×
Ad

'ಅಗ್ನಿಪಥ್' ಯೋಜನೆಗೆ ವಿರೋಧ : ಬಿಹಾರ, ಉತ್ತರಪ್ರದೇಶದಲ್ಲಿ ರೈಲುಗಳಿಗೆ ಬೆಂಕಿ, ನಿಲ್ದಾಣಗಳ ಧ್ವಂಸ

Update: 2022-06-17 10:51 IST
Photo:PTI

ಹೊಸದಿಲ್ಲಿ: ಸೇನೆಯಲ್ಲಿ ಹೊಸ  ನೇಮಕಾತಿ ನೀತಿ 'ಅಗ್ನಿಪಥ್‌' ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಸತತ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ  ಬೆಳಗ್ಗೆ ಉತ್ತರ ಪ್ರದೇಶ ಹಾಗೂ  ಬಿಹಾರದಲ್ಲಿ ಉದ್ರಿಕ್ತ ಜನಸಮೂಹ ರೈಲುಗಳಿಗೆ ಬೆಂಕಿ ಹಚ್ಚಿದೆ. ಆದಾಗ್ಯೂ ಕೇಂದ್ರ ಸರಕಾರವು ಈ  ಯೋಜನೆಯನ್ನು ಸಮರ್ಥಿಸಿಕೊಂಡಿದೆ.

ಕೇಂದ್ರ ಸರಕಾರದ  ಹೊಸ ನೇಮಕಾತಿ ನೀತಿಯ ವಿರುದ್ಧ ತೀವ್ರ ಪ್ರತಿಭಟನೆಯ ನಡುವೆ ಉತ್ತರ ಪ್ರದೇಶ ಹಾಗೂ  ಬಿಹಾರದಲ್ಲಿ ಇಂದು ಸತತ ಮೂರನೇ ದಿನವೂ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ.  ಸಾರ್ವಜನಿಕರು ಹಾಗೂ  ಪೊಲೀಸ್ ವಾಹನಗಳ ಮೇಲೆ ದಾಳಿ ಮಾಡಲಾಗಿದೆ.

ಕೈಯ್ಯಲ್ಲಿ ಕೋಲುಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಾಕಾರರ ಇನ್ನೊಂದು ಗುಂಪು ಪೂರ್ವ ಉತ್ತರ ಪ್ರದೇಶದ ರೈಲ್ವೇ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿತು. ಯುವಕನೊಬ್ಬ ಕೋಲಿನಿಂದ  ರೈಲ್ವೇ ನಿಲ್ದಾಣದಲ್ಲಿ ಅಂಗಡಿಗಳು ಹಾಗೂ ಬೆಂಚುಗಳನ್ನು ಒಡೆಯುವ ದೃಶ್ಯ ವೀಡಿಯೊದಲ್ಲಿ ಕಂಡುಬಂದಿದೆ.

ಶುಕ್ರವಾರ ಬೆಳಗ್ಗೆ ಸೇನಾ ಆಕಾಂಕ್ಷಿಗಳು ಸಮಸ್ತಿಪುರದ ಮೊಯಿಹುದ್ದೀನ್ ನಗರದಲ್ಲಿ ರೈಲಿನ ಆರು ಕಂಪಾರ್ಟ್‌ಮೆಂಟ್‌ಗಳನ್ನು ಹಾಗೂ  ಲಖಿಸರೈ ನಿಲ್ದಾಣದಲ್ಲಿ ಮತ್ತೊಂದು ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದರು.

ಎರಡೂ ಘಟನೆಗಳಲ್ಲಿ, ಪ್ರತಿಭಟನಾಕಾರರು ಕೋಚ್ ಗೆ ಬೆಂಕಿ ಹಚ್ಚುವ ಮೊದಲು ಅವುಗಳನ್ನು ಖಾಲಿ ಮಾಡಿದ್ದರಿಂದ ಯಾರಿಗೂ ಗಾಯವಾಗಿಲ್ಲ. ಆದಾಗ್ಯೂ, ಪಾಟ್ನಾ-ಹೌರಾ ಹಾಗೂ  ಪಾಟ್ನಾ-ಭಾಗಲ್ಪುರ್ ಮಾರ್ಗಗಳಲ್ಲಿ ಅರ್ಧ-ಡಜನ್ ರೈಲುಗಳ ಸಂಚಾರ ವಿಳಂಬವಾಗಿವೆ.

ಆಕಾಂಕ್ಷಿಗಳು ಅರಾ ಹಾಗೂ  ಲಖಿಸಾರೈ ಬಳಿಯ ಬಿಹಿಯಾ ನಿಲ್ದಾಣದಲ್ಲಿ ರೈಲ್ವೆ ಸಂಚಾರವನ್ನು ತಡೆದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮುಝಾಫರ್‌ಪುರದಲ್ಲಿ ರಾಷ್ಟ್ರಧ್ವಜ ಹಿಡಿದು ಶಾಂತಿಯುತವಾಗಿ  ಪ್ರತಿಭಟನೆ ನಡೆಸಿದರು.

ಹೊಸ ಸೇನಾ ನೇಮಕಾತಿ ನೀತಿಯ ವಿರುದ್ಧ ಬಿಹಾರ ಹಾಗೂ  ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಬಿಜೆಪಿ ಆಡಳಿತವಿರುವ ಹರ್ಯಾಣ ಮತ್ತು ಮಧ್ಯಪ್ರದೇಶಕ್ಕೂ ಪ್ರತಿಭಟನೆ ವ್ಯಾಪಿಸಿದೆ. ಪ್ರತಿಭಟನಾಕಾರರು  ಕಲ್ಲು ತೂರಾಟ ನಡೆಸಿ  ಹಿಂಸಾಚಾರ ನಡೆಸಿದ ನಂತರ ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ 24 ಗಂಟೆಗಳ ಕಾಲ ಫೋನ್ ಇಂಟರ್ನೆಟ್ ಹಾಗೂ  ಎಸ್‌ಎಂಎಸ್ ಅನ್ನು ಸ್ಥಗಿತಗೊಳಿಸಲಾಗಿದೆ.

ಶುಕ್ರವಾರ  ಬೆಳಗ್ಗೆ ಉತ್ತರಪ್ರದೇಶದ ಬಲ್ಲಿಯಾದಲ್ಲಿ ರೈಲ್ವೇ ನಿಲ್ದಾಣಕ್ಕೆ ನುಗ್ಗಿದ ಗುಂಪೊಂದು ರೈಲಿಗೆ ಬೆಂಕಿ ಹಚ್ಚಿದೆ. ಪೊಲೀಸರು ಬಲಪ್ರಯೋಗ ಮಾಡುವ ಮೊದಲು ರೈಲ್ವೆ ನಿಲ್ದಾಣದ ಆಸ್ತಿಯನ್ನು ಹಾನಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News