ಜನರ ಕಲ್ಯಾಣಕ್ಕಾಗಿ ನಮ್ಮ ಸರಕಾರ ಕೈಗೊಂಡ ಹಲವು ಕ್ರಮಗಳು ʼರಾಜಕೀಯ ಬಣ್ಣʼದಲ್ಲಿ ಸಿಲುಕಿಕೊಂಡಿದೆ: ಪ್ರಧಾನಿ ಮೋದಿ

Update: 2022-06-19 11:36 GMT

ಹೊಸದಿಲ್ಲಿ: ನಾಗರಿಕರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳು ʼರಾಜಕೀಯದ ಬಣ್ಣʼದಲ್ಲಿ ಸಿಲುಕಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೆಹಲಿ-ಎನ್‌ಸಿಆರ್‌ನ ಮೂಲಸೌಕರ್ಯಗಳನ್ನು ಆಧುನೀಕರಿಸುವ ಸಂದರ್ಭದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ದೇಶದ ರಾಜಧಾನಿಯಲ್ಲಿ ವಿಶ್ವ ದರ್ಜೆಯ ಕಾರ್ಯಕ್ರಮಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ಪ್ರದರ್ಶನ ಸಭಾಂಗಣಗಳನ್ನು ಹೊಂದಲು ಕೇಂದ್ರವು ಅವಿರತವಾಗಿ ಶ್ರಮಿಸುತ್ತಿದೆ. ಅನೇಕ ಒಳ್ಳೆಯ ಕೆಲಸಗಳು ಮತ್ತು ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಗಳು ರಾಜಕೀಯದ ಬಣ್ಣದಲ್ಲಿ ಸಿಲುಕಿಕೊಳ್ಳುವುದು ನಮ್ಮ ದೇಶದ ದೌರ್ಭಾಗ್ಯ ಎಂದು ಅವರು ಹೇಳಿದ್ದಾರೆ. 

ಕೇಂದ್ರ ಸರ್ಕಾರದ ಹಲವಾರು ಪ್ರಮುಖ ನಿರ್ಧಾರಗಳು ತೀವ್ರ ವಿರೋಧವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಈ ಮಾತು ಹೇಳಿದ್ದಾರೆ. ಇತ್ತೀಚೆಗೆ ಹೊಸ ಸೇನಾ ನೇಮಕಾತಿ ʼಅಗ್ನಿಪಥ್‌ʼ ಯೋಜನೆಯು ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದರೆ, ಕೇಂದ್ರದ ಮಹತ್ವಾಕಾಂಕ್ಷಿ ಕೃಷಿ ಕಾನೂನುಗಳು ರೈತರ ಸುದೀರ್ಘ ಹೋರಾಟದ ಫಲವಾಗಿ ರದ್ದುಗೊಂಡಿತ್ತು.  ಪೌರತ್ವ (ತಿದ್ದುಪಡಿ) ಕಾಯಿದೆ, 2019 ಕೂಡಾ ದೇಶಾದ್ಯಂತ ಬೃಹತ್ ಪ್ರತಿಭಟನೆಗಳಿಗೆ ಕಾರಣವಾಯಿತು, ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕೂಡಾ ಇದು ಕಾರಣವಾಗಿತ್ತು.  

ಅಭಿವೃದ್ಧಿ ಯೋಜನೆಗಳ ಹಾದಿಯಲ್ಲಿ ಬರುವ ಅಡೆತಡೆಗಳ ಬಗ್ಗೆ ಗಮನ ಸೆಳೆದ ಪ್ರಧಾನಿ ನರೇಂದ್ರ ಮೋದಿ, (ಯೋಜನೆಯನ್ನು ತಡೆಯಲು) ನ್ಯಾಯಾಂಗವನ್ನು ಸಂಪರ್ಕಿಸುವ ಮತ್ತು ಅಂತಹ ಯೋಜನೆಗಳ ಪ್ರಗತಿಗೆ ಅಡ್ಡಿಪಡಿಸುವವರಿಗೆ ದೇಶದಲ್ಲಿ ಯಾವುದೇ ಕೊರತೆಯಿಲ್ಲ ಎಂದು ಹೇಳಿದ್ದಾರೆ.

ಕಾರಿಡಾರ್ ಪ್ರಯಾಣಿಕರಿಗೆ ಸಮಯ ಮತ್ತು ವೆಚ್ಚವನ್ನು ದೊಡ್ಡ ರೀತಿಯಲ್ಲಿ ಉಳಿಸಲು ಸಹಾಯ ಮಾಡುವ ಮೂಲಕ ಜೀವನವನ್ನು ಸುಲಭಗೊಳಿಸುತ್ತದೆ. ಕಳೆದ 8 ವರ್ಷಗಳಲ್ಲಿ, ದೆಹಲಿ-ಎನ್‌ಸಿಆರ್‌ನ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ಅಭೂತಪೂರ್ವ ಪ್ರಯತ್ನಗಳನ್ನು ಕೈಗೊಂಡಿದೆ ಮತ್ತು ಮೆಟ್ರೋ ಸೇವೆಯನ್ನು 193 ಕಿಮೀಯಿಂದ 400 ಕಿಮೀಗೆ ಹೆಚ್ಚಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News