ಪ್ರಧಾನಿ ಮೋದಿಯ ಲಾಭಕ್ಕಾಗಿ ‘ಪ್ರಾಯೋಗಿಕ ಯೋಜನೆʼ ಎಂದು ಅಗ್ನಿಪಥ್‌ ಅನ್ನು ಬ್ರಾಂಡ್ ಮಾಡಲಾಗುತ್ತಿದೆ

Update: 2022-06-22 13:30 GMT

ಸಾಮಾನ್ಯವಾಗಿ ಬೃಹತ್ ನೀತಿ ಬದಲಾವಣೆಗೆ ಪೂರ್ವಭಾವಿಯಾಗಿ ಅದರ ಸಾಧ್ಯಾಸಾಧ್ಯತೆಗಳನ್ನು ಅರಿಯಲು ಪೈಲಟ್ ಅಥವಾ ಪ್ರಾಯೋಗಿಕ ಯೋಜನೆಯನ್ನು ಹೆಚ್ಚು ಪ್ರಚಾರವಿಲ್ಲದೆ ಕೈಗೊಳ್ಳಲಾಗುತ್ತದೆ.

ಅಗ್ನಿವೀರರ ಮೊದಲ ತಂಡವು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳ್ಳುತ್ತಿದೆ, ಹೀಗಾಗಿ ಅಗ್ನಿಪಥ್ ಅನ್ನು ಪೈಲಟ್ ಅಥವಾ ಪ್ರಾಯೋಗಿಕ ಯೋಜನೆಯನ್ನಾಗಿ ಪರಿಗಣಿಸಬೇಕು ಎಂದು ಸೇನೆಯ ಉಪ ಮುಖ್ಯಸ್ಥ ಲೆ.ಜ.ಬಿ.ಎಸ