯನ್ನು ಕೇಳಿಸುವ ಒಬ್ಬ ವ್ಯಕ್ತಿಯ ಬಗ್ಗೆ ನಮಗೆಲ್ಲರಿಗೂ ಗೊತ್ತು,'' ಎಂದು ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News