ಅದಾನಿ ಕಂಪೆನಿಗೆ ಯೋಜನೆ ನೀಡಲು ಮೋದಿ ಒತ್ತಾಯಿಸಿದ್ದಾರೆಂದು ಆರೋಪಿಸಿದ್ದ ಶ್ರೀಲಂಕಾ ಅಧಿಕಾರಿ ದಿಢೀರ್ ರಾಜಿನಾಮೆ
ಕೋಲಂಬೊ,ಜೂ.13: ವಿದ್ಯುತ್ ಯೋಜನೆಯೊಂದನ್ನು ಅದಾನಿ ಗ್ರೂಪ್‌ಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾ ಸರಕಾರದ ಮೇಲೆ ಒತ್ತಡ ಹೇರಿದ್ದರು ಎಂದು ಮೂರು ದಿನಗಳ ಹಿಂದೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಸಿಲೋನ್ ವಿದ್ಯುತ್ ಮಂಡಳಿ (ಸಿಇಬಿ)ಯ ಅಧ್ಯಕ್ಷ ಎಂ.ಎಂ.ಸಿ.ಫರ್ಡಿನಾಂಡೊ ಅವರು ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಆರೋಪವನ್ನು ತಳ್ಳಿಹಾಕಿದ್ದರು. ಫರ್ಡಿನಾಂಡೊ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದರಾದರೂ ಆ ವೇಳೆಗಾಗಲೇ ಅದು ವಿವಾದವನ್ನು ಹುಟ್ಟುಹಾಕಿತ್ತು.
ಪವನ ವಿದ್ಯುತ್ ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡುವಂತೆ ಮೋದಿ ಶ್ರೀಲಂಕಾ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಶುಕ್ರವಾರ ಸಂಸದೀಯ ಸಮಿತಿ ಸಭೆಯಲ್ಲಿ ಫರ್ಡಿನಾಂಡೊ ಆರೋಪಿಸಿದ್ದರು.
ಶನಿವಾರ ಸಂಜೆ ತನ್ನ ಹೇಳಿಕೆಯೊಂದರಲ್ಲಿ ತನ್ನ ಆರೋಪವನ್ನು ಹಿಂದೆಗೆದುಕೊಂಡಿದ್ದ ಅವರು,ಸಮಿತಿಯ ಎದುರು ಹೇಳಿಕೆ ನೀಡುವಾಗ ಒತ್ತಡಗಳಿಂದ ಮತ್ತು ತನ್ನ ವಿರುದ್ಧದ ನ್ಯಾಯಸಮ್ಮತವಲ್ಲದ ಆರೋಪಗಳಿಂದಾಗಿ ತಾನು ಭಾವೋದ್ವೇಗಗೊಂಡಿದ್ದೆ. ಇದರಿಂದಾಗಿ ಮೋದಿಯವರು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದೆ. ಅದು ಸಂಪೂರ್ಣ ತಪ್ಪು ಹೇಳಿಕೆಯಾಗಿತ್ತು ಮತ್ತು ಇದಕ್ಕಾಗಿ ತಾನು ಬೇಷರತ್ ಕ್ಷಮೆಯನ್ನು ಯಾಚಿಸುತ್ತೇನೆ ಎಂದು ತಿಳಿಸಿದ್ದರು.
ಅದಾನಿ ಗ್ರೂಪ್ ಮನ್ನಾರ್ ಮತ್ತು ಪೂನೆರಿನ್ ವಿದ್ಯುತ್ ಸ್ಥಾವರ ನಿರ್ಮಾಣ ಯೋಜನೆಗಳಿಗಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಗುತ್ತಿಗೆಗಳನ್ನು ಪಡೆದುಕೊಂಡಿತ್ತು ಎನ್ನಲಾಗಿದೆ. ಗ್ರೂಪ್‌ನ ಅಂಗಸಂಸ್ಥೆ ಅದಾನಿ ಗ್ರೀನ್ ಎನರ್ಜಿ ತನ್ನ ಪ್ರಸ್ತಾವವನ್ನು ಶ್ರೀಲಂಕಾ ಹೂಡಿಕೆ ಮಂಡಳಿ ಮತ್ತು ಸಿಇಬಿಗೆ ಸಲ್ಲಿಸಿತ್ತು.