ಎಟಿಎಂನಿಂದ 500 ರೂ. ಡ್ರಾ ಮಾಡಲು ಹೋದ ವ್ಯಕ್ತಿಗೆ 5 ಪಟ್ಟು ಹೆಚ್ಚುವರಿ ಹಣ; ಎಟಿಎಂಗೆ ಮುಗಿಬಿದ್ದ ಜನ

Update: 2022-06-16 07:01 GMT
ಸಾಂದರ್ಭಿಕ ಚಿತ್ರ (Photo:PTI)

ನಾಗ್ಪುರ: ಎಟಿಎಂನಿಂದ 500 ರೂ. ಡ್ರಾ ಮಾಡಲು ಯತ್ನಿಸಿದ ವ್ಯಕ್ತಿಯೋರ್ವ ಅಚ್ಚರಿಗೆ ಒಳಗಾದ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. 500 ರೂ. ಹಿಂಪಡೆಯಲು ಹೋದ ವ್ಯಕ್ತಿಗೆ 2,500 ರೂ. ಲಭಿಸಿದೆ.

ಆ ವ್ಯಕ್ತಿ ಮತ್ತೊಮ್ಮೆ  500 ರೂ. ಹಿಂಪಡೆಯಲು ಪ್ರಯತ್ನಿಸುವಾಗ ಮತ್ತೊಮ್ಮೆ  2,500ರೂ.  ಪಡೆದಿದ್ದಾರೆ. ಇದು ಬುಧವಾರ ನಾಗ್ಪುರ ನಗರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಸಂಭವಿಸಿದೆ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು ಶೀಘ್ರದಲ್ಲೇ ಎಟಿಎಂನ ಹೊರಗೆ ನಗದು ಹಿಂಪಡೆಯಲು ಅಪಾರ ಜನರು ಜಮಾಯಿಸಿದ್ದರು.

ಬ್ಯಾಂಕ್ ಗ್ರಾಹಕರೊಬ್ಬರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಟಿಎಂ ಅನ್ನು ಮುಚ್ಚುವವರೆಗೂ  ಇದು  ಮುಂದುವರಿಯಿತು. ತಾಂತ್ರಿಕ ದೋಷದಿಂದ ಎಟಿಎಂ ಹೆಚ್ಚುವರಿ ಹಣ ನೀಡುತ್ತಿದೆ ಎಂದು ಖಪರ್ಖೇಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  100 ರೂ. ಮುಖಬೆಲೆಯ ನೋಟುಗಳನ್ನು ವಿತರಿಸುವ ಎಟಿಎಂ ಟ್ರೇನಲ್ಲಿ  500 ರೂ.  ಮುಖಬೆಲೆಯ ಕರೆನ್ಸಿ ನೋಟುಗಳನ್ನು ತಪ್ಪಾಗಿ ಇಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News