×
Ad

ನೆಹರೂ-ಗಾಂಧಿ ಪರಂಪರೆಯನ್ನು ನಾಶಪಡಿಸಲು ಬಿಜೆಪಿ ಯತ್ನ: ಶಿವಸೇನೆ‌

Update: 2022-06-16 22:15 IST

ಹೊಸದಿಲ್ಲಿ, ಜೂ. ೧೬: ಬಿಜೆಪಿ ಕಾಂಗ್ರೆಸ್ ನಾಯಕರಾದ ಜವಾಹರ್‌ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ನೆನಪನ್ನು ಮಾತ್ರ ಅಳಿಸಲು ಬಯಸುತ್ತಿಲ್ಲ, ಬದಲಾಗಿ ನೆಹರೂ-ಗಾಂಧಿ ಪರಂಪರೆಯನ್ನ ನಾಶ ಮಾಡಲು ಬಯಸಿದೆ ಎಂದು ಶಿವಸೇನೆ ಗುರುವಾರ ಪ್ರತಿಪಾದಿಸಿದೆ.  

ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯಲ್ಲಿ ಶಿವಸೇನೆ, ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದಕ್ಕೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುವ ಮೂಲಕ ವ್ಯಕ್ತಿ ಎಷ್ಟೇ ಬಲಶಾಲಿಯಾಗಿದ್ದರೂ ಯಾರ ಕೊರಳನ್ನು ಕೂಡ ಹಿಡಿಯಬಹುದು   ಎಂದು ತೋರಿಸಲು ಬಿಜೆಪಿ  ಪ್ರಯತ್ನಿಸುತ್ತಿದೆ. ಇದು ಅಧಿಕಾರದ ದುರಹಂಕಾರ ಎಂದು ‘ಸಾಮ್ನಾ’ ಬಣ್ಣಿಸಿದೆ. 

ಇಂದು ಅದು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ. ನಾಳೆ ಅದು ಯಾರೂ ಆಗಿರಬಹುದು. ಆದುದರಿಂದ ಕಾನೂನಿನ ಸಮಾನತೆ ಹೇಗೆ ಸಾಧ್ಯ ಎಂದು ಅದು ಪ್ರಶ್ನಿಸಿದೆ. ಸರಕಾರದ ಈ ಕೃತ್ಯ ವಿರೋಧಿಗಳನ್ನು ನಾಶಮಾಡಲು ಹಿಟ್ಲರ್‌ನಂತೆ ವಿಷಕಾರಿ ಗ್ಯಾಸ್ ಚೇಂಬರ್ ನಿರ್ಮಿಸಿರುವುದಕ್ಕೆ ಹತ್ತಿರವಾಗಿದೆ ಎಂದು ಶಿವಸೇನೆ ಪ್ರತಿಪಾದಿಸಿದೆ. 

ಶಿವಸೇನೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಸಮಾಜವಾದಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ)ನಂತಹ ಪಕ್ಷಗಳು ಜಾರಿ ನಿರ್ದೇಶನಾಲಯದ ನಿಗಾದಲ್ಲಿ ಇವೆ. ಈ ಸಂಸ್ಥೆ ಬಿಜೆಪಿ ರಾಜಕಾರಣಿಗಳ ಮೇಲೆ ಎಂದಿಗೂ ದಾಳಿ ಮಾಡುವುದನ್ನು ಎಂದಿಗೂ ಕಾಣಲು ಸಾಧ್ಯವಿಲ್ಲ ಎಂದು  ಅದು ಹೇಳಿದೆ. 

ಜಾರಿ ನಿರ್ದೇಶನಾಲಯದ ಏಕೈಕ ಕೆಲಸ (ಮಹಾರಾಷ್ಟ್ರದ ಮಾಜಿ ಸಚಿವ) ಅನಿಲ್ ದೇಶಮುಖ್, (ರಾಜ್ಯ ಸಚಿವ) ನವಾಬ್ ಮಲಿಕ್ (ಇಬ್ಬರೂ ಕಾರಾಗೃಹದಲ್ಲಿ ಇದ್ದಾರೆ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ಸಂಜಯ್ ರಾವತ್, ಅನಿಲ್ ಪರಬ್ (ಇಬ್ಬರೂ ಶಿವಸೇನೆ ನಾಯಕರು) ಹಾಗೂ ಲಾಲೂ ಪ್ರಸಾದ್ ಯಾದವ್ (ಆರ್‌ಜೆಡಿ) ವಿರುದ್ಧ ಆರೋಪ ರೂಪಿಸುವುದು ಎಂದು ಶಿವಸೇನೆ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News