10 ರುಪಾಯಿ ನಾಣ್ಯಗಳನ್ನು ಬಳಸಿ 6 ಲಕ್ಷ ರೂ.ಯ ಕಾರು ಖರೀದಿಸಿದ ವ್ಯಕ್ತಿ: ಕಾರಣವೇನು ಗೊತ್ತೆ?

Update: 2022-06-19 18:20 GMT
Photo: Indiatoday.in

ಚೆನ್ನೈ: ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು ಕೇವಲ ನಾಣ್ಯಗಳನ್ನು ಬಳಸಿಯೇ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಧರ್ಮಪುರಿಯಲ್ಲಿ ಪ್ರಮುಖ ವಾಹನ ಡೀಲರ್‌ ಮಳಿಗೆಗೆ  ಕಾರು ಖರೀದಿಸಲು ವ್ಯಕ್ತಿಯೊಬ್ಬರು 10 ರೂಪಾಯಿ ನಾಣ್ಯ ತುಂಬಿದ ಚೀಲಗಳೊಂದಿಗೆ ಬಂದಿದ್ದು  ಶೋರೂಮ್‌ ಸಿಬ್ಬಂದಿಗಳಆಶ್ಚರ್ಯಕ್ಕೆ ಕಾರಣವಾಗಿದೆ. 

ಆರೂರ್‌ನ ವೆಟ್ರಿವೇಲ್  ನಾಣ್ಯಗಳೊಂದಿಗೆ ಕಾರು ಖರೀದಿಸಿದವರು. ಅವರ  ತಾಯಿ ಅಂಗಡಿಯನ್ನು ನಡೆಸುತ್ತಿದ್ದು, ಗ್ರಾಹಕರು 10 ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸುವ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಆ ನಾಣ್ಯಗಳ ದೊಡ್ಡ ರಾಶಿಯೇ ಸೃಷ್ಟಿಯಾಗಿತ್ತು. ಇದನ್ನು ಹೇಗೆ ವಿನಿಮಯ ಮಾಡಿಕೊಳ್ಳುವುದು ಎಂದು ಯೋಚಿಸಿದ ವೆಟ್ರಿವೇಲ್‌ ನಾಣ್ಯಗಳ ಮೂಲಕವೇ ಕಾರು ಖರೀದಿಸಲು ನಿರ್ಧರಿಸಿದ್ದಾರೆ. ಆ ಮೂಲಕ 10 ರುಪಾಯಿ ನಾಣ್ಯಗಳನ್ನು ನಿಷ್ಪ್ರಯೋಜಕದಂತೆ ಕಾಣಬಾರದೆಂಬ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. 

ವೆಟ್ರಿವೆಲ್ ಕಾರು ಖರೀದಿಸಲು ಸುಮಾರು ಒಂದು ತಿಂಗಳ ಕಾಲ 6 ಲಕ್ಷ ರೂಪಾಯಿ ಮೌಲ್ಯದ 10 ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಶೋರೂಮ್‌ ಸಿಬ್ಬಂದಿಗಳು ಆರಂಭದಲ್ಲಿ ನಾಣ್ಯ ಪಡೆದುಕೊಳ್ಳಲು ಹಿಂಜರಿದರೂ, ಕೊನೆಗೆ ವೆಟ್ರಿವೆಲ್ ಅವರ ನಿರ್ಣಯವನ್ನು ಪರಿಗಣಿಸಿ, ಒಪ್ಪಂದಕ್ಕೆ ಒಪ್ಪಿಕೊಂಡಿದ್ದಾರೆ.

“ನನ್ನ ತಾಯಿ ಅಂಗಡಿಯನ್ನು ನಡೆಸುತ್ತಿದ್ದಾರೆ. ನಾಣ್ಯಗಳು ಮಾತ್ರ ಮನೆಯಲ್ಲಿವೆ. ನಾಣ್ಯಗಳನ್ನು ಸ್ವೀಕರಿಸಲು ಯಾರೂ ಸಿದ್ಧರಿಲ್ಲ. ಬ್ಯಾಂಕ್‌ಗಳಲ್ಲಿಯೂ ಲೆಕ್ಕ ಹಾಕಲು ಜನರಿಲ್ಲ ಎಂದು ಹೇಳಿ ನಾಣ್ಯ ಪಡೆದುಕೊಳ್ಳಲು ಸಿದ್ಧರಿರಲಿಲ್ಲ. ನಾಣ್ಯಗಳು ನಿಷ್ಪ್ರಯೋಜಕ ಎಂದು ಆರ್‌ಬಿಐ ಹೇಳದಿರುವಾಗ, ಬ್ಯಾಂಕ್‌ಗಳು ಏಕೆ ಅವುಗಳನ್ನು ಸ್ವೀಕರಿಸುತ್ತಿಲ್ಲ? ನಾವು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ವೆಟ್ರಿವೇಲ್ indiatoday.in ಗೆ ತಿಳಿಸಿದ್ದಾರೆ.

ತನ್ನ ಸಂಬಂಧಿಕರೊಂದಿಗೆ ವೆಟ್ರಿವೇಲ್ ಶೋರೂಮ್‌ಗೆ 10 ರೂಪಾಯಿ ನಾಣ್ಯಗಳ ಮೂಟೆಗಳನ್ನು ಒಯ್ದಿದ್ದು, ಅಲ್ಲಿನ ಸಿಬ್ಬಂದಿ ಅವೆಲ್ಲವನ್ನೂ ಎಣಿಸಿ ಅಂತಿಮವಾಗಿ ವಾಹನದ ಕೀ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News