ಮೊಟೆರಾ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಬದಲು ಸರ್ದಾರ್ ಪಟೇಲ್ ಹೆಸರು ಮರುನಾಮಕರಣ ಮಾಡುವಂತೆ ಆಗ್ರಹ
ಅಹಮದಾಬಾದ್: ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ತವರು ಜಿಲ್ಲೆ ಖೇಡಾದ ಹನ್ನೊಂದು ಜನರು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣಕ್ಕೆ ಸರ್ದಾರ್ ಪಟೇಲ್ ಅವರ ಹೆಸರನ್ನು ಮರುಸ್ಥಾಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಸಹಿ ಹಾಕಿ ಪತ್ರ ಬರೆದಿದ್ದಾರೆ ಎಂದು ವೈಬ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಫೆಬ್ರವರಿ 24, 2021 ರಂದು ಪಟೇಲ್ ಅವರ ಹೆಸರನ್ನು ಬದಲಿಸಿ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿತ್ತು.
ಕ್ರೀಡಾಂಗಣಕ್ಕೆ ಪಟೇಲ್ ಹೆಸರನ್ನು ಮತ್ತೆ ಇಡಲು ಆಗ್ರಹಿಸಿ ಖೇಡಾ ಜಿಲ್ಲೆಯಲ್ಲಿ ʼಸರ್ದಾರ್ ಸಮ್ಮಾನ್ ಸಂಕಲ್ಪ್ʼ ಬ್ಯಾನರ್ ಅಡಿಯಲ್ಲಿ ಹೊಸ ಆಂದೋಲನವು ನಡೆಯುತ್ತಿದೆ ಎಂದು thewire ವರದಿ ಮಾಡಿದೆ.
"ಸರ್ದಾರ್ ಪಟೇಲ್ ಅವರು 562 ರಾಜಪ್ರಭುತ್ವದ ರಾಜ್ಯಗಳನ್ನು ಭಾರತೀಯ ಒಕ್ಕೂಟದೊಂದಿಗೆ ಸಂಯೋಜಿಸಿದ್ದರು. ಸರ್ದಾರ್ ಪಟೇಲ್ ಅವರ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡುವುದು ಸರ್ದಾರ್ ಅವರ ಅವಮಾನವಾಗಿದೆ” ಎಂದು ವೈಬ್ಸ್ ಆಫ್ ಇಂಡಿಯಾ ಪತ್ರದಿಂದ ಉಲ್ಲೇಖಿಸಿ ವರದಿ ಮಾಡಿದೆ.
ಪತ್ರಕ್ಕೆ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ನಾಯಕ ಅತುಲ್ ಪಟೇಲ್, ಭಗವತ್ ಪರ್ಮಾರ್, ಬಾಬುಭಾಯಿ ಸೋಲಂಕಿ, ಮಂಗಲ್ ಭಾಯಿ ಮಕ್ವಾನಾ, ನತುಭಾಯಿ ಚೌಹಾನ್, ಘನಶ್ಯಾಮ್ ಮಕ್ವಾನಾ, ಅಮಾನುಲ್ಲಾ ಖಾನ್ ವಿ ಪಠಾಣ್, ಭರತ್ ಪರ್ಮಾರ್, ಮುಸ್ತುಫಾ ಮಲೆಕ್ ಬರೋಟ್ ಮತ್ತು ತೌಫಿಕ್ಭಾಯ್ ಎಂಬ 11 ಜನರು ರಕ್ತದಲ್ಲಿ ಸಹಿ ಹಾಕಿದ್ದಾರೆ.
“ಪತ್ರವು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿತ್ತು. ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಮರುನಾಮಕರಣ ಮಾಡದಿದ್ದರೆ ನಾವು ದೊಡ್ಡ ಆಂದೋಲನವನ್ನು ನಡೆಸುತ್ತೇವೆ” ಎಂದು ಸಹಿ ಮಾಡಿದವರಲ್ಲಿ ಒಬ್ಬರಾದ ಅತುಲ್ ಪಟೇಲ್ ಹೇಳಿದ್ದಾರೆ.