50ರ ನೆನಪಿನ ಒಂದು ಸರಳ ಸಮಾರಂಭ

Update: 2022-06-17 07:13 GMT

ಅದೊಂದು ಸರಳ ಸಮಾರಂಭ. ಆ ಸಮಾರಂಭದಲ್ಲಿ ಸರಳ ಎನ್ನುವ ಪದವೇ ಅವತ್ತಿನ ಕೇಂದ್ರವಸ್ತು. ಆ ಸರಳ ಎಂಬ ಪದದೊಂದಿಗೆ ಮದುವೆಯನ್ನು ಜೋಡಿಸಿ, ಐವತ್ತು ವರ್ಷಗಳ ಹಿಂದೆ ಸರಳವಾಗಿ ಸತಿ-ಪತಿಗಳಾದ ಜೋಡಿಯೊಂದು, ಐವತ್ತು ವರ್ಷಗಳ ಕಾಲ ಬದುಕಿದ ರೀತಿಯನ್ನು, ಗ್ರಾಮೀಣ ಭಾಗದಲ್ಲಾದ ಬದಲಾವಣೆಯ ಗಾಳಿಯನ್ನು ಕಂಡಿರಿಸಲು, ನಾಡಿನ ಮುಂದಿಡಲು ಸಿದ್ಧವಾಗಿತ್ತು. ಆ ಸರಳ ಸಮಾರಂಭಕ್ಕೆ ಸೊಗಸು ತರಲು ನೆಲಮೂಲ ಸಂಸ್ಕೃತಿಯನ್ನು ಸಾರುವ ಜಾನಪದ ಲೋಕವನ್ನು ವೇದಿಕೆಯನ್ನಾಗಿ ಮಾಡಿಕೊಂಡಿತ್ತು. ಆ ಸರಳ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಸಜ್ಜನರು, ಸಂಬಂಧಿಕರು, ಸಾಮಾನ್ಯರು ಎಲ್ಲರೂ ಅಲ್ಲಿದ್ದರು. ಅದು ಕೆಂಪಮ್ಮ ಅಬ್ಬೂರು ಮತ್ತು ಕಾಳೇಗೌಡ ನಾಗವಾರ ಎಂಬ ಹಿರಿಜೀವಗಳು ತಾವು ಒಂದಾಗಿ ಹೆಜ್ಜೆ ಹಾಕಿದ್ದಕ್ಕೆ, ಆ ಹೆಜ್ಜೆಗೆ ಐವತ್ತು ವರ್ಷ ತುಂಬಿದ್ದಕ್ಕೆ ಸಂಬಂಧಿಕರು ಮತ್ತು ಸ್ನೇಹಿತರು ಕೂಡಿ ಏರ್ಪಡಿಸಿದ್ದ ಸರಳ ಸಮಾರಂಭ. 08.06.1972ರಂದು ‘ಮೂಢ ಸಂಪ್ರದಾಯ ವಿರೋಧಿ ಸಮ್ಮೇಳನ’ದ ಹೆಸರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಐವತ್ತು ವರ್ಷಗಳನ್ನು ಪೂರೈಸಿದ ಆ ದಂಪತಿಯ ಸಂಭ್ರಮಕ್ಕೆ ಜಾನಪದ ಲೋಕದ ಹಸಿರು ಗಿಡಮರಗಳೇ ತಳಿರು ತೋರಣವಾಗಿದ್ದವು. ಕಳೆದ ವಾರವಷ್ಟೇ ಮಳೆಯಾಗಿದ್ದರಿಂದ ಸಮಾರಂಭಕ್ಕೆ ಅಣಿಯಾಗಿದ್ದ ಬಯಲು ರಂಗಮಂದಿರದ ಕಲ್ಲುಹಾಸಿಗೆ ಹಸಿರು