ಅಸ್ಸಾಂ ಪ್ರವಾಹ; ಮೃತರ ಸಂಖ್ಯೆ 88ಕ್ಕೆ ಏರಿಕೆ

Update: 2022-06-22 01:54 GMT
(ಫೋಟೊ PTI)

ಗುವಾಹತಿ: ಅಸ್ಸಾಂನಲ್ಲಿ ಮಂಗಳವಾರ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ಒಂದು ವಾರದಿಂದ ತೀವ್ರ ಪ್ರವಾಹ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾದವರ ಸಂಖ್ಯೆ 88ಕ್ಕೇರಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಪರಿಸ್ಥಿತಿ ದುರ್ಬಲವಾಗಿದ್ದರೂ, ಬ್ರಹ್ಮಪುತ್ರಾ ಮತ್ತು ಬರಾಕ್ ಕಣಿವೆಗಳ ಪ್ರಮುಖ ನದಿಗಳು ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ನೀರು ಹೊಸ ಪ್ರದೇಶಗಳಿಗೆ ನುಗ್ಗುತ್ತಿದೆ. ರಾಜ್ಯದ 32 ಜಿಲ್ಲೆಗಳಲ್ಲಿ ಪ್ರವಾಹ ಸಂಕಷ್ಟದಿಂದ ಸಂತ್ರಸ್ತರಾದವರ ಸಂಖ್ಯೆ 55 ಲಕ್ಷಕ್ಕೇರಿದೆ.

ಅತ್ಯಂತ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಬರ್ಪೇಟಾ ಜಿಲ್ಲೆಯಲ್ಲಿ 12 ಲಕ್ಷ ಮಂದಿಗೆ ತೊಂದರೆಯಾಗಿದೆ ಎಂದು ಅಸ್ಸಾಂ ವಿಕೋಪ ನಿರ್ವಹಣೆ ಪ್ರಾಧಿಕಾರ (ಎಎಸ್‍ಡಿಎಂಎ) ಹೇಳಿದೆ. ಮನೆ ಮಠಗಳನ್ನು ಕಳೆದುಕೊಂಡಿರುವ 26 ಲಕ್ಷಕ್ಕೂ ಹೆಚ್ಚು ಮಂದಿ 862 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮಂಗಳವಾರ ಕೇಂದ್ರ ನಾಲ್ಕು ಹೆಚ್ಚುವರಿ ಎನ್‍ಡಿಆರ್‍ಎಫ್ ಪಡೆಗಳನ್ನು ಭುವನೇಶ್ವರದಿಂದ ಬರಾಕ್ ಕಣಿವೆಯ ಸಿಲ್ಚೇರಿಗೆ ವಿಮಾನದ ಮೂಲಕ ಕಳುಹಿಸಿಕೊಟ್ಟಿದೆ. ಪ್ರವಾಹ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಮಹಿಳೆಯೊಬ್ಬರ ಪತಿ ಮುಖ್ಯಮಂತ್ರಿಗೆ ಎಸ್‍ಎಂಎಸ್ ಮೂಲಕ ಸಹಾಯ ಯಾಚಿಸಿ ಮಾಡಿಕೊಂಡ ಮನವಿಯ ಹಿನ್ನೆಲೆಯಲ್ಲಿ ಮಹಿಳೆಯನ್ನು ಎನ್‍ಡಿಆರ್‍ಎಫ್ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News