ಅಮೆರಿಕದಲ್ಲಿ ಹಿಂದು ರಾಷ್ಟ್ರವಾದಕ್ಕೆ ಯಾರು, ಎಷ್ಟು ಹಣ ನೀಡುತ್ತಿದ್ದಾರೆ?: ಇಲ್ಲಿದೆ ನಿಗೂಢ ನೂತನ ವರದಿ

Update: 2022-06-16 05:12 GMT

ಅಮೆರಿಕದಲ್ಲಿ ಹಿಂದು ರಾಷ್ಟ್ರವಾದಕ್ಕೆ ಯಾರು ಹಣಕಾಸು ಒದಗಿಸುತ್ತಿದ್ದಾರೆ ಮತ್ತು ಎಷ್ಟು ಹಣ ಎನ್ನುವದನ್ನು ಜೇಸಾ ಮಾಚರ್ ಬರೆದಿರುವ ವರದಿಯು ತೋರಿಸಿದೆ. ‘ಜೆಎಂ’ ಎಂಬ ಎರಡೇ ಅಕ್ಷರಗಳನ್ನು ತನ್ನ ಸಂಕೇತ ನಾಮವಾಗಿ ಬಳಸುವ ನಿಗೂಢ ಲೇಖಕರೋರ್ವರು 2014ರಲ್ಲಿ ಸಿದ್ಧಪಡಿಸಿದ್ದ ವರದಿಯನ್ನು ಮಾಚರ್ ಸೌಥ್ ಏಶ್ಯನ್ ಸಿಟಿಜನ್ಸ್ ವೆಬ್‌ನ ಬೆಂಬಲದೊಂದಿಗೆ ಪರಿಷ್ಕರಿಸಿದ್ದಾರೆ. ‘ಜೆಎಂ’ ಎಂಬ ಲೇಖಕರಿಗಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದರೆ ಅವರ ಡಿಜಿಟಲ್ ಹೆಜ್ಜೆಗುರುತುಗಳು ದೊರೆಯುತ್ತಿಲ್ಲ,ಕೇವಲ ಅವರ ವರದಿಯ ಉಲ್ಲೇಖವನ್ನು ಮಾತ್ರ ಕಾಣಬಹುದು.

ಅತ್ಯಂತ ಇತ್ತೀಚಿನ ದತ್ತಾಂಶಗಳಂತೆ ಕನಿಷ್ಠ 97.7 ಮಿಲಿಯ ಡಾಲರ್‌ಗಳ ನಿವ್ವಳ ಮೌಲ್ಯವನ್ನು ಹೊಂದಿರುವ ಸುಮಾರು ೨೪ ಸಂಸ್ಥೆಗಳನ್ನು ವರದಿಯಲ್ಲಿ ಹೆಸರಿಸಲಾಗಿದೆ. ದತ್ತಿ ಗುಂಪುಗಳು,ಚಿಂತನ ಚಿಲುಮೆಗಳು,ರಾಜಕೀಯ ಸಮರ್ಥಕ ಗುಂಪುಗಳು ಮತ್ತು ಉನ್ನತ ಶಿಕ್ಷಣ ಕುರಿತು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಇವುಗಳಲ್ಲಿ ಸೇರಿವೆ. ಈ ಎಲ್ಲ ಸಂಸ್ಥೆಗಳು ಒಂದಲ್ಲೊಂದು ರೀತಿಯಲ್ಲಿ ಭಾರತದಲ್ಲಿನ ಹಿಂದು ಗುಂಪುಗಳೊಂದಿಗೆ ಸಂಯೋಜಿತಗೊಂಡಿವೆ.

ಸಾರ್ವಜನಿಕವಾಗಿ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡಿರುವ ವರದಿಯು ಅಮೆರಿಕದಲ್ಲಿನ ಗುಂಪುಗಳ ನಡುವಿನ ಹಣಕಾಸು ಸಂಬಂಧಗಳನ್ನು ವಿವರಿಸಿದೆ. ಈ ಗುಂಪುಗಳು ಅಮೆರಿಕದ ಶಿಕ್ಷಣದ ಮೇಲೆ ಪ್ರಭಾವ ಬೀರಲು ಮತ್ತು ಬಿಜೆಪಿ ನೇತೃತ್ವದ ಭಾರತೀಯ ಸರಕಾರದ ಹಿತಾಸಕ್ತಿಗಳಿಗೆ ಒತ್ತು ನೀಡಲು ಮಿಲಿಯಗಟ್ಟಲೆ ಡಾ.ಗಳನ್ನು ವ್ಯಯಿಸುತ್ತಿವೆ ಎಂದು ವರದಿಯು ತಿಳಿಸಿದೆ.

2001-2019ರ ನಡುವಿನ ಸುಮಾರು 20 ವರ್ಷಗಳಲ್ಲಿ ಏಳು ದತ್ತಿ ಗುಂಪುಗಳು ಕನಿಷ್ಠ 158.9 ಮಿ.ಡಾ.ಗಳನ್ನು ವೆಚ್ಚ ಮಾಡಿದ್ದು, ಈ ಪೈಕಿ ಕೆಲವು ಮೊತ್ತವನ್ನು ಭಾರತದಲ್ಲಿಯ ಗುಂಪುಗಳಿಗೆ ರವಾನಿಸಿದ್ದವು. ಇದರ ಸುಮಾರು ಅರ್ಧದಷ್ಟು, ಅಂದರೆ ೮೫.೪ ಮಿ.ಡಾ.ಗಳನ್ನು ೨೦೧೪-೧೯ ನಡುವಿನ ಅವಧಿಯಲ್ಲಿ ವೆಚ್ಚ ಮಾಡಲಾಗಿದೆ.

ಅಮರಿಕದಲ್ಲಿಯ ಹಿಂದು ಗುಂಪುಗಳು ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರೆ, ಹಿಂದುತ್ವ ವಿರೋಧಿ ಕಾರ್ಯಕರ್ತರು ವರದಿಯು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿದೆ,ಆದರೆ ಅದು ಸಾಕಷ್ಟು ಸಾರ್ವಜನಿಕ ಗಮನವನ್ನು ಪಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಅಂದ ಹಾಗೆ ಈ ಹಣ ಬರುತ್ತಿರುವುದಾದರೂ ಎಲ್ಲಿಂದ? ಭಾರತೀಯ ಸಮುದಾಯದಲ್ಲಿನ ದಾನಿಗಳಿಂದ,ಧನಸಂಗ್ರಹ ಅಭಿಯಾನಗಳಿಂದ, ಶ್ರೀಮಂತ ಕೌಟುಂಬಿಕ ಪ್ರತಿಷ್ಠಾನಗಳಿಂದ ಮತ್ತು ಅಮೆರಿಕನ್ ತೆರಿಗೆದಾರರಿಂದ ಈ ಹಣ ಬರುತ್ತಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಭುಟಾಡಾ ಫ್ಯಾಮಿಲಿ ಫೌಂಡೇಷನ್ ಮತ್ತು ಪೂರಣದೇವಿ ಅಗರವಾಲ್ ಫ್ಯಾಮಿಲಿ ಫೌಂಡೇಷನ್‌ಗಳಂತಹ ಸಂಸ್ಥೆಗಳು 2006ರಿಂದ 2018ರ ನಡುವೆ ಹಿಂದು ಅಮೆರಿಕನ್ ಫೌಂಡೇಷನ್ (ಎಚ್‌ಎಎಫ್),ಹಿಂದು ಸ್ವಯಂಸೇವಕ ಸಂಘ,ಅಮೆರಿಕದ ವಿಹಿಂಪ ಘಟಕ(ವಿಎಚ್‌ಪಿಎ), ಏಕಾಲ ವಿದ್ಯಾಲಯ ಫೌಂಡೇಷನ್‌ನಂತಹ ಗುಂಪುಗಳಿಗೆ ಸುಮಾರು ಎರಡು ಮಿ.ಡಾ.ಗಳ ದೇಣಿಗೆಯನ್ನು ನೀಡಿವೆ ಎನ್ನುವುದನ್ನು ತೆರಿಗೆ ದಾಖಲೆಗಳು ತೋರಿಸಿವೆ.

ಈ ಕುಟುಂಬ ಪ್ರತಿಷ್ಠಾನಗಳು ಹಿಂದು ಲಾಭೋದ್ದೇಶರಹಿತ ಗುಂಪುಗಳಿಗೆ ದೇಣಿಗೆಯನ್ನು ನೀಡಿವೆ ಎಂಬ ಅಂಶದ ಆಧಾರದಲ್ಲಿ ಅವುಗಳ ಸೈದ್ಧಾಂತಿಕ ಅಭಿಪ್ರಾಯಗಳನ್ನು ಊಹಿಸಲು ಸಾಧ್ಯವಿಲ್ಲ ಎಂದು ವರದಿಯು ಹೇಳಿದೆಯಾದರೂ ಈ ಕುಟುಂಬ ಪ್ರತಿಷ್ಠಾನಗಳ ಮುಖ್ಯಸ್ಥರು ಸಂಘದೊಂದಿಗೆ ಹೊಂದಿರುವ ಸಂಬಂಧಗಳನ್ನು ಪಟ್ಟಿ ಮಾಡಿದೆ.

2021ರ ಅಲ್ ಜಝೀರಾ ವರದಿಯಂತೆ ಐದು ಬಲಪಂಥೀಯ ಗುಂಪುಗಳಾದ ಏಕಾಲ ವಿದ್ಯಾಲಯ ಫೌಂಡೇಷನ್,ಎಚ್‌ಎಎಫ್, ಇನ್ಫಿನಿಟಿ ಫೌಂಡೇಷನ್,ಸೇವಾ ಇಂಟರ್‌ನ್ಯಾಷನಲ್ ಮತ್ತು  ವಿಎಚ್‌ಪಿಎ  ಇವು ಅಮೆರಿಕದ ತೆರಿಗೆದಾರರು ಹಣವನ್ನು ಪಾವತಿಸಿದ್ದ ದೇಶದ ಕೋವಿಡ್ ಪರಿಹಾರ ನಿಧಿಯಿಂದ 8,33,000 ಡಾ.ಗಳನ್ನು ಸ್ವೀಕರಿಸಿದ್ದವು. ಎಚ್‌ಎಎಫ್ ವರದಿಗಾರ ರಾಕಿಬ್ ಹಮೀದ್ ನಾಯ್ಕ್ ಮತ್ತು ಅಮೆರಿಕ ಮೂಲದ ಹಿಂದುಸ್ ಫಾರ್ ಹ್ಯೂಮನ್ ರೈಟ್ಸ್ ನ ಸದಸ್ಯರು ಸೇರಿದಂತೆ ವರದಿಯಲ್ಲಿ ಹೆಸರಿಸಿದ್ದ ಇತರರ ವಿರುದ್ಧ ಮಾನನಷ್ಟ ಪ್ರಕರಣವನ್ನು ದಾಖಲಿಸಿತ್ತು.

ಈ ಗುಂಪುಗಳು ದೇಣಿಗೆಯಾಗಿ ಪಡೆಯುವ ಹಣವನ್ನು ಯಾವುದಕ್ಕೆ ಬಳಸುತ್ತಿವೆ ಎನ್ನುವುದು ಈಗಲೂ ಗೊಂದಲಮಯವಾಗಿದೆ. ಆದರೆ ಒಂದು ಖಚಿತ ಗುರಿಯೆಂದರೆ ಹಿಂದುಗಳು ಮತ್ತು ಹಿಂದುಧರ್ಮವನ್ನು ಪ್ರತಿನಿಧಿಸುತ್ತಿರುವ ರೀತಿಯನ್ನು ಬದಲಿಸಲು ಅಮೆರಿಕದ ಶಿಕ್ಷಣ ವ್ಯವಸ್ಥೆಯ ಮೇಲೆ ಒತ್ತಡ ಹೇರುವುದು. ೨೦೦೫ ಮತ್ತು 2016ರಲ್ಲಿ ಎಚ್‌ಎಎಫ್ ಮತ್ತು ಅದಕ್ಕೆ ಸಂಯೋಜಿತ ಉಬೆರಾಯ್ ಫೌಂಡೇಷನ್ ಫಾರ್ ರಿಲಿಜಿಯಸ್ ಸ್ಟಡೀಸ್ ಅಮೆರಿಕದ ಪಠ್ಯಪುಸ್ತಗಳಿಂದ ‘ದಲಿತ’ ಶಬ್ದವನ್ನು ತೆಗೆಸಲು ಪ್ರಯತ್ನಿಸಿದ್ದವು ಎಂದು ವರದಿಯು ಬೆಟ್ಟು ಮಾಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News