ಸರಕಾರಿ ಗೋಶಾಲೆಗಳನ್ನು ಶೀಘ್ರವೇ ನಿರ್ಮಿಸಿ: ಉಡುಪಿ ಜಿಲ್ಲಾಧಿಕಾರಿ

Update: 2022-06-17 15:25 GMT

ಉಡುಪಿ : ಜಿಲ್ಲೆಯಲ್ಲಿ ಸರಕಾರಿ ಗೋಶಾಲೆಯನ್ನು ಇತರರ ಸಹಭಾಗಿತ್ವದಲ್ಲಿ ರಾಜ್ಯಕ್ಕೇ ಮಾದರಿಯಾಗುವ ರೀತಿ ಯಲ್ಲಿ  ಗೋವುಗಳಿಗೆ ಅಗತ್ಯ ವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು  ಒದಗಿಸುವುದರೊಂದಿಗೆ  ಶೀಘ್ರದಲ್ಲಿ ನಿರ್ಮಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚಿಸಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌ಹಾಲ್‌ನಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಆಯವ್ಯಯದಲ್ಲಿ ಗೋಶಾಲೆಯನ್ನು ಪ್ರಾರಂಭಿಸಲು ಸರಕಾರ ಘೋಷಿಸಿ, ಸಾಕಷ್ಟು ಅನುದಾನವನ್ನು ನೀಡಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಅಗತ್ಯವಿರುವ ಭೂಮಿಯನ್ನು ಸಹ ನೀಡಿದೆ. ಗೋಶಾಲೆ ಆಧುನಿಕ ಶೈಲಿಯಲ್ಲಿ, ವೈಜ್ಞಾನಿಕ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ  ಹಾಗೆ ನೀಲಿನಕ್ಷೆಯನ್ನು ತಯಾರಿಸಿ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕೆಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದ ಸರ್ವೇ ನಂ.೭೯/೨ ರಲ್ಲಿ ೧೩.೨೪ ಎಕ್ರೆ ಜಮೀನನ್ನು ಹಾಗೂ ಕುಂದಾಪುರದ ಗೋಳಿಹೊಳೆ ಗ್ರಾಮದ ಸರ್ವೆ ನಂ.೨೭೯ರಲ್ಲಿ ೯.೮೫ ಎಕ್ರೆ ಜಮೀನನ್ನು ಸರಕಾರಿ ಗೋಶಾಲೆ ನಿರ್ಮಿಸಲು ಕಾಯ್ದಿರಿಸಲಾಗಿದೆ. ಗೋಶಾಲೆಗೆ ತಡೆ ಬೇಲಿ, ಕೆರೆ ನಿರ್ಮಾಣದ ಕಾಮಗಾರಿ ಗಳನ್ನು ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.  

ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದ ರೊಂದಿಗೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಈಗಾಗಲೇ ೧೨ ಗೋಶಾಲೆಗಳನ್ನು ಖಾಸಗಿ ಸಂಸ್ಥೆಗಳು ನಡೆಸುತ್ತಿದ್ದು, ಇಲ್ಲಿ ೨,೬೬೦ಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ ಎಂದರು.

ಜಾನುವಾರುಗಳನ್ನು ರಕ್ಷಣೆ ಮಾಡುವ ರೀತಿಯಲ್ಲಿಯೇ ಇತರೆ ಪ್ರಾಣಿಗಳನ್ನು ರಕ್ಷಿಸಲು ಗೋಶಾಲೆ ಮಾದರಿ ಯಲ್ಲಿಯೇ ಪ್ರಾಣಿ ರಕ್ಷಣಾ ಶೆಲ್ಟರ್‌ಗಳನ್ನು ಪ್ರಾರಂಬಿಸಲು ಪ್ರಾಣಿಪ್ರಿಯರು ಹಾಗೂ ಅಧಿಕಾರಿಗಳು ಚಿಂತಿಸಬೇಕು ಎಂದವರು ಸಲಹೆ ನೀಡಿದರು.

ಸರಕಾರದಿಂದ ಜಿಲ್ಲಾ ಪ್ರಾಣಿದಯಾ ಸಂಘಕ್ಕೆ ಪ್ರಾಣಿಗಳ ಕಲ್ಯಾಣಕ್ಕೆ  ಬಿಡುಗಡೆಯಾಗಿರುವ  ಅನುದಾನವನ್ನು ಬಳಕೆ ಮಾಡಿಕೊಳ್ಳುವುರೊಂದಿಗೆ ಅವುಗಳ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾಯ್ದೆಗಳು ಮತ್ತು  ನಿಯಮಗಳ ಬಗ್ಗೆ ಜಾಗೃತಿ ಅಭಿಯಾನಗಳನ್ನು ಜಿಲ್ಲೆಯಾದ್ಯಂತ ಪರಿಣಾಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದರು. 

ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್. ಮಾತನಾಡಿ, ಹೆಬ್ರಿಯ ಕೆರೆಬೆಟ್ಟು ಗೋಶಾಲೆಗೆ  ನೀರಿನ ಸೌಲಭ್ಯವನ್ನು  ಕಲ್ಪಿಸಲು  ಕೊಳವೆ ಬಾವಿಯನ್ನು ಕೊರೆಸ ಲಾಗಿದ್ದರೂ ನೀರು ದೊರೆತಿಲ್ಲ.  ಇಲ್ಲಿಗೆ ಅಗತ್ಯವಿರುವ ನೀರನ್ನು  ಜಲ ಜೀವನ್ ಮಿಷನ್ ಯೋಜನೆಯಡಿ ಕಲ್ಪಿಸಲಾಗುವುದು ಎಂದರು.

ಗೋಶಾಲೆಗಳ ನಿರ್ವಹಣೆಗೆ ಸರಕಾರವನ್ನು ಎದುರುನೋಡದೇ ಅಲ್ಲಿಯೇ ಬರುವ ಉತ್ಪನ್ನಗಳಿಂದ ನಿರ್ವಹಣೆ ಯನ್ನು ಮಾಡುವ ಬಗ್ಗೆ ಯೋಜನೆಗಳನ್ನು ರೂಪಿಸಿ. ಗೋಶಾಲೆಗಳು ಸ್ವಾವಲಂಬನೆಗೊಳ್ಳಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಶಂಕರ್ ಶೆಟ್ಟಿ,  ಜಿಲ್ಲೆಯ ವಿವಿಧ ಗೋಶಾಲೆಗಳ ಮುಖ್ಯಸ್ಥರು, ಜಿಲ್ಲೆಯ ಪ್ರಾಣಿದಯಾ ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News