ರಾಷ್ಟ್ರಪತಿ ಚುನಾವಣೆ ಹಿನ್ನೆಲೆ: ಶರದ್ ಪವಾರ್ ಅವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ

Update: 2022-06-14 15:16 GMT
Photo: twitter/AITCofficial

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಅಭ್ಯರ್ಥಿ ಆಯ್ಕೆಗೆ ಪಕ್ಷಗಳ ನಡುವೆ ಚರ್ಚೆ ಆರಂಭವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಮ್‌ಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿ, ವಿರೋಧ ಪಕ್ಷದ ಅಭ್ಯರ್ಥಿಯ ಬಗ್ಗೆ ಒಮ್ಮತದ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿದ್ದಾರೆ.

ಜುಲೈ 18 ರ ಚುನಾವಣೆಗೆ ಜಂಟಿ ಕಾರ್ಯತಂತ್ರವನ್ನು ಚರ್ಚಿಸಲು ಮಮತಾ ಬ್ಯಾನರ್ಜಿ ಕರೆದ ವಿರೋಧ ಪಕ್ಷದ ಸಭೆಗೆ ಒಂದು ದಿನ ಮೊದಲು ಉಭಯ ನಾಯಕರು ಭೇಟಿಯಾಗಿದ್ದಾರೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.

ರಾಷ್ಟ್ರಪತಿ ಸ್ಥಾನದ ರೇಸ್‌ನಲ್ಲಿ ಶರದ್ ಪವಾರ್ ಇದ್ದಾರೆ ಎಂಬ ಊಹಾಪೋಹಗಳಿಗೆ ಈಗಾಗಲೇ ತೆರೆ ಬಿದ್ದಿದ್ದು, "ನಾನು ರಾಷ್ಟ್ರಪತಿ ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ" ಎಂದು ಸೋಮವಾರ ಪವಾರ್‌ ಹೇಳಿದ್ದಾರೆ.

 ಶರದ್ ಪವಾರ್ ಮತ್ತು ಮಮತಾ ಬ್ಯಾನರ್ಜಿ ಅವರ ಭೇಟಿಯ ಫೋಟೋಗಳನ್ನು ಶರದ್‌ ಪವಾರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

"ಶ್ರೀಮತಿ ಮಮತಾ ಬ್ಯಾನರ್ಜಿ ಅವರು ಇಂದು ದೆಹಲಿಯ ನನ್ನ ನಿವಾಸದಲ್ಲಿ ನನ್ನನ್ನು ಭೇಟಿ ಮಾಡಿದರು. ನಮ್ಮ ದೇಶಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ನಾವು ವಿವರವಾದ ಚರ್ಚೆ ನಡೆಸಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ನಡುವೆ, ತೃಣಮೂಲ ಕಾಂಗ್ರೆಸ್ ಪಕ್ಷವು ಉಭಯ ನಾಯಕರ ಭೇಟಿ ಚಿತ್ರವನ್ನು ಹಂಚಿಕೊಂಡಿದ್ದು, “ಎಲ್ಲ ಪ್ರಗತಿಪರ ವಿರೋಧ ಶಕ್ತಿಗಳ ಸಭೆಗೆ ಇಬ್ಬರು ಧೀಮಂತ ನಾಯಕರು ವೇದಿಕೆಯನ್ನು ಸಿದ್ಧಪಡಿಸಿದ್ದು, ದಿಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ನಾಳೆ ಸಭೆ ನಡೆಯಲಿದೆ. ವಿಭಜಕ ಶಕ್ತಿಗಳ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಬಲಗೊಳ್ಳುತ್ತದೆ” ಎಂದು ಟ್ವೀಟ್‌ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News