ನೂತನ ಅಗ್ನಿಪಥ್ ಯೋಜನೆಯ ವಿರುದ್ಧ ಸೇನಾ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ
ಹೊಸದಿಲ್ಲಿ,ಜೂ.15: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರ ಸರಕಾರವು ಮಂಗಳವಾರ ಪ್ರಕಟಿಸಿರುವ ನೂತನ ಅಗ್ನಿಪಥ್ ಯೋಜನೆಯ ವಿರುದ್ಧ ದೇಶಧ ವಿವಿಧೆಡೆಗಳಲ್ಲಿ ಬುಧವಾರ ಪ್ರತಿಭಟನೆಗಳು ಭುಗಿಲೆದ್ದಿದ್ದು,ಸರಕಾರವು ತಮ್ಮನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಯವಜನರು ಆರೋಪಿಸಿದ್ದಾರೆ.
ಬಿಹಾರದ ಮುಝಫ್ಫರ್‌ಪುರ ಮತ್ತು ಬಕ್ಸರ್ ಯೋಜನೆಯ ವಿರುದ್ಧ ತೀವ್ರ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದು,ನಾಲ್ಕು ವರ್ಷಗಳ ನಂತರ ತಾವೇನು ಮಾಡಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ‘ಕೇವಲ ನಾಲ್ಕು ವರ್ಷಗಳ ಸೇವಾವಧಿ ಎಂದರೆ ನಾವು ನಂತರ ಇತರ ಉದ್ಯೋಗಗಳಿಗಾಗಿ ಅಧ್ಯಯನ ಮಾಡಬೇಕು ಮತ್ತು ನಮ್ಮ ವಯಸ್ಸಿನ ಇತರರಿಗಿಂತ ಹಿಂದುಳಿಯುತ್ತೇವೆ ’ಎಂದು ಬಿಹಾರದ ಗುಲ್ಷನ್ ಕುಮಾರ ಹೇಳಿದರು.
ಸೇನೆಯಲ್ಲಿ ಭರ್ತಿಯಾಗಲು ವರ್ಷಗಳಿಂದಲೂ ಸಿದ್ಧತೆಗಳನ್ನು ನಡೆಸುತ್ತಿರುವ ಶಿವಂ ಕುಮಾರ್,‘ಕಳೆದೆರಡು ವರ್ಷಗಳಿಂದಲೂ ನಾನು ಪ್ರತಿದಿನ ಓಡುತ್ತಿದ್ದೇನೆ ಮತ್ತು ದೈಹಿಕವಾಗಿ ಸಜ್ಜಾಗುತ್ತಿದ್ದೇನೆ. ಕೇವಲ ನಾಲ್ಕು ವರ್ಷಗಳಿಗಾಗಿ ನಾನು ಸೇನೆಯನ್ನು ಸೇರಬೇಕೇ ’ ಎಂದು ಪ್ರಶ್ನಿಸಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅನಾವರಣಗೊಳಿಸಿರುವ ಅಗ್ನಿಪಥ್ ಯೋಜನೆಯು ವೇತನ ಮತ್ತು ಪಿಂಚಣಿಗಳ ಮೊತ್ತವನ್ನು ಕಡಿಮೆಗೊಳಿಸುವ ಹಾಗೂ ಶಸ್ತ್ರಾಸ್ತ್ರಗಳ ತುರ್ತು ಖರೀದಿಗೆ ಹಣವನ್ನು ಮುಕ್ತವಾಗಿಸುವ ಉದ್ದೇಶವನ್ನು ಹೊಂದಿದೆ. ಯೋಜನೆಯಡಿ ೧೭.೫ರಿಂದ ೨೧ ವರ್ಷಗಳ ವಯೋಮಿತಿಯಲ್ಲಿಯ ಸುಮಾರು ೪೫,೦೦೦ ಜನರನ್ನು ಆರು ತಿಂಗಳ ತರಬೇತಿ ಸೇರಿದಂತೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಗೊಂಡವರನ್ನು ‘ಅಗ್ನಿವೀರರು’ ಎಂದು ಕರೆಯಲಾಗುವುದು.
ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಅಗ್ನಿವೀರರಿಗೆ ಮಾಸಿಕ 30,000 ರೂ.ನಿಂದ 40000 ರೂ.ವೇತನ ಮತ್ತು ಭತ್ಯೆಗಳನ್ನು ನೀಡಲಾಗುವುದು. ವೈದ್ಯಕೀಯ ಮತ್ತು ವಿಮೆ ಸೌಲಭ್ಯಗಳನ್ನೂ ಅವರು ಪಡೆಯಲಿದ್ದಾರೆ. ನಾಲ್ಕು ವರ್ಷಗಳ ಬಳಿಕ ಕೇವಲ ಶೇ.25ರಷ್ಟು ಅಗ್ನಿವೀರರನ್ನು ಉಳಿಸಿಕೊಳ್ಳಲಾಗುವುದು ಮತ್ತು ಅವರು ಸಾಮಾನ್ಯ ಕೇಡರ್‌ಗೆ ಸೇರ್ಪಡೆಗೊಂಡು ಅಧಿಕಾರಿಯೇತರ ದರ್ಜೆಗಳಲ್ಲಿ ಸಂಪೂರ್ಣ 15 ವರ್ಷಗಳ ಸೇವೆಯನ್ನು ಸಲ್ಲಿಸುತ್ತಾರೆ. ಉಳಿದವರು 11ಲ.ರೂ.ನಿಂದ 12 ಲ.ರೂ.ವರೆಗಿನ ಪ್ಯಾಕೇಜ್‌ನೊಂದಿಗೆ ಸಶಸ್ತ್ರ ಪಡೆಗಳಿಂದ ನಿರ್ಗಮಿಸುತ್ತಾರೆ,ಆದರೆ ಯಾವುದೇ ಪಿಂಚಣಿಗೆ ಅವರು ಅರ್ಹರಾಗಿರುವುದಿಲ್ಲ.
ಅಗ್ನಿವೀರರಾಗಿ ಸೇರುವ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ೧೨ನೇ ತರಗತಿಯ ಪ್ರಮಾಣಪತ್ರ ನೀಡಲು ಸಶಸ್ತ್ರ ಪಡೆಗಳು ಪ್ರಯತ್ನಿಸಲಿವೆ ಎನ್ನಲಾಗಿದೆ,ಆದರೆ ಈವರೆಗೆ ಇದು ಸ್ಪಷ್ಟವಾಗಿಲ್ಲ.
ಮುಝಫ್ಫರ್‌ಪುರದಲ್ಲಿ ರಾ.ಹೆ.18ರಲ್ಲಿ ಟೈರ್‌ಗಳನ್ನು ಮತ್ತು ಹೋರ್ಡಿಂಗ್‌ಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿದ್ದ ಪ್ರತಿಭಟನಾಕಾರರು ‘ನಮಗೆ ಉದ್ಯೋಗ ನೀಡಿ ಅಥವಾ ಸಾವು ನೀಡಿ’ಎಂದು ಘೋಷಣೆಗಳನ್ನು ಕೂಗುತ್ತಿದ್ದರು.
ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕದಿಂದಾಗಿ ಸ್ಥಗಿತಗೊಂಡಿದ್ದ ನಿಯಮಿತ ಸೇನಾ ಭರ್ತಿ ರ್ಯಾಲಿಗಳ ಪುನರಾರಂಭಕ್ಕಾಗಿ ತಾವು ಕಾಯುತ್ತಿದ್ದೆವು,ಬದಲಿಗೆ ಸರಕಾರವು ಈ ಯೋಜನೆಯನ್ನು ತಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಗ್ನಿಪಥ್ ಯೋಜನೆಯ ವಯೋಮಿತಿಯನ್ನು ಸಡಿಲಿಸಬೇಕು ಎಂದು ಅವರು ಆಗ್ರಹಿಸಿದರು.
ನಾಲ್ಕು ವರ್ಷಗಳ ಬಳಿಕ ಸೇವೆಯಿಂದ ಬಿಡುಗಡೆಗೊಳ್ಳುವ ಅಗ್ನಿವೀರರಿಗೆ ಇತರ ಉದ್ಯೋಗಗಳಲ್ಲಿ ಶೇ.೨೦ರಿಂದ ಶೇ.೩೦ ಮೀಸಲಾತಿಯನ್ನು ನೀಡಬೇಕು ಎಂದೂ ಅವರು ಒತ್ತಾಯಿಸಿದರು.
‘ಸರಕಾರವು ನಮ್ಮೊಂದಿಗೆ ಪಬ್‌ಜಿಯಂತೆ ಆಟವಾಡುತ್ತಿದೆ. ನಮಗೆ ನೆರವಾಗಲು ಸರಕಾರವು ಏನಾದರೂ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ’ ಎಂದರು.
ಮಾಜಿ ಸೇನಾಧಿಕಾರಿಗಳು ಸೇರಿದಂತೆ ಹಲವರು ಅಗ್ನಿಪಥ್ ಯೋಜನೆಯನ್ನು ಟೀಕಿಸಿದ್ದಾರೆ. ಯೋಜನೆಯಡಿ ಸೇವಾವಧಿಯನ್ನು ಕನಿಷ್ಠ ಏಳು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಅವಧಿಯ ಬಳಿಕ ಶೇ.೫೦ರಷ್ಟು ಅಗ್ನಿವೀರರನ್ನು ಉಳಿಸಿಕೊಳ್ಳಬೇಕು ಎಂದು ನಿವೃತ್ತ ಮೇ.ಜ.ಬಿ.ಎಸ್.ಧನೋವಾ ಹೇಳಿದರೆ,ಸಶಸ್ತ್ರ ಪಡೆಗಳನ್ನು ಆರ್ಥಿಕ ದೃಷ್ಟಿಯಿಂದ ನೋಡಬಾರದು ಎಂದು ಮೇ.ಜ.ಯಶ್ ಮೋರ್ ತಿಳಿಸಿದರು.