ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ ಎಂದು ಪ್ರತಿಜ್ಞಾ ಘೋಷಣೆ ನೀಡಿದರೆ ಮಾತ್ರ ಅಗ್ನಿಪಥ್‌ಗೆ ನೇಮಕ: ರಕ್ಷಣಾ ಸಚಿವಾಲಯ

Update: 2022-06-19 18:21 GMT

ಲಕ್ನೋ, ಜೂ. ೧೯: ನೂತನ ಸೇನಾ ನೇಮಕಾತಿ ಯೋಜನೆ ವಿರುದ್ಧ ಯಾವುದೇ ಹಿಂಸಾಚಾರ, ಕಿಚ್ಚಿಡುವಿಕೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ ಎಂದು ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸುವವರು ಲಿಖಿತ ರೂಪದಲ್ಲಿ ಪ್ರತಿಜ್ಞಾ ಘೋಷಣೆ ನೀಡಬೇಕಾಗುತ್ತದೆ ಎಂದು ರಕ್ಷಣಾ ಸಚಿವಾಲಯ ರವಿವಾರ ಹೇಳಿದೆ.  

ಶಸಸ್ತ್ರ ಪಡೆಗಳಿಗೆ ಅಲ್ಪಾವಧಿ ನೇಮಕಾತಿ ಅಗ್ನಿಪಥ್ ಯೋಜನೆಯ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ನಡುವೆ ಈ ಸೂಚನೆ ಹೊರಬಿದ್ದಿದೆ. 

ಭಾರತೀಯ ಸೇನಾಪಡೆ, ವಾಯು ಪಡೆ, ನೌಕಾಪಡೆಯ ಉನ್ನತ ಅಧಿಕಾರಿಗಳು ಹಾಗೂ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಅವರು ಅಗ್ನಿವೀರರ ನೇಮಕಾತಿಯ ಬಗ್ಗೆ ರವಿವಾರ ಮಾಧ್ಯಮಗಳಿಗೆ ವಿವರ ನೀಡಿದರು. 
ಭಾರತೀಯ ಸೇನೆಗಳ ಅಡಿಪಾಯ ಶಿಸ್ತು. ಕಿಚ್ಚಿಡುವಿಕೆ  ಹಾಗೂ ವಿಧ್ವಂಸ ಕೃತ್ಯಗಳಿಗೆ ಇಲ್ಲಿ ಜಾಗ ಇಲ್ಲ ಎಂದು ಅವರು ಹೇಳಿದ್ದಾರೆ. 

ತಾವು ಪ್ರತಿಭಟನೆಯಲ್ಲಿ ಅಥವಾ ವಿಧ್ವಂಸ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಪ್ರತಿಯೊಬ್ಬ ಆಕಾಂಕ್ಷಿಯೂ ಪ್ರಮಾಣ ಪತ್ರ ನೀಡಬೇಕು. ಸೇನಾ ನೇಮಕಾತಿಗೆ ಬಯಸುವ ಅಭ್ಯರ್ಥಿಗಳನ್ನು ಅಗ್ನಿವೀರರಾಗಿ ಪರಿಗಣಿಸುವುಕ್ಕಿಂತ ಮುನ್ನ ಅವರ ಹಿನ್ನೆಲೆಯನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ಪುರಿ ಅವರು ತಿಳಿಸಿದ್ದಾರೆ. 
ಒಂದು ವೇಳೆ ಆಕಾಂಕ್ಷಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ಲಭ್ಯವಾದರೆ, ಅನಂತರ ರಕ್ಷಣಾ ಸಚಿವಾಲಯ ಅವರ ನೇಮಕಾತಿಯನ್ನು ರದ್ದುಗೊಳಿಸಲಿದೆ ಪುರಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News