ಭಾರತದಲ್ಲಿನ ನೆಲಸಮ ಕಾರ್ಯಾಚರಣೆಗಳು ಫೆಲೆಸ್ತೀನಿಯರ ವಿರುದ್ಧದ ಇಸ್ರೇಲ್ ತಂತ್ರಗಳನ್ನೇ ಹೋಲುತ್ತಿವೆ

Update: 2022-06-16 17:02 GMT
Photo: PTI, Reuters 

ಮನೆ ಎಂದರೆ ಕೇವಲ ಸಿಮೆಂಟ್ ಮತ್ತು ಉಕ್ಕಿನಿಂದ ಮಾಡಲಾದ ರಚನೆಯಲ್ಲ. ಅದು ಭದ್ರತೆ,ಸ್ಥಿರತೆ ಮತ್ತು ಖಾಸಗಿತನದ ಒಯಾಸಿಸ್ ಆಗಿದೆ. ಅದು ನೆನಪುಗಳು ಮತ್ತು ಆಕಾಂಕ್ಷೆಗಳ ಒಯಾಸಿಸ್ ಆಗಿದೆ. ಅದು ಭಾವನೆಗಳನ್ನು ಕರಗಿಸುವ ಮಡಕೆಯಾಗಿದೆ. ಅದು ಸಮಯ ಮತ್ತು ಸ್ಥಳದ ಸಂಕೀರ್ಣ ಸಮುಚ್ಚಯವಾಗಿದೆ. ಅದು ಹಲವಾರು ಸಂತಸಗಳು ಮತ್ತು ದುಃಖಗಳ ಸಂಗ್ರಹವಾಗಿದೆ. ವಿಚಿತ್ರವಾದ ಅಸಂಬದ್ಧತೆಗಳ ಈ ಜಗತ್ತಿನಲ್ಲಿ ಅದು ಹೃದಯಕ್ಕೆ ಆಪ್ತವಾದ ತಾಣವಾಗಿದೆ.

ಹೀಗಾಗಿಯೇ ಮನೆಯನ್ನು ಕೆಡವುವ ಕೃತ್ಯವು ಅತ್ಯಂತ ಕ್ರೂರವಾಗಿದೆ. ಅದು ನಾಲ್ಕು ಗೋಡೆಗಳು ಮತ್ತು ಛಾವಣಿಯ ಮೇಲಿನ ಭೌತಿಕ ಹಲ್ಲೆಗಿಂತ ಹೆಚ್ಚಾಗಿದೆ. ಅದು ನೆನಪುಗಳ ವಿರುದ್ಧ ಭಾವನಾತ್ಮಕ ಆಕ್ರಮಣವಾಗಿದೆ,ಆಶೆಗಳು ಮತ್ತು ಕನಸುಗಳ ಹಲವಾರು ಪದರಗಳ ಮೇಲೆ ನಿರ್ಮಿಸಲಾದ ಒಂದಿಡೀ ಜಗತ್ತಿನ ಹೃದಯದ ಮೇಲಿನ ದಾಳಿಯಾಗಿದೆ. ಅದು ನೆನಪುಗಳನ್ನು ಸಂಪೂರ್ಣವಾಗಿ ಅಳಿಸುವ ಕೃತ್ಯವಾಗಿದೆ.

ನೆರೆಕರೆಯವರು ಅಥವಾ ದೂರದ ಅಪರಿಚಿತರು ಅಸಹಾಯಕತೆಯಿಂದ ಅಥವಾ ಸಂತೋಷದಿಂದ ಟಿವಿಗಳಲ್ಲಿ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ವೀಕ್ಷಿಸುತ್ತಿರುವಾಗ ಬುಲ್ಡೋಜರ್‌ಗಳು ಹಾಡಹಗಲೇ ನಿಮ್ಮ ಮನೆಯನ್ನು ಧ್ವಂಸಗೊಳಿಸುತ್ತಿರುವುದನ್ನು ನೋಡುವುದಕ್ಕಿಂತ ಹೆಚ್ಚು ಅವಮಾನಕಾರಿ ಬೇರೆ ಯಾವುದಿದೆ?
                      
ಇಸ್ರೇಲಿ ‘ಯುದ್ಧಾಪರಾಧಗಳು’
 
ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಇಸ್ರೇಲ್ ‘ದಂಡನಾತ್ಮಕ ಧ್ವಂಸ ಕಾರ್ಯಾಚರಣೆ’ಗಳು ಎಂದು ಕರೆಯಲಾಗುವ ಕೃತ್ಯಗಳನ್ನು ಎಸಗುತ್ತಿರುತ್ತದೆ. ಇಸ್ರೇಲ್ ಅಧಿಕಾರಿಗಳು ‘ಭಯೋತ್ಪಾದನೆ’ಗೆ ದಂಡನೆಯಾಗಿ ಫೆಲೆಸ್ತೀನಿ ಮನೆಗಳನ್ನು ಆಗಾಗ್ಗೆ ಬುಲ್ಡೋಜರ್‌ಗಳಿಂದ ನೆಲಸಮಗೊಳಿಸುತ್ತಲೇ ಇರುತ್ತಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ಯುದ್ಧಾಪರಾಧವಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

ದಂಡನಾತ್ಮಕ ನೆಲಸಮ ನೀತಿಯ ಕುರಿತು ಗಮನಾರ್ಹ ಅಂಶವೆಂದರೆ ಅದು ನೇರವಾಗಿ ಆರೋಪಿಗಳ ಬದಲು ಆರೋಪಿಗಳಿಗೆ ಸಂಬಂಧಿಸಿದವರನ್ನು ಶಿಕ್ಷಿಸಲು ರೂಪಿಸಲಾದ ಸಾಮೂಹಿಕ ಶಿಕ್ಷೆಯ ರೂಪವಾಗಿದೆ. ಫೆಲೆಸ್ತೀನ್‌ನ್ನು ಬ್ರಿಟಿಷರು ಆಳುತ್ತಿದ್ದಾಗ 1923ರಲ್ಲಿ ಆರಂಭಗೊಂಡಿದ್ದ ನೆಲಸಮ ಕಾರ್ಯಾಚರಣೆಗಳು ಸುಮಾರು ಎರಡು ದಶಕಗಳಿಗೂ ಹೆಚ್ಚು ಸಮಯ ಚಾಲ್ತಿಯಲ್ಲಿದ್ದವು. ಅಧಿಕಾರಿಗಳು ಅದನ್ನು ಬಂಡುಕೋರರ ವಿರುದ್ಧ ‘ತಡೆಗಟ್ಟುವಿಕೆ ’ಅಸ್ತ್ರವಾಗಿ ಬಳಸಿದ್ದರು.

ಇಂದು ಭಾರತದಲ್ಲಿ ಸಂಭವಿಸುತ್ತಿರುವುದು ಇಸ್ರೇಲ್‌ನೊಂದಿಗೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ. ರವಿವಾರ ಉ.ಪ್ರದೇಶದ ಪ್ರಯಾಗರಾಜ್‌ನಲ್ಲಿ ಅಧಿಕಾರಿಗಳು ಸಾಮಾಜಿಕ ಕಾರ್ಯಕರ್ತ ಜಾವೇದ್ ಮುಹಮ್ಮದ್‌ರ ಮನೆಯನ್ನು ಧ್ವಂಸಗೊಳಿಸಿದಾಗ ಅವರು ಅದಾಗಲೇ ಬಂಧನದಲ್ಲಿದ್ದರು. ಆದರೆ ನೆಲಸಮವು ಮಹಮ್ಮದ್‌ರ ಇಡೀ ಕುಟುಂಬ (ಪತ್ನಿ ಮತ್ತು ಇಬ್ಬರು ಪುತ್ರಿಯರು)ವನ್ನು ಶಿಕ್ಷಿಸುವ ತನ್ನ ಉದ್ದೇಶವನ್ನು ಪೂರೈಸಿತ್ತು. ಪುತ್ರಿಯರ ಪೈಕಿ ಅಫ್ರೀನಾ ಫಾತಿಮಾ ಕೂಡ ತನ್ನ ಪ್ರತಿಭಟನೆ ಧ್ವನಿಗಾಗಿ ಪೊಲೀಸರ ನಿಗಾದಲ್ಲಿದ್ದಾರೆ. ಇತರರು ಮುಹಮ್ಮದ್‌ರೊಂದಿಗೆ ಕೌಟುಂಬಿಕ ಸಂಬಂಧವನ್ನು ಹೊಂದಿದ್ದರು ಎಂಬ ‘ಅಪರಾಧ’ಕ್ಕಾಗಿ ಶಿಕ್ಷಿಸಲ್ಪಟ್ಟಿದ್ದಾರೆ.
  
ಆದರೆ ಇದು ಮುಹಮ್ಮದ್ ಮತ್ತು ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ನೆಲಸಮ ಕಾರ್ಯಾಚರಣೆಯನ್ನು ಸರಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗುತ್ತಿರಬಹುದಾದ ಇತರ ಮುಸ್ಲಿಮ್ ಕಾರ್ಯಕರ್ತರಿಗೆ ಭೀತಿಯನ್ನೊಡ್ಡಲು ಎಚ್ಚರಿಕೆಯಿಂದ ರೂಪಿಸಲಾಗಿದೆ. ಯುದ್ಧದಂತೆ ಇದೂ ರಾಜಕೀಯ ಅಸ್ತ್ರವಾಗಿದೆ.

ಭಾರತ ಮತ್ತು ಇಸ್ರೇಲ್‌ನಲ್ಲಿ ವಿಲಕ್ಷಣ ಹೋಲಿಕೆಯನ್ನು ಹೊಂದಿರುವುದು ನೀತಿಯ ಉದ್ದೇಶ ಮಾತ್ರವಲ್ಲ,ಅವುಗಳ ಅಧಿಕಾರಿ ವರ್ಗಗಳಲ್ಲಿನ ಮೊಂಡುತನವೂ ಇಂತಹುದೇ ಹೋಲಿಕೆಯನ್ನು ಹೊಂದಿದೆ.

ಭಯೋತ್ಪಾದಕರು ಮತ್ತು ಅವರ ಸಹಚರರು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಿದರೆ ಮತ್ತು ಅಮಾಯಕ ಜನರಿಗೆ ಹಾನಿಯನ್ನುಂಟು ಮಾಡಿದರೆ ಅದಕ್ಕಾಗಿ ಅವರು ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ ಎಂಬ ಕಠಿಣ ಸಂದೇಶದ ರವಾನೆ ನೆಲಸಮ ಕಾರ್ಯಾಚರಣೆಗಳ ಉದ್ದೇಶವಾಗಿದೆ ಎಂದು ಇಸ್ರೇಲಿ ಅಧಿಕಾರಿಗಳು ಅಧಿಕೃತವಾಗಿ ಹೇಳಿದ್ದಾರೆ. ಭಾರತದಲ್ಲಿ ಆಡಳಿತ ಬಿಜೆಪಿಯ ಹಿರಿಯ ನಾಯಕರು ಶಿಕ್ಷೆಯ ರೂಪದಲ್ಲಿ ಮನೆಗಳನ್ನು ನೆಲಸಮಗೊಳಿಸುವ ಬಗ್ಗೆ ಅಬ್ಬರಿಸುತ್ತಿದ್ದಾರೆ.

ಆದರೆ ಭಾರತ ಮತ್ತು ಇಸ್ರೇಲ್‌ಗಳಲ್ಲಿ ಕೆಳಮಟ್ಟದ ಅಧಿಕಾರಿಗಳು ತೆರವು ನೋಟಿಸ್‌ನಂತಹ ಸಾಧನಗಳ ಮೂಲಕ ಕಾನೂನುಬದ್ಧತೆಯ ಸೋಗು ಹಾಕುತ್ತಿದ್ದಾರೆ. ಇದನ್ನು ನಿರ್ದಿಷ್ಟ ವಿಧಾನದಲ್ಲಿ ಮಾಡಲಾಗುತ್ತಿದೆ, ನಿವಾಸಿಗಳಿಗೆ ಕಾನೂನಿನ ಮೊರೆ ಹೋಗಲು ಅವಕಾಶ ಸಿಗದಂತೆ ತೆರವು ಕಾರ್ಯಾಚರಣೆಗೆ ಕೆಲವೇ ಗಂಟೆಗಳ ಮೊದಲು ನೋಟಿಸ್‌ಗಳನ್ನು ಜಾರಿಗೊಳಿಸಲಾಗುತ್ತದೆ. ಜೂ.12ರಂದು ಮುಹಮ್ಮದ್‌ರ ಮನೆಯನ್ನು ಧ್ವಂಸಗೊಳಿಸುವ ಮುನ್ನವೂ ಇದೇ ರೀತಿ ಮಾಡಲಾಗಿತ್ತು. ಅಧಿಕಾರಿಗಳ ಈ ತಂತ್ರವನ್ನು ಆಡಳಿತ ಪರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಪರಿಸರ ವ್ಯವಸ್ಥೆ ನೆಲಸಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ.
               
ಪೂರ್ವನಿದರ್ಶನಕ್ಕೆ ನಾಂದಿ

ಮುಹಮ್ಮದ್‌ರದು ಇತ್ತೀಚಿನ ದಿನಗಳಲ್ಲಿ ಬುಲ್ಡೋಜರ್ ಕಾರ್ಯಾಚರಣೆಗಳಿಗೆ ಗುರಿಯಾಗಿರುವ ಮೊದಲ ಮನೆಯೇನಲ್ಲ. ಇದಕ್ಕೂ ಮುನ್ನ ಬಿಜೆಪಿ ಆಡಳಿತದ ಉ.ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಇಂತಹ ಸರಣಿ ತೆರವು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.

ಆದಾಗ್ಯೂ ಮುಸ್ಲಿಮರ ಮನೆಗಳ ನೆಲಸಮವು ಬಿಜೆಪಿ ಆಡಳಿತದ ಹಿಂದಿ ಭಾಷಿಕ ಪ್ರದೇಶದಲ್ಲಿ ಅಥವಾ ಭಾರತದಲ್ಲಿ ಪಕ್ಷದ ಆಡಳಿತದ ಸಂಪೂರ್ಣ ಹೊಸ ಅಥವಾ ವಿಶಿಷ್ಟ ಲಕ್ಷಣವೇನಲ್ಲ. ಉದಾಹರಣೆಗೆ ಅಸ್ಸಾಮಿನಲ್ಲಿಯ ಬಿಜೆಪಿ ನೇತೃತ್ವದ ಸರಕಾರವು 2019ರಿಂದಲೇ ಆಗಾಗ್ಗೆ ಇಂತಹ ನೆಲಸಮ ಕಾರ್ಯಾಚರಣೆಗಳನ್ನು ನಡೆಸುತ್ತಲೇ ಇದೆ. ವಾಸ್ತವದಲ್ಲಿ ಹೆಚ್ಚಾಗಿ ಬಂಗಾಳ ಮೂಲದ ಮುಸ್ಲಿಮರ ಗುಡಿಸಲುಗಳನ್ನು ನೆಲಸಮಗೊಳಿಸುವ ಪರಿಪಾಠ ಅಸ್ಸಾಮಿನಲ್ಲಿ ಬಿಜೆಪಿ ಆಡಳಿತಕ್ಕೆ ಮೊದಲಿನಿಂದಲೂ ಇತ್ತು. ಇವು ಈಗ ಹಿಂದಿ ಹೃದಯಭಾಗದಲ್ಲಿ ನಡೆಯುತ್ತಿರುವ ನೆಲಸಮ ಕಾರ್ಯಾಚರಣೆಗಳಷ್ಟೇ ಹಿಂಸಾತ್ಮಕ ಮತ್ತು ಅಮಾನವೀಯವಾಗಿದ್ದರೂ ಕೊಂಚ ಭಿನ್ನವಾಗಿದ್ದವು. 

ಇಸ್ರೇಲಿ ಶೈಲಿಯ ದಂಡನಾತ್ಮಕ ಕಾರ್ಯಾಚರಣೆಗಳಂತಲ್ಲದೆ ಇವು ಅಕ್ರಮ ವಲಸಿಗರು,ವಿದೇಶಿಯರು ಮತ್ತು ಹೊರಗಿನವರು ಎಂದು ಪರಿಗಣಿಸಲಾದ ಜನರ ಗುಂಪುಗಳನ್ನು ಭೌತಿಕವಾಗಿ ಹೊರಹಾಕುವ ಪ್ರಾಥಮಿಕ ಉದ್ದೇಶವನ್ನು ಹೊಂದಿದ್ದವು.
ಹೀಗಾಗಿ ದಂಡನಾತ್ಮಕ ನೆಲಸಮ ಕಾರ್ಯಾಚರಣೆಯ ಉದಯೋನ್ಮುಖ ಪ್ರವೃತ್ತಿಯು ಕೇವಲ ಹಿಂದಿ ಭಾಷಿಕ ರಾಜ್ಯಗಳ ನೀತಿಯಲ್ಲ,ಆದರೆ ಅದನ್ನು ಬಿಜೆಪಿ ಆಡಳಿತದ ರಾಜ್ಯಗಳು ವ್ಯವಸ್ಥಿತವಾಗಿ ಅಳವಡಿಸಿಕೊಳ್ಳುತ್ತಿವೆ. ಪುನರಾವರ್ತಿತ ಕಾರ್ಯಾಚರಣೆಗಳ ಮೂಲಕ ಒಂದು ರೀತಿಯ ಕಾರ್ಯಕಾರಿ ಪೂರ್ವ ನಿದರ್ಶನವನ್ನು ಸ್ಥಾಪಿಸುವ ಪರಿಕಲ್ಪನೆಯಿದ್ದಂತಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿ ಭಾರತ ಮತ್ತು ಇಸ್ರೇಲ್ ಇನ್ನಷ್ಟು ನಿಕಟವಾಗಿವೆ ಎನ್ನುವುದು ನಿಜ. ಸಾಮರ್ಥ್ಯ ನಿರ್ಮಾಣಕ್ಕಾಗಿ ಒಂದು ಮಿಲಿಟರಿ ದೇಶವು ಇನ್ನೊಂದನ್ನು ನೆಚ್ಚಿಕೊಂಡಿರುವಾಗ ಪುನರುತ್ಥಾನಗೊಂಡಿರುವ ಈ ಅನ್ಯೋನ್ಯತೆಯು ಎರಡು ಸಮಾನ ಜನಾಂಗೀಯ ಸಿದ್ಧಾಂತಗಳಾದ ಹಿಂದುತ್ವ ಮತ್ತು ಝಿಯೋನಿಸಂ ಪರಸ್ಪರ ಚೆಲ್ಲಾಟವಾಗಿದೆ.
  
ಮೋದಿಯವರ ಭಾರತವು ದಿನದಿಂದ ದಿನಕ್ಕೆ ಇಸ್ರೇಲ್‌ನಂತೆ ಕಾಣುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ ನಿಜವಾದ ದುರಂತವೆಂದರೆ ಭಾರತದ ಹೆಚ್ಚಿನ ಜನಸಂಖ್ಯೆಯು ಈ ರೂಪಾಂತರದ ಬಗ್ಗೆ ಭೀತಿ ಪಡುವ ಬದಲು ಅದನ್ನು ಆನಂದಿಸುತ್ತಿದ್ದಾರೆ. ಅವರು ಬುಲ್ಡೋಜರ್‌ನ್ನು ರಾಷ್ಟ್ರೀಯ ರೋಲ್ ಮಾಡೆಲ್ ಆಗಿ ಸ್ವೀಕರಿಸಲು ಬಯಸಿದ್ದಾರೆ. ಆದರೆ ಗಾಝಾ ಮತ್ತು ಪಶ್ಚಿಮ ದಂಡೆಗೆ ಸೀಮಿತಗೊಳಿಸಲ್ಪಟ್ಟಿರುವ ಫೆಲೆಸ್ತೀನಿಯರ ಸಂಕಷ್ಟಗಳು ತೋರಿಸಿರುವಂತೆ ಈ ರೂಪಾಂತರವು ದೀರ್ಘಾವಧಿಯ ಮಾನವ ದುರಂತ ಮತ್ತು ಸಾಮೂಹಿಕ ಪರಪೀಡಾನಂದದಲ್ಲಿ ಮಾತ್ರ ಕೊನೆಯಾಗಬಲ್ಲದು

Writer - ಅಂಗ್ಶುಮಾನ್ ಚೌಧುರಿ (scroll.in)

contributor

Editor - ಅಂಗ್ಶುಮಾನ್ ಚೌಧುರಿ (scroll.in)

contributor

Similar News