ಅರಮನೆ ಆವರಣದಲ್ಲಿ 45 ನಿಮಿಷ ಯೋಗ ಮಾಡಿದ ಪ್ರಧಾನಿ

Update: 2022-06-22 04:35 GMT

ಅರಮನೆಯಲ್ಲಿ ಉಪಹಾರ ಸ್ವೀಕರಿಸಿದ ಮೋದಿ

 ಪ್ರಧಾನಿ ನರೇಂದ್ರ ಮೋದಿ ಅವರು ಅರಮನೆಯ ಆವರಣದಲ್ಲಿ ಯೋಗ ಮಾಡಿದರು. ಬಳಿಕ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಹ್ವಾನದ ಮೇರೆಗೆ ಅರಮನೆಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಕೆಲ ಸಮಯ ಅವರೊಂದಿಗೆ ಮಾತುಕತೆ ನಡೆಸಿದರು. ನಂತರ ಬೆಳ್ಳಿ ತಟ್ಟೆಯಲ್ಲಿ ಅವಲಕ್ಕಿ ಉಪ್ಪಿಟ್ಟು, ಇಡ್ಲಿ ಸಾಂಬಾರ್, ಬ್ರೆಡ್ ಮತ್ತು ಬೆಣ್ಣೆ ಹಾಗೂ ವಿಶೇಷ ಮೈಸೂರು ಪಾಕ್ ಸೇರಿದಂತೆ ವಿವಿಧ ಬಗೆಯ ಹತ್ತು ವಿಶೇಷ ತಿಂಡಿಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಉಣಬಡಿಸಲಾಯಿತು.

ಮೈಸೂರು, ಜೂ.21: ಸಾಂಸ್ಕೃತಿಕ ನಗರಿ ಮೈಸೂರಿನ ಅಂಬವಿಲಾಸ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 45 ನಿಮಿಷಗಳ ಕಾಲ ಯೋಗ ಮಾಡಿ ಜನರನ್ನು ಮೋಡಿ ಮಾಡಿದರು.

 8ನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 6:45ಕ್ಕೆೆ ಯೋಗದ ವೇದಿಕೆಗೆ ಆಗಮಿಸಿದರು. ಮೋದಿ ಆಗಮಿಸುತ್ತಿದ್ದಂತೆ ಯೋಗದಲ್ಲಿ ಭಾಗವಹಿಸಿದ್ದ ಜನರು ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗಿದರು. ಮೊದಲಿಗೆ ವೇದಿಕೆಯಲ್ಲಿದ್ದ ರಾಜಮಾತೆ ಪ್ರಮೋದಾದೇವಿ ಒಡೆಯರ್‌ಗೆ ನಮಸ್ಕರಿಸಿ ಅವರೊಂದಿಗೆ ಮಾತನಾಡಿದರು. ನಂತರ ವೇದಿಕೆಯಲ್ಲಿದ್ದ ಎಲ್ಲರಿಗೂ ನಮಸ್ಕರಿಸಿ, ಬಳಿಕ ಸಭಿಕರತ್ತ ಕೈಬೀಸಿದರು. ಮೊದಲಿಗೆ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನಾವಾಲ್ ವೇದಿಕೆಯಲ್ಲಿದ್ದವರನ್ನು ಸ್ವಾಗತಿಸಿದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 15 ನಿಮಿಷ ಮಾತನಾಡಿದರು.

ಬಳಿಕ ವೇದಿಕೆಯಿಂದ ಕೆಳಗಿಳಿದು ಯೋಗದಲ್ಲಿ ಭಾಗವಹಿಸಿದ್ದ ಜನರ ಬಳಿಗೆ ತೆರಳಿ ಸುಮಾರು 45 ನಿಮಿಷ ವಿವಿಧ ಭಂಗಿಗಳ ಆಸನ ಮಾಡಿದರು.

ಸೆಲ್ಫಿಗೆ ಮುಗಿಬಿದ್ದ ಜನತೆ: ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡಿ ಮುಗಿಸಿದ ನಂತರ ಪ್ರಧಾನಿ ಆಸುಪಾಸಿನಲ್ಲಿದ್ದವರು ಮೋದಿ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಇದರಿಂದ ಭದ್ರತಾ ಸಿಬ್ಬಂದಿ ಆತಂಕಗೊಂಡು ಮೋದಿ ಸುತ್ತ ಸುತ್ತುವರಿದರು. ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಲ್ಲರತ್ತಾ ಕೈ ಬೀಸಿ ಹೊರಡಲು ಮುಂದಾದರು.

ಪುಟ್ಟ ಮಗುವಿನ ಬೆನ್ನು ತಟ್ಟಿದ ಪ್ರಧಾನಿ: ಯೋಗ ಮಾಡಿ ತೆರಳುತ್ತಿದ್ದ ವೇಳೆ ಪಕ್ಕದಲ್ಲಿ ಅಡ್ಡಹಾಕಿದ್ದ ಮರದ ಬ್ಯಾರಿಕೇಡ್ ಬಳಿ ನೂರಾರು ಜನ ನಿಂತು ಮೋದಿ ಅವರಿಗೆ ಹಸ್ತಲಾಘವ ಮಾಡುತ್ತಿದ್ದರು. ಈ ವೇಳೆ ತಾಯಿಯೊಬ್ಬರು ತನ್ನ ಮಗುವನ್ನು ಎತ್ತಿಕೊಂಡು ಮೋದಿ ಅವರಿಗೆ ಹಸ್ತಲಾಘವ ಮಾಡಲು ಬಂದರು. ಆಗ ನರೇಂದ್ರ ಮೋದಿ ನಿಂತುಕೊಂಡು ತಾಯಿ ಎತ್ತಿಕೊಂಡಿದ್ದ ಮಗುವಿನ ಬೆನ್ನು ತಟ್ಟಿದರು.

ಬೆಳಗ್ಗಿನ ಜಾವ 4 ಗಂಟೆಗೆ ಆಗಮಿಸಿದ ಯೋಗಪಟುಗಳು:

8ನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ 15 ಸಾವಿರ ಮಂದಿಗೆ ಯೋಗ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ವೃದ್ಧರು, ವಯಸ್ಕರು, ಮಹಿಳೆಯರು ಮತ್ತು ಮಕ್ಕಳಾದಿಯಾಗಿ ಯೋಗಾಸಕ್ತರು ಬೆಳಗ್ಗಿನ ಜಾವ 4 ಗಂಟೆಗೆ ಅರಮನೆ ಆವರಣಕ್ಕೆ ಆಗಮಿಸಿದರು.

ಡಿಜಿಟಲ್ ಯೋಗ ಕೇಂದ್ರ ಉದ್ಘಾಟನೆ: ಯೋಗಕ್ಕೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ನಗರದ ವಸ್ತುಪ್ರದರ್ಶನ ಆವರಣದಲ್ಲಿ ಆಯುಷ್ ಇಲಾಖೆಯಿಂದ ನೂತನವಾಗಿ ನಿರ್ಮಾಣ ಮಾಡಲಾಗಿದ್ದ ಡಿಜಿಟಲ್ ಯೋಗ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ವೀಕ್ಷಿಸಿದರು. ಇದೇ ವೇಳೆ ಅಲ್ಲಿ ಆಯೋಜಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.

ನಂತರ ಇಲ್ಲಿಂದ ನೇರವಾಗಿ ಕಾರಿನ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದ ಮೂಲಕ ದಿಲ್ಲಿಗೆ ಪ್ರಯಾಣ ಬೆಳೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್ ಮತ್ತಿತರರಿದ್ದರು.

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News