ಹೊದ್ದು ಮಲಗಿತ್ತು. ಆ ಕಲ್ಲು ಮತ್ತು ಹುಲ್ಲು ಹಾಸಿನ ಮೇಲೆ ಲೋಕಾಭಿರಾಮವಾಗಿ ಕೂತವರ ಬೆನ್ನಿಗೆ ದೊಡ್ಡ ಮರಗಳು ಚಪ್ಪರದಂತೆ ಚಾಚಿಕೊಂಡು ನೆರಳು ನೀಡುತ್ತಿದ್ದವು. ಆ ವಾತಾವರಣವೇ ಆಹ್ಲಾದಕರವಾಗಿತ್ತು. ಹೊಸದೇನನ್ನೋ ಹೊರಹಾಕುತ್ತಿತ್ತು. ದಂಪತಿಯನ್ನು ಬಹಳ ಹತ್ತಿರದಿಂದ ಕಂಡ ಕೆಲವರು, ಸರಳ ಮದುವೆ ಕುರಿತು ತಮ್ಮ ಅನುಭವವನ್ನು, ಕೂಡು ಕುಟುಂಬದಲ್ಲಾದ ಬದಲಾವಣೆಯನ್ನು, ಜನರಲ್ಲಿ ಜಾಗೃತವಾದ ವೈಚಾರಿಕ ಪ್ರಜ್ಞೆಯನ್ನು, ಪುರೋಹಿತಶಾಹಿಯನ್ನು ಧಿಕ್ಕರಿಸಿಯೂ ಮದುವೆಯಾಗಬಹುದೆಂಬ ಧೈರ್ಯವನ್ನು, ದುಬಾರಿ ಮದುವೆಯ ಅಸಹ್ಯವನ್ನು, ಖರ್ಚಿಲ್ಲದ ಮದುವೆಯ ಸೊಬಗನ್ನು, ಅದಕ್ಕೆ ಸ್ಪಂದಿಸಿದ ನಾಡಿನ ನಡೆಯನ್ನು... ಕುರಿತು ಮಾತನಾಡಿದರು. ಇದೊಂದು ರೀತಿಯ ಹೊಸ ನಡೆ. ನಾಡಿನ ಜನತೆ ನೆನಪಿನಲ್ಲಿಟ್ಟುಕೊಂಡು ಅಳವಡಿಸಿಕೊಳ್ಳಬೇಕಾದ ಆಚರಣೆ. ನಾಲ್ಕು ಸಾಧಾರಣ ಪ್ಲಾಸ್ಟಿಕ್ ಕುರ್ಚಿಗಳು. ಎರಡರಲ್ಲಿ ಐವತ್ತು ವರ್ಷ ಒಂದಾಗಿ ಬದುಕಿದ ಸಾಧಕರು. ಇನ್ನೆರಡು ಖಾಲಿ. ಅವರ ಮುಂದೆ ಒಂದು ಟೀಪಾಯಿ ಮತ್ತು ಮಾತನಾಡಲು ಡಯಾಸ್. ಇಷ್ಟೇ ವೇದಿಕೆ. ಮೊದಲಿಗೆ ಪ್ರಕಾಶ್ ಅಬ್ಬೂರು ಪೀಠಿಕೆ ಹಾಕಿಕೊಟ್ಟರು. ನಂತರ ರಾಜಶೇಖರ ಅಬ್ಬೂರು ಐವತ್ತು ವರ್ಷಗಳ ಹಿಂದೆ ನಾಗವಾರ ಎಂಬ ಹಳ್ಳಿಯ ಸ್ಥಿತಿ ಹೇಗಿತ್ತು ಎಂದು ವಿವರಿಸಿದರು. ಲೋಹಿಯಾ ಸಮಾಜವಾದವನ್ನು, ಕುವೆಂಪು ವೈಚಾರಿಕತೆಯನ್ನು ತಲೆತುಂಬಿಕೊಂಡು ಕ್ರಾಂತಿಯ ಗುಂಗಿನಲ್ಲಿ ಓಡಾಡುತ್ತಿದ್ದ ಹದಿಹರೆಯದ ಕಾಳೇಗೌಡ ನಾಗವಾರರನ್ನು ಕಂಡ ಹಳ್ಳಿಯ ಜನ ‘ಹುಚ್ ಕಾಳ’ ಎಂದು ಕರೆಯುತ್ತಿದ್ದರಂತೆ. ಪುರೋಹಿತರು, ಮಂತ್ರಗಳು, ಕಾಲ-ನಕ್ಷತ್ರಗಳಿಲ್ಲದ ಸರಳ ಮದುವೆಯನ್ನು ಮುಂದೆ ನಿಂತು ಮಾಡಿಕೊಡಲು ಊರಿನ ದಲಿತ ವ್ಯಕ್ತಿಗೆ ವಹಿಸಲಾಗಿತ್ತಂತೆ. ಆದರೆ ಕಾಳೇಗೌಡರ ಸಂಬಂಧಿಕರೇ ಅವರಿಗೆ ಬೆದರಿಕೆ ಹಾಕಿ, ಮದುವೆಯಿಂದ ದೂರವುಳಿಯುವಂತೆ ನೋಡಿಕೊಂಡಿದ್ದರಂತೆ. ಕೊನೆಗೆ ಕಾಳೇಗೌಡರನ್ನು ಹತ್ತಿರದಿಂದ ಬಲ್ಲ ರಾಜಕೀಯ ನಾಯಕರಾದ ಕೆ.ಎಚ್.ರಂಗನಾಥರ ನೇತೃತ್ವದಲ್ಲಿ ಮದುವೆಯಾಗಿದ್ದನ್ನು, ಆ ನಂತರ ತಮ್ಮ ಕುಟುಂಬದಲ್ಲಿ ಆದ ವಿಧವಾ ವಿವಾಹ, ಅಂತರ್ಜಾತಿ ವಿವಾಹಗಳನ್ನು ಹಾಗೂ ಬದಲಾವಣೆಗಳನ್ನು ಅಬ್ಬೂರು ವಿವರಿಸಿದರು.

‘‘ನಾನು ಇವರಿಬ್ಬರಂತೆ ಸರಳ ಮದುವೆಯಾದವನಲ್ಲ, ಆಸೆಯಿದ್ರು ಆಗಲಿಲ್ಲ, ನನ್ನನ್ನೇಕೆ ಇಲ್ಲಿ ಮಾತನಾಡಲು ಕರೆಸಿದರೋ..’’ ಎಂದು ಮಾತಿಗಾರಂಭಿಸಿದ ಅಗ್ರಹಾರ ಕೃಷ್ಣಮೂರ್ತಿಯವರು, ‘‘ಕಾಳೇಗೌಡರು ಲೋಹಿಯಾ ಪ್ರಭಾವಕ್ಕೆ ಒಳಗಾದವರು. ಕುವೆಂಪು ಅವರನ್ನು ಓದಿಕೊಂಡಿದ್ದರು. ವೈಚಾರಿಕ ಚಿಂತನೆ ಮೈಗೂಡಿಸಿಕೊಂಡಿದ್ದರು. ಹಳ್ಳಿಗಾಡಿನ ಜನರ ಆರ್ಥಿಕ ಪರಿಸ್ಥಿತಿ, ಮೌಢ್ಯಾಚರಣೆಯನ್ನು ಖುದ್ದಾಗಿ ಕಂಡಿದ್ದರು. ಸರಳವಾಗಿ, ಕುವೆಂಪು ಮಂತ್ರಮಾಂಗಲ್ಯದ ಮದುವೆಯಾಗುವ ಮೂಲಕ ಹೊಸ ಐಡಿಯಾ ಬಿತ್ತಿದರು. ಇದನ್ನು ನಾವು ತಮಿಳುನಾಡಿನಲ್ಲಿ, ಪೆರಿಯಾರ್ ಮೂವ್‌ಮೆಂಟ್‌ನಲ್ಲಿ ಕಾಣಬಹುದು. ಪುರೋಹಿತಶಾಹಿಯ ವಿರುದ್ಧ ಸೆಡ್ಡು ಹೊಡೆದು ನಿಂತ ಪೆರಿಯಾರ್, ಸರಳ ಮದುವೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾದರು. ಆನಂತರ, ವಯಸ್ಸಾದ ಪೆರಿಯಾರ್ ತಮಗಿಂತ ಅರ್ಧ ವಯಸ್ಸಿನ ಮಹಿಳೆಯನ್ನು ಮದುವೆಯಾದರು. ದ್ರಾವಿಡ ಕಳಗಂನೊಂದಿಗೆ ಗುರುತಿಸಿಕೊಂಡಿದ್ದವರೆಲ್ಲ ಕಸಿವಿಸಿಗೊಂಡು ದೂರ ಸರಿದರು. ಪೆರಿಯಾರ್ ಬಿಟ್ಟು ಹೊರಹೋದ ಅಣ್ಣಾ ದೊರೈ ಸಂಗಡಿಗರು ಸುಮ್ಮನಿರದೆ ಡಿಎಂಕೆ ಹುಟ್ಟುಹಾಕಿದರು. ಅಲ್ಲೂ ಕ್ಲಿಕ್ ಆಗಿದ್ದು ಐಡಿಯಾವೇ. ಪೆರಿಯಾರ್ ಅವರ ದ್ರಾವಿಡ ಹೋರಾಟ, ಪುರೋಹಿತಶಾಹಿ ವಿರುದ್ಧದ ಹೋರಾಟದ ಮುಂದುವರಿದ ಭಾಗವಾಗಿ, ಡಿಎಂಕೆ ಎಂಬ ರಾಜಕೀಯ ಪಕ್ಷದ ಹುಟ್ಟಿಗೆ ಕಾರಣವಾಯಿತು. ಡಿಎಂಕೆ ಈಗ ತಮಿಳುನಾಡಿನಲ್ಲಿ ಅಧಿಕಾರ ಹಿಡಿದಿದೆ, ಭಾರತದ ರಾಜಕಾರಣದಲ್ಲಿ ಗಟ್ಟಿಯಾದ ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡಿದೆ. ನಮ್ಮಲ್ಲೂ ಹೀಗೆಯೇ, ಕುವೆಂಪು ಅವರ ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ಮದುವೆಯಾದ ಕೆಂಪಮ್ಮ-ಕಾಳೇಗೌಡರ ನಡೆ, ಈ ಐವತ್ತು ವರ್ಷಗಳಲ್ಲಿ ಹಲವರಿಗೆ ಹಲವು ರೀತಿಯ ಐಡಿಯಾಗಳನ್ನು ಕೊಟ್ಟಿದೆ, ಬದಲಾವಣೆಗೆ ಕಾರಣವಾಗಿದೆ. ಸಮಾಜದಲ್ಲಿ ಸಮಾನತೆ, ಸಹಬಾಳ್ವೆಗೆ ನಾಂದಿಹಾಡಿದೆ. ಇಂತಹ ಸರಳ ಮದುವೆಗಳು ಇನ್ನಷ್ಟು ಆಗಲಿ ಎಂದು ಹಾರೈಸುವೆ’’ ಎಂದರು. ಮಂಡ್ಯದ ಹೊಸ ತಲೆಮಾರು ಈಗ ಹೇಗಿದೆ, ಎತ್ತ ಸಾಗುತ್ತಿದೆ ಎಂಬುದರ ಕುರಿತು ಹೊಸ ತಲೆಮಾರಿನ ಪ್ರತಿನಿಧಿಯಂತಿರುವ ಹಾಗೂ ಇತ್ತೀಚೆಗಷ್ಟೇ ಕುವೆಂಪು ಮಂತ್ರಮಾಂಗಲ್ಯದ ಮೂಲಕವೇ ಮದುವೆಯಾಗಿರುವ ಲೇಖಕ ರಾಜೇಂದ್ರ ಪ್ರಸಾದ್ ಅವರು ಮಾತಿಗೆ ನಿಂತರು. ‘‘ನಾವು ಕೂಡ ಕುವೆಂಪು ಮಂತ್ರಮಾಂಗಲ್ಯದ ಮೂಲಕ ಮದುವೆಯಾದರೂ, ಅದ್ದೂರಿ ಆಡಂಬರದಿಂದ ಹೊರತಾಗಲು ಸಾಧ್ಯವಾಗಲಿಲ್ಲ. ಅದರ ಬಗ್ಗೆ ಕೊಂಚ ವಿಷಾದವಿದೆ, ಇರಲಿ. ಐವತ್ತು ವರ್ಷಗಳ ಹಿಂದೆ ನಡೆದ ಸರಳ ಮದುವೆಯ ಪರಿಸ್ಥಿತಿ ಇಂದು ಮಂಡ್ಯದಲ್ಲಿಲ್ಲ. ಹೊಸ ತಲೆಮಾರಿನ ಯುವಕ ಯುವತಿಯರು ನಿಧಾನವಾಗಿ ಅದ್ದೂರಿ, ವೈಭವ, ಆಡಂಬರ, ಪ್ರತಿಷ್ಠೆಗಳತ್ತ ಜಾರುತ್ತಿದ್ದಾರೆ. ಅದಕ್ಕೆ ಸೋಷಿಯಲ್ ಮೀಡಿಯಾ ವೇದಿಕೆಯಾಗಿದೆ. ಇನ್ಸ್‌ಟಾಗ್ರಾಂ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುವ ಫೋಟೊಗಳು, ವೀಡಿಯೊಗಳು ಹರೆಯದವರನ್ನು ಹುಚ್ಚೆಬ್ಬಿಸುತ್ತಿವೆ. ಮದುವೆಯಾದರೆ, ಹೀಗೆಯೇ ಆಗಬೇಕೆಂದು ಪ್ರೇರೇಪಿಸುತ್ತಿವೆ. ಮದುವೆಗಳು ದಿನದಿಂದ ವಾರದವರೆಗೆ ನಡೆಯುವ ಸಮಾರಂಭಗಳಾಗಿವೆ. ಮನೆ, ದೇವಸ್ಥಾನ, ಛತ್ರಗಳನ್ನು ಬಿಟ್ಟು ರೆಸಾರ್ಟ್‌ಗಳಲ್ಲಿ ಜರುಗುವ ಈವೆಂಟ್‌ಗಳಾಗಿ ಬದಲಾಗುತ್ತಿವೆ. ಮದುವೆಯ ಊಟದ ಮೆನುವಿನಿಂದ ಹಿಡಿದು ಹನಿಮೂನ್‌ವರೆಗಿನ ಎಲ್ಲವನ್ನು ವ್ಯವಸ್ಥೆ ಮಾಡುವ ಈವೆಂಟ್ ಮ್ಯಾನೇಜ್‌ಮೆಂಟ್‌ಗಳು ಮುನ್ನೆಲೆಗೆ ಬಂದಿವೆ. ಹಾಗೆ ನೋಡಿದರೆ, ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಉತ್ತಮವಾಗಿಲ್ಲ. ಆದರೂ ಸರಳ, ಆದರ್ಶ ಮದುವೆ ಅವರಿಗೆ ಬೇಕಾಗಿಲ್ಲ. ಹೊಟ್ಟೆ ತುಂಬಿದವರಿಗೇ ಹತ್ತಾರು ವೆರೈಟಿಯ ಊಟ ಬಡಿಸುವ, ವೇಸ್ಟ್ ಮಾಡುವ ಜನ, ಹಸಿದವರತ್ತ ನೋಡುವುದಿಲ್ಲ. ಇಲ್ಲಿ ಮನುಷ್ಯತ್ವ ಹುಡುಕಿದರೂ ಸಿಗುವುದಿಲ್ಲ. ಬಟ್ಟೆಗೆ, ಷೋಕಿಗೆ, ಓಡಾಟಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುವ ಜನ; ಇದು ಅಗತ್ಯವೇ ಎಂದು ಕೇಳಿಕೊಳ್ಳುವುದಿಲ್ಲ’’ ಎಂದು ವಿಷಾದ ವ್ಯಕ್ತಪಡಿಸಿದರು. ಅಗ್ರಹಾರ ಕೃಷ್ಣಮೂರ್ತಿ ಅವರ ಆ ಕಾಲ ಮತ್ತು ರಾಜೇಂದ್ರ ಪ್ರಸಾದ್ ಅವರ ಈ ಕಾಲ-ಎರಡನ್ನೂ ಕಂಡ, ಕೇಳಿದ ಸಭಿಕರು ಸರಿ-ತಪ್ಪುಗಳ ತುಲನೆಯಲ್ಲಿ ತೊಡಗಿದರು. ಕೆಂಪಮ್ಮ ಮತ್ತು ಕಾಳೇಗೌಡರು ಮುಖ ಮುಖ ನೋಡಿಕೊಂಡರು. ಆಗ ಸಭಿಕರ ನಡುವಿನಿಂದ ರೈತನಾಯಕಿ ಅನಸೂಯಮ್ಮನವರು ಬಂದು ಮೈಕಿನ ಮುಂದೆ ನಿಂತರು. 70ರ ದಶಕರ ಜಪ್ತಿ ಮರುಜಪ್ತಿಗಳ ರೈತ ಹೋರಾಟವನ್ನು ಸಂಕ್ಷಿಪ್ತವಾಗಿ ಹೇಳಿ, ಕುವೆಂಪು ಸಿದ್ಧಪಡಿಸಿದ್ದ ಮಂತ್ರಮಾಂಗಲ್ಯವನ್ನು ಸರಳೀಕರಿಸಿದ ಬಗೆಯನ್ನು ಬಿಡಿಸಿಟ್ಟರು. ‘‘ಕುವೆಂಪು ಮಂತ್ರಮಾಂಗಲ್ಯ ಬೋಧನೆ ಉದ್ದವಾಗಿತ್ತು, ನಮ್ಮಂತಹ ಹಳ್ಳಿಗಾಡಿನ ಜನಕ್ಕೆ ಕೊಂಚ ಕಷ್ಟವಾಗಿತ್ತು. ಅದನ್ನು ಸರಳೀಕರಿಸಿ, ಎರಡು ಮೂರು ಪದಗಳಿಗೆ ಇಳಿಸಿದೆವು. ರೈತ ಸಂಘದ ನೇತೃತ್ವದಲ್ಲಿ ಈ ರೀತಿಯ ಸರಳ ಮದುವೆಗಳ ಚಳವಳಿಯೇ ನಡೆಯಿತು. ನನ್ನ ಮತ್ತು ಪ್ರೊ.ರವಿವರ್ಮಕುಮಾರ್ ನೇತೃತ್ವದಲ್ಲಿ ಹಲವಾರು ಸರಳ, ಅಂತರ್ಜಾತಿ ಮದುವೆಗಳು ನಡೆದವು. ಮಾನವ ಮಂಟಪದ ಮೂಲಕ ಸಾಮೂಹಿಕ ಸರಳ ಮದುವೆಗಳು ಜರುಗಿದವು. ಅವರಿಗೆ ಆರ್ಥಿಕ ನೆರವು, ಸಾಮಾಜಿಕ ಬೆಂಬಲ, ಉದ್ಯೋಗದ ಭದ್ರತೆಯನ್ನೂ ಒದಗಿಸಿದೆವು. ಈಗ ಅವರೆಲ್ಲ ಬೆಳೆದು ದೊಡ್ಡವರಾಗಿದ್ದಾರೆ, ತಮ್ಮ ಮಕ್ಕಳಿಗೆ ಅದೇ ರೀತಿಯ ಸರಳ ಮದುವೆ ಮಾಡಿಸಲು ನಮ್ಮನ್ನೇ ಕರೆಯುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಎಂದು ಆ ಕಾಲ ಮತ್ತು ಈ ಕಾಲದ ಸರಳ ಮದುವೆಗಳನ್ನು ಜೋಡಿಸಿದರು. ಜೋಡಿಗಳ ಜೊತೆ ನಿಂತ ಸಾರ್ಥಕ ಬದುಕನ್ನು ಬಿಡಿಸಿಟ್ಟರು. ಇನ್ನೊಂದಿಷ್ಟು ಜನ ಮಾಡಬಹುದಾದ ಕೆಲಸಕ್ಕೆ ಮಾದರಿ ಹಾಕಿಕೊಟ್ಟರು. ಅನಸೂಯಮ್ಮನವರ ಮಾತು ಸಭಿಕರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು. ಹಾಗೆಯೇ ಅವರ ನಂತರ ಬಂದ ಲೇಖಕ ಜಗದೀಶ್ ಕೊಪ್ಪ, ಗೀತಾ-ಸ್ವಾಮಿ ಆನಂದ್, ಎಚ್.ಆರ್.ಸ್ವಾಮಿ, ಮಂಗಳಾ ಅಪ್ಪಾಜಿ, ರೇಣುಕಾರಾಧ್ಯ, ಕೇಶವರೆಡ್ಡಿ ಹಂದ್ರಾಳ, ಕರೀಗೌಡ ಬೀಚನಹಳ್ಳಿ, ಅಗ್ನಿ ಶ್ರೀಧರ್, ಸಾದಿಕ್ ಪಾಷಾ, ಎಂ.ಎಸ್.ಮೂರ್ತಿ, ಮಂಜುನಾಥ ಅದ್ದೆ ಸರಳ ಮತ್ತು ಅಂತರ್ಜಾತಿ ಮದುವೆ ಎಂಬ ಸಾಹಸಗಳ ಕುರಿತು ರೋಚಕ ಸಂಗತಿಗಳನ್ನು ಸಭಿಕರಿಗೆ ಉಣಬಡಿಸಿದರು. ಒಂದು ರೀತಿಯಲ್ಲಿ ಇದೊಂದು ಸರಳ ಸಮಾರಂಭವಾದರೂ, ಮದುವೆಯನ್ನೇ ಮೌಢ್ಯದ ವಿರುದ್ಧ ಅಸ್ತ್ರವನ್ನಾಗಿಸಿ ಪುರೋಹಿತಶಾಹಿಗೆ ಸೆಡ್ಡು ಹೊಡೆದ ಸಮಾರಂಭ. ನೆರೆದಿದ್ದವರು ಕೆಲವೇ ಜನರಾದರೂ, ವೈಚಾರಿಕ ಚಿಂತನೆಗಳನ್ನು ಬಿತ್ತಿದ ಸಮೃದ್ಧ ಸಮಾರಂಭ. ಕೆಂಪಮ್ಮ-ಕಾಳೇಗೌಡರು ತಾವು ಬದುಕಿದ ರೀತಿಯನ್ನು ನಾಡಿಗೆ ಪರಿಚಯಿಸುವ ಮೂಲಕ, ಮತ್ತಷ್ಟು ಜನರನ್ನು ಆ ಸರಳ, ಆದರ್ಶ, ಸಮಾನತೆಯ ಬದುಕಿನತ್ತ ಪ್ರೇರೇಪಿಸಿದ ಸಮಾರಂಭ. ಧರ್ಮ-ದೇವರು ಅತಿಗೆ ಹೋಗಿ ಅನಾಹುತಗಳನ್ನು ಸೃಷ್ಟಿಸುತ್ತಿರುವ ಸಂದರ್ಭದಲ್ಲಿ ಜಾಗೃತಿ ಬಿತ್ತಿದ ಸಮಾರಂಭ. ನಾಡಿನ ನಾಳಿನ ನಡೆಗೆ ಬೆಳಕು ತೋರಿದ ಸಮಾರಂಭ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News