×
Ad

ತೆರೆಯಬೇಡಿ ಎಂಬ ಎಚ್ಚರಿಕೆಯಿದ್ದ ಸಮಾಧಿ ಯುನೆಸ್ಕೊ ವಿಶ್ವಪಾರಂಪರಿಕ ತಾಣದಲ್ಲಿ ಪತ್ತೆ !

Update: 2022-06-14 22:54 IST
PHOTO:TWITTER/
@Israel

ಟೆಲ್‌ಅವೀವ್, ಜೂ.14: ಉತ್ತರ ಇಸ್ರೇಲ್‌ನ ಗಲೀಲಿ ಪ್ರಾಂತದಲ್ಲಿರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣದಲ್ಲಿ ಸಮಾಧಿಯೊಂದು ಪತ್ತೆಯಾಗಿದ್ದು ಅದರ ಮೇಲೆ ಕೆಂಪು ಬಣ್ಣದಲ್ಲಿ ‘ತೆರೆಯಬೇಡಿ’ ಎಂಬ ಎಚ್ಚರಿಕೆ ಸಂದೇಶ ಬರೆದಿರುವುದಾಗಿ ವರದಿಯಾಗಿದೆ.

ಗಲೀಲಿಯಲ್ಲಿ ಪತ್ತೆಯಾದ ಯೆಹೂದಿಗಳ ಸ್ಮಶಾನದಲ್ಲಿನ ಗುಹೆಯೊಂದರಲ್ಲಿ ಈ ಗೋರಿಯನ್ನು ಇತ್ತೀಚೆಗೆ ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದು ಈ ಸಮಾಧಿಯ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಯುನೆಸ್ಕೊ ವಿಶ್ವ ಪಾರಂಪರಿಕ ತಾಣದಲ್ಲಿ 65 ವರ್ಷದಲ್ಲಿ ಪತ್ತೆಯಾದ ಪ್ರಪ್ರಥಮ ಸಮಾಧಿ ಇದು ಎಂದು ತಜ್ಞರು ಹೇಳಿದ್ದಾರೆ. ‘ಈ ಸಮಾಧಿಯನ್ನು ತೆರೆಯುವ ಯಾರಾದರೂ ಶಾಪಗ್ರಸ್ತರಾಗುತ್ತಾರೆ ಎಂದು ಮತಾಂತರಗೊಂಡ ಜಾಕೋಬ್ (ಲೊಕೊಬೊಸ್) ತನ್ನ ಮೇಲೆ ಪ್ರಮಾಣ ಮಾಡುತ್ತಾನೆ’ ಎಂದು ಹಿಬ್ರೂ ಭಾಷೆಯಲ್ಲಿ ಬರೆಯಲಾಗಿದೆ ಎಂದು ಇಸ್ರೇಲ್‌ನ ಮಾಧ್ಯಮ ವರದಿ ಮಾಡಿದೆ.

ಸಮಾಧಿಯ ಚಿತ್ರವನ್ನು ಇಸ್ರೇಲ್ ಸರಕಾರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಜೂನ್ 8ರಂದು ಶೇರ್ ಮಾಡಲಾಗಿದ್ದು ಜತೆಗೆ ನೀಡಿರುವ ಶೀರ್ಷಿಕೆಯಲ್ಲಿ ‘ ನೀವು ತೆರೆಯಬಾರದ ವಸ್ತುಗಳು: ಪಂಡೋರಾ ಪೆಟ್ಟಿಗೆ- ಒಳಾಂಗಣದಲ್ಲಿ ಒಂದು ಛತ್ರಿ- ಪುರಾತನ ಸಮಾಧಿ. ಮತಾಂತರಗೊಂಡ ಜಾಕೊಬ್ ಎಂಬ ಯೆಹೂದಿ ವ್ಯಕ್ತಿಯ ಸುಮಾರು 1,800 ವರ್ಷಗಳಷ್ಟು ಹಿಂದಿನ ಸಮಾಧಿ ಇತ್ತೀಚೆಗೆ ಗಲೀಲಿಯಲ್ಲಿ ಪತ್ತೆಯಾಗಿದೆ. ಸಮಾಧಿಯನ್ನು ತೆರೆಯಬಾರದು ಎಂಬ ಎಚ್ಚರಿಕೆಯ ಸಂದೇಶವಿತ್ತು’ ಎಂದು ಬರೆಯಲಾಗಿದೆ.

ಸಮಾಧಿ ಕಳೆದ ವರ್ಷ ಪತ್ತೆಯಾಗಿದ್ದರೂ ಈ ಬಗ್ಗೆ ಇತ್ತೀಚೆಗಷ್ಟೇ ಮಾಹಿತಿ ಪ್ರಕಟಿಸಲಾಗಿದೆ ಎಂದು ಹೈಫಾ ವಿವಿ ಹಾಗೂ ಇಸ್ರೇಲ್ ಪುರಾತತ್ವ ಪ್ರಾಧಿಕಾರದ ಜಂಟಿ ಹೇಳಿಕೆ ತಿಳಿಸಿದೆ. ಶಾಸನವು ರೋಮನ್ ಅಂತ್ಯಯುಗ ಅಥವಾ ಬೈಝಾಂಟೈನ್ ಆರಂಭಿಕ ಅವಧಿಗೆ ಸೇರಿದ್ದು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News