ಏಕನಾಥ ಶಿಂಧೆ ಬಂಡಾಯ: ಪತನದ ಅಂಚಿಗೆ ಮಹಾರಾಷ್ಟ್ರ ಸರ್ಕಾರ

Update: 2022-06-22 02:16 GMT
ಸಿಎಂ ಉದ್ಧವ್ ಠಾಕ್ರೆ

ಮುಂಬೈ: ಶಿವಸೇನೆಯಲ್ಲಿ ಮೂಲೆಗುಂಪಾಗಿರುವ ಭಾವನೆ ಹೊಂದಿದ್ದ ಮಹಾರಾಷ್ಟ್ರದ ನಗರಾಭಿವೃದ್ಧಿ ಖಾತೆ ಸಚಿವ ಮತ್ತು ಪ್ರಭಾವಿ ನಾಯಕ ಏಕನಾಥ ಶಿಂಧೆ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸುವ ಮೂಲಕ ಮಹಾರಾಷ್ಟ್ರದಲ್ಲಿ ಅಧಿಕಾರಾರೂಢ ಎಂವಿಎ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ ಎಂದು timesofindia.com ವರದಿ ಮಾಡಿದೆ.

ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆಯವರ ನಿಧನದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ 56 ವರ್ಷಗಳ ಇತಿಹಾಸದಲ್ಲೇ ದೊಡ್ಡ ಬಂಡಾಯವನ್ನು ಎದುರಿಸುತ್ತಿದೆ. ಶಿಂಧೆ ಬಂಡಾಯ ಯಶಸ್ವಿಯಾದಲ್ಲಿ ಪಕ್ಷ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಳ್ಳಲಿದೆ. ಆದರೆ ಪಕ್ಷಕ್ಕೆ ಯಾವುದೇ ಅಪಾಯ ಇಲ್ಲ ಎಂದು ಮಹಾ ವಿಖಾಸ ಅಗಾಡಿ ಮುಖಂಡರು ಹೇಳಿಕೊಂಡಿದ್ದಾರೆ. ಶಿವಸೇನೆ ಮಹಾ ವಿಕಾಸ ಅಗಾಡಿಯಿಂದ ಹೊರಬಂದು ಹಿಂದುತ್ವದ ಕಾರಣಕ್ಕಾಗಿ ಬಿಜೆಪಿ ಜತೆ ಕೈಜೋಡಿಸಬೇಕು ಎಂದು ಶಿಂಧೆ ಆಗ್ರಹಿಸಿದ್ದಾರೆ.

"ನನಗೆ ಸಂಪುಟ ಹುದ್ದೆಯಲ್ಲಿ ಅಥವಾ ಶಿವಸೇನೆಗೆ ಲಗಾಮು ಹಾಕುವಲ್ಲಿ ಆಸ್ತಿ ಇಲ್ಲ. ಶಿವಸೇನೆಯನ್ನು ರಕ್ಷಿಸುವುದು ನನ್ನ ಬಯಕೆ. ಕಾಂಗ್ರೆಸ್ ಹಾಗೂ ಎನ್‍ಸಿಪಿ ಜತೆಗಿನ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆ ಕೈಜೋಡಿಸಿ" ಎಂದು ಸಿಎಂ ಉದ್ಧವ್ ಠಾಕ್ರೆಗೆ ಶಿಂಧೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ವಿಧಾನಸಭೆಯಲ್ಲಿ ಶಿವಸೇನೆ 55 ಶಾಸಕರನ್ನು ಹೊಂದಿದ್ದು, ಪಕ್ಷಾಂತರ ವಿರೋಧ ಕಾಯ್ದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶಿಂಧೆ 37 ಮಂದಿ ಶಾಸಕರ ಬೆಂಬಲ ಪಡೆಯಬೇಕಾಗಿದೆ. ಶಿವಸೇನೆಯ ಭಿನ್ನಮತೀಯ ಶಾಸಕರನ್ನು ಗುವಾಹತಿಗೆ ಸ್ಥಳಾಂತರಿಸಲಾಗಿದೆ. ಎಂವಿಎ ಪಕ್ಷಗಳು ಬಿಜೆಪಿ ಶಾಸಕರಿಗೆ ಗಾಳ ಹಾಕುವುದನ್ನು ತಡೆಯಲು ತನ್ನ ಎಲ್ಲ 106 ಶಾಸಕರನ್ನು ಗುಜರಾತ್‍ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಕೂಡಾ ಬಿಜೆಪಿ ತಂತ್ರ ಹೂಡಿದೆ. ಆದರೆ ಸರ್ಕಾರ ಸುಭದ್ರವಾಗಿದೆ ಎಂದು ಎಂವಿಎ ಮುಖಂಡರು ಹೇಳಿಕೊಂಡಿದ್ದಾರೆ.

"ನಾನು ಶಿಂಧೆ ಜತೆಗೆ ಮಾತುಕತೆ ನಡೆಸಿದ್ದೇನೆ. ಅವರ ಜತೆಗಿರುವ ಬಹುತೇಕ ಶಾಸಕರು ಶಿವಸೇನೆಯ ಸಂಪರ್ಕದಲ್ಲಿದ್ದು, ಪಕ್ಷದ ತೆಕ್ಕೆಗೆ ವಾಪಸ್ಸಾಗಲಿದ್ದಾರೆ" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News