ಕಾಬೂಲ್ ಗುರುದ್ವಾರದಲ್ಲಿ ಸ್ಫೋಟ; ತೀವ್ರ ಆತಂಕ ವ್ಯಕ್ತಪಡಿಸಿದ ಭಾರತ

Update: 2022-06-19 04:55 GMT
Photo: Twitter

ಹೊಸದಿಲ್ಲಿ,ಜೂ.18: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿರುವ ದಶಮೇಶ್ ಪಿತಾ ಸಾಹಿಬ್ ಗುರುದ್ವಾರಾದ ಮೇಲೆ ಶನಿವಾರ ಬೆಳಿಗ್ಗೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಓರ್ವ ಸಿಖ್ ವ್ಯಕ್ತಿ ಸೇರಿದಂತೆ ಇಬ್ಬರು ಕೊಲ್ಲಲ್ಪಟ್ಟಿದ್ದಾರೆ ಎಂದು ಆ ದೇಶದ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೌರ್ ತಿಳಿಸಿದ್ದಾರೆ. ಗುರುದ್ವಾರಾಕ್ಕೆ ನುಗ್ಗಿದ್ದ ಬಂದೂಕುಧಾರಿಗಳೂ ಕೊಲ್ಲಲ್ಪಟ್ಟಿದ್ದಾರೆ,ಗುಂಡಿನ ಕಾಳಗದಲ್ಲಿ ತಾಲಿಬಾನಿ ಹೋರಾಟಗಾರನೋರ್ವ ಕೂಡ ಸಾವನ್ನಪ್ಪಿದ್ದಾನೆ. ಏಳು ಜನರು ಗಾಯಗೊಂಡಿದ್ದಾರೆ ಎಂದು ಟಾಕೌರ್ ಹೇಳಿದರು.

ಗುರುದ್ವಾರಾ ಸಂಕೀರ್ಣಕ್ಕೆ ನುಗ್ಗಿದ ಅಪರಿಚಿತ ಬಂದೂಕುಧಾರಿಗಳ ಗುಂಪು ಗುಂಡು ಹಾರಾಟವನ್ನು ನಡೆಸಿದ್ದು,ತಾಲಿಬಾನಿ ಹೋರಾಟಗಾರರು ಪ್ರತಿದಾಳಿ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಕರ್ಟೆ ಪರ್ವಾನ್ ಪ್ರದೇಶದಲ್ಲಿರುವ ಗುರುದ್ವಾರಾದ ಸಮೀಪ ಕನಿಷ್ಠ ಎರಡು ಸ್ಫೋಟಗಳ ಶಬ್ದ ಕೇಳಿತ್ತು. ಬಂದೂಕುಧಾರಿಗಳು ಗುರುದ್ವಾರಾವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು ಎಂದು ಅವು ತಿಳಿಸಿವೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಪ್ರಾರ್ಥನೆಗಳು ನಡೆಯುತ್ತಿದ್ದಾಗ ದಾಳಿ ನಡೆದಿತ್ತು ಎಂದು ಗುರುದ್ವಾರಾ ಆಡಳಿತ ಮಂಡಳಿಯ ಅಧ್ಯಕ್ಷ ಗುರ್ನಾಮ್ ಸಿಂಗ್ ಅವರು ತನಗೆ ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದರು.
ಗುರುದ್ವಾರಾದ ಮೇಲಿನ ದಾಳಿಯ ಬಗ್ಗೆ ಭಾರತವು ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.

‘ಪರಿಸ್ಥಿತಿಯ ಮೇಲೆ ನಾವು ನಿಕಟ ನಿಗಾಯಿರಿಸಿದ್ದೇವೆ ಮತ್ತು ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದೇವೆ ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದರು.ದಾಳಿಯನ್ನು ಖಂಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ಇದೊಂದು ಹೇಡಿತನದ ಕೃತ್ಯವಾಗಿದೆ ಎಂದು ಬಣ್ಣಿಸಿದರು.

‘ದಾಳಿಯ ಮಾಹಿತಿ ಲಭಿಸಿದಾಗಿನಿಂದ ಬೆಳವಣಿಗೆಗಳ ಮೇಲೆ ಸೂಕ್ಷ್ಮನಿಗಾಯಿರಿಸಿದ್ದೇವೆ. ಸಮುದಾಯದ ಹಿತಚಿಂತನೆ ನಮ್ಮ ಮೊದಲ ಕಾಳಜಿಯಾಗಿದೆ’ ಎಂದು ಅವರು ಟ್ವೀಟಿಸಿದ್ದಾರೆ.ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಸುಮಾರು 140 ಸಿಕ್ಖರಿದ್ದು,ಹೆಚ್ಚಿನವರು ಜಲಾಲಾಬಾದ್ ಮತ್ತು ಕಾಬೂಲಿನಲ್ಲಿ ವಾಸವಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News