"ನೈರ್ಮಲ್ಯ ಕಾರ್ಮಿಕರ ಹಕ್ಕುಗಳು, ಸವಲತ್ತುಗಳ ಬಗ್ಗೆ ಕರಪತ್ರ ಪ್ರಕಟಿಸಿ, ವಿತರಿಸಿ"
ಹೊಸದಿಲ್ಲಿ: ನೈರ್ಮಲ್ಯ ಕಾರ್ಮಿಕರ ಹಕ್ಕುಗಳು ಹಾಗೂ ಸವಲತ್ತುಗಳ ಎಲ್ಲಾ ಮಾಹಿತಿಗಳನ್ನೊಳಗೊಂಡು ಒಂದು ಪುಟದ ಕರಪತ್ರವನ್ನು ಪ್ರಕಟಿಸಬೇಕು ಎಂದು ಉತ್ತರ ಪ್ರದೇಶ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿದೆ. ಈ ಕರಪತ್ರಗಳನ್ನು ಎಲ್ಲಾ ನೈರ್ಮಲ್ಯ ಕಾರ್ಮಿಕರಿಗೆ ವಿತರಿಸಬೇಕು ಹಾಗೂ ಸುದ್ದಿಪತ್ರಗಳಲ್ಲಿ ಪ್ರಕಟಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ರಾಜ್ಯದಲ್ಲಿ ನೈರ್ಮಲ್ಯ ಕಾರ್ಮಿಕರ ಸಮಸ್ಯೆಗಳನ್ನು ವಿವರಿಸಿದ್ದ ಮೇ 24ರ ಪತ್ರಿಕಾ ವರದಿಯನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಚಂದ್ರ ಕುಮಾರ್ ರಾಯ್ ಮತ್ತು ಮನೋಜ್ ಕುಮಾರ್ ಗುಪ್ತಾ ಅವರ ಪೀಠ ನಡೆಸಿದ ಸಂದರ್ಭ ಮೇಲಿನ ಸೂಚನೆ ನೀಡಲಾಗಿದೆ.
ಯಾವುದೇ ಯಂತ್ರಗಳು ಹಾಗೂ ಸುರಕ್ಷಾ ಸಾಧನಗಳಿಲ್ಲದೆ ತೆರೆದ ಚರಂಡಿಗಳನ್ನು ಗುತ್ತಿಗೆದಾರರ ಅಥವಾ ಸ್ಥಳೀಯಾಡಳಿತದ ಮೂಲಕ ಸ್ವಚ್ಛಗೊಳಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ಮೇ 26ರಂದು ನ್ಯಾಯಾಲಯವು ಸಂಬಂಧಿತ ಪ್ರಾಧಿಕಾರಗಳಿಗೆ ನೋಟಿಸ್ ಜಾರಿಗೊಳಿಸಿತ್ತು.
ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‍ಗಳ ಸ್ವಚ್ಛತೆ ಕಾರ್ಯದ ವೇಳೆ ನಿಯಮಿತ ನಿಯಮಗಗಳನ್ನು ಪಾಲನೆ ಮಾಡುವಂತೆ ಸರಕಾರ ಎಲ್ಲಾ ಸ್ಥಳೀಯಾಡಳಿತಗಳಿಗೆ ಸೂಚನೆ ನೀಡಿದೆ ಎಂದು ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಹೇಳಿದ್ದಾರೆ.
ನೈರ್ಮಲ್ಯ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನ ಅಳವಡಿಸದೆ ಕಾರ್ಯನಿರ್ವಹಿಸುತ್ತಿರುವುದರ ಕುರಿತು ಮಾಧ್ಯಮ ವರದಿಯಲ್ಲಿ ಪ್ರಕಟವಾದ ಛಾಯಾಚಿತ್ರ ಸಂಬಂಧ ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯ ಸ್ಥಳೀಯಾಡಳಿತವನ್ನು ಪ್ರಶ್ನಿಸಿತ್ತು. ಇದಕ್ಕೆ ಜೂನ್ 7 ರಂದು ನಡೆದ ವಿಚಾರಣೆಯಲ್ಲಿ ಪ್ರತಿಕ್ರಿಯಿಸಿದ್ದ ಪ್ರಯಾಗರಾಜ್ ನಗರ ನಿಗಮ, 202 ಚರಂಡಿಗಳನ್ನು ಯಂತ್ರಗಳ ಸಹಾಯದಿಂದ ಸ್ವಚ್ಛಗೊಳಿಸಲಾಗಿದೆ ಎಂದು ಮಾಹಿತಿ ನೀಡಿತ್ತು.
ನೈರ್ಮಲ್ಯ ಕಾರ್ಮಿಕರಿಗೆ ಸಲ್ಲಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಹಾಗೂ ಅವರ ಸಮಸ್ಯೆಗಳನ್ನು ವಿವರಿಸಲು ಫೋಟೋಗಳನ್ನು ನಾಗರಿಕರಿಗೆ ಅಪ್ಲೋಡ್ ಮಾಡಲು ಅನುಮತಿಸುವ ಪ್ರತ್ಯೇಕ ವೆಬ್ ತಾಣವನ್ನು ಅಲಹಾಬಾದ್ ನಗರ ನಿಗಮ ಆರಂಭಿಸಬೇಕು ಎಂದು ನ್ಯಾಯಾಲಯ ಹೇಳಿದೆ.