ಅಸ್ಸಾಂ, ಮೇಘಾಲಯ ಪ್ರವಾಹಕ್ಕೆ ಮತ್ತೆ ಒಂಬತ್ತು ಬಲಿ

Update: 2022-06-17 01:52 GMT
(Photo - Twitter/ @sdma_assam)

ಗುವಾಹತಿ/ ಶಿಲ್ಲಾಂಗ್: ಮುಂಗಾರು ಅಬ್ಬರದಿಂದಾಗಿ ಪ್ರವಾಹ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಈಶಾನ್ಯ ಭಾರತದಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ಆರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮತ್ತೆ ಬಲಿಯಾಗಿದ್ದಾರೆ.

ಭಾರಿ ಮಳೆಯಿಂದಾಗಿ ಮನೆಗಳು ಕೊಚ್ಚಿಕೊಂಡು ಹೋಗಿದ್ದು, ಭೂಕುಸಿತದಿಂದಾಗಿ ರಾಜ್ಯದ ಹಲವು ಪ್ರವಾಹ ಪೀಡಿತ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ.

ಮೇಘಾಲಯದಲ್ಲಿ ನಾಲ್ವರು ಮಕ್ಕಳು ಮತ್ತು ಮಹಿಳೆ ಸೇರಿ ಒಟ್ಟು ಐದು ಮಂದಿ ಮೃತಪಟ್ಟಿದ್ದು, ಅಸ್ಸಾಂನ ಗೋವಲ್‍ಪಾರ ಎಂಬಲ್ಲಿ ನಡೆದ ಭೂಕುಸಿತದಲ್ಲಿ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿದ್ದಾರೆ.

ಕಳೆದ ಕೆಲ ತಿಂಗಳಿಂದ ಪ್ರವಾಹ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಈಶಾನ್ಯ ಭಾರತದಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಮೃತಪಟ್ಟವರ ಸಂಖ್ಯೆ 50ಕ್ಕೇರಿದೆ.

ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್ ಜಿಲ್ಲೆಯಲ್ಲಿ ವ್ಯಾಪಕ ಹಾನಿಯಾಗಿದ್ದು, ರಸ್ತೆ ಮತ್ತು ಹೆದ್ದಾರಿಗಳು ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿವೆ. ಮೇಘಾಲಯಕ್ಕೆ ಅಸ್ಸಾಂ, ಮಿಜೋರಾಂ, ತ್ರಿಪುರಾ ಮತ್ತು ಮಣಿಪುರದ ಇತರ ಭಾಗಗಳ ಜತೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-6 ಇನ್ನೂ ಮುಚ್ಚಿದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್‍ನ ನಾಂಗ್‍ಸ್ಪಂಗ್ ಸರ್ಕಲ್ ವ್ಯಾಪ್ತಿಯ ಲೈತಲರೆಮ್ ಎಂಬಲ್ಲಿ ಮನೆ ಕುಸಿದು ಇಬ್ಬರು ಬಾಲಕಿಯರು ಹಾಗೂ ಇಬ್ಬರು ಬಾಲಕರು ಅವಶೇಷಗಳಡಿ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ಜಶಿಯಾರ್ ಗ್ರಾಮದಲ್ಲಿ ಮನೆ ಕುಸಿದು 25 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News