ಶ್ರೀಲಂಕಾ ಅಧ್ಯಕ್ಷರ ಅಧಿಕಾರ ಮೊಟಕಿಗೆ ಸಂಪುಟ ಅನುಮೋದನೆ

Update: 2022-06-21 18:36 GMT
PHOTO: AFP

ಕೊಲಂಬೊ, ಜೂ.21: ಅಧ್ಯಕ್ಷರ ಅಧಿಕಾರವನ್ನು ಮಿತಿಗೊಳಿಸುವ ಸಾಂವಿಧಾನಿಕ ಸುಧಾರಣೆಗೆ ಶ್ರೀಲಂಕಾ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ದ್ವೀಪರಾಷ್ಟ್ರಕ್ಕೆ ಎದುರಾಗಿರುವ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿಗೆ ಅಧ್ಯಕ್ಷ ಗೊತಬಯ ರಾಜಪಕ್ಸರ ದುರಾಡಳಿತ ಕಾರಣ ಎಂದು ಆಕ್ರೋಶಗೊಂಡು ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರನ್ನು ಸಂತುಷ್ಟಗೊಳಿಸಲು ಈ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಅಧ್ಯಕ್ಷರಿಗೆ ಇರುವ ವ್ಯಾಪಕ ಅಧಿಕಾರವನ್ನು ಮೊಟಕುಗೊಳಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ನಿರ್ಧಾರವನ್ನು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ರಣಿಲ್ ವಿಕ್ರಮಸಿಂಘೆಯ ಮಾಧ್ಯಮ ಸಲಹೆಗಾರ ದಿನೌಕ್ ಕೊಲಂಬಗೆ ಹೇಳಿರುವುದಾಗಿ ಅಲ್ಜಝೀರಾ ಮಂಗಳವಾರ ವರದಿ ಮಾಡಿದೆ.

ಶ್ರೀಲಂಕಾ ಸಂವಿಧಾನಕ್ಕೆ ಮಾಡಲಾಗುವ 21ನೇ ತಿದ್ದುಪಡಿಯ ಕರಡು ಪ್ರಸ್ತಾವನೆಯಲ್ಲಿ ಅಧ್ಯಕ್ಷರ ಕೈಯಲ್ಲಿದ್ದ ಹಲವು ಅಧಿಕಾರಿಗಳನ್ನು ಮತ್ತೆ ಸಂಸತ್ಗೆ ವರ್ಗಾಯಿಸುವ ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಆಯೋಗಗಳಿಗೆ ಸ್ವಾತಂತ್ರ್ಯವನ್ನು ಮರಳಿ ನೀಡುವ ಉಲ್ಲೇಖವಿದೆ.

ಸಂವಿಧಾನಕ್ಕೆ 21ನೇ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಇದೀಗ ಈ ಪ್ರಸ್ತಾವನೆಯನ್ನು ದೇಶದ ಸಂಸತ್ತಿಗೆ ಕಳುಹಿಸಲಾಗುವುದು.

ಸಂಸತ್ತಿನಲ್ಲಿ ಮೂರನೇ ಎರಡು ಬಹುಮತ ದೊರೆತರೆ ತಿದ್ದುಪಡಿ ಮಾಡಲಾಗುವುದು ಎಂದು ಶ್ರೀಲಂಕಾದ ಪ್ರವಾಸೋದ್ದಿಮೆ ಸಚಿವ ಹರಿನ್ ಫೆರ್ನಾಂಡೊ ಟ್ವೀಟ್ ಮಾಡಿದ್ದಾರೆ.

2020ರ ಅಕ್ಟೋಬರ್ ನಲ್ಲಿ ಅಧ್ಯಕ್ಷರಿಗೆ ಅಪಾರ ಅಧಿಕಾರ ನೀಡುವ ಉದ್ದೇಶದಿಂದ ಗೊಟಬಯ ರಾಜಪಕ್ಸ ಸಂವಿಧಾನಕ್ಕೆ 20ನೇ ತಿದ್ದುಪಡಿ ತಂದಿದ್ದರು.ಸಚಿವರ ನೇಮಕ, ಉಚ್ಛಾಟನೆ, ಚುನಾವಣಾ ಆಯೋಗ, ಸಾರ್ವಜನಿಕ ಸೇವಾ ಸಂಸ್ಥೆಗಳು, ಪೊಲೀಸ್, ಮಾನವ ಹಕ್ಕುಗಳ ಸಂಸ್ಥೆಗಳು, ಭ್ರಷ್ಟಾಚಾರ ಅಥವಾ ಲಂಚ ಆರೋಪಗಳ ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ನೇಮಕ ಮಾಡುವ ಅಧಿಕಾರ ಅಧ್ಯಕ್ಷರಿಗೆ ವರ್ಗಾವಣೆಗೊಂಡಿತ್ತು. 1978ರಿಂದಲೂ ಶ್ರೀಲಂಕಾವು ಪ್ರಬಲ ಕಾರ್ಯನಿರ್ವಾಹಕ ಅಧ್ಯಕ್ಷೀಯ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ 2015ರಲ್ಲಿ ಅಧಿಕಾರಕ್ಕೆ ಬಂದಿದ್ದ ಸುಧಾರಣಾವಾದಿ ಸರಕಾರವು ಅಧ್ಯಕ್ಷರ ಹಲವು ಅಧಿಕಾರಗಳನ್ನು ಕಿತ್ತುಕೊಂಡು ಅದನ್ನು ಸಂಸತ್ತಿಗೆ ಹಾಗೂ ಸ್ವತಂತ್ರ ಆಯೋಗಗಳಿಗೆ ವರ್ಗಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News