ಮಾಲ್ದೀವ್ಸ್: ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೆ ಪ್ರತಿಭಟನೆಯ ಬಿಸಿ

Update: 2022-06-21 18:46 GMT

ಮಾಲೆ, ಜೂ.21: ಮಾಲ್ದೀವ್ಸ್‌ನ  ರಾಜಧಾನಿ ಮಾಲೆಯಲ್ಲಿ ಮಂಗಳವಾರ ಬೆಳಿಗ್ಗೆ ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಯೋಗ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಮೆಣಸಿನ ಪುಡಿ ಎರಚಿ ಮತ್ತು ಅಶ್ರುವಾಯು ಪ್ರಯೋಗಿಸಿ ಚದುರಿಸಿದ್ದಾರೆ ಎಂದು ವರದಿಯಾಗಿದೆ.

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ರಾಜತಾಂತ್ರಿಕರು ಹಾಗೂ ಸರಕಾರಿ ಅಧಿಕಾರಿಗಳ ಸಹಿತ ಸುಮಾರು 150 ಜನರು ಯೋಗ ನಡೆಸುತ್ತಿದ್ದ ಕ್ರೀಡಾಂಗಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿದ್ದವರ ಮೇಲೆ ದಾಳಿ ನಡೆಸಿ ವಸ್ತುಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದರು ಎಂದು ಕಾರ್ಯಕ್ರಮದ ಸಂಘಟಕರನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ವರದಿ ಮಾಡಿದೆ.

ಇದಕ್ಕೂ ಮುನ್ನ ಪ್ರತಿಭಟನಾ ರ್ಯಾಲಿ ನಡೆಸಿದ್ದ ಪ್ರತಿಭಟನಾಕಾರರು ‘ಯೋಗವು ಇಸ್ಲಾಂನ ತತ್ವಗಳಿಗೆ ವಿರುದ್ಧವಾಗಿದೆ ಎಂದು ಘೋಷಣೆ ಕೂಗಿದ್ದರು ಎಂದು ವರದಿಯಾಗಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಲಾಗಿದೆ. ಘಟನೆಗೆ ಸಂಬಂಧಿಸಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಫಥ್ಮಾತ್ ನಶ್ವಾ ಹೇಳಿದ್ದಾರೆ. ಘಟನೆಯ ಬಗ್ಗೆ ಪೊಲೀಸ್ ತನಿಖೆ ಆರಂಭವಾಗಿದೆ. ಇದನ್ನು ಗಂಭಿರ ಪ್ರಕರಣವೆಂದು ಪರಿಗಣಿಸಿ, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೊಲಿಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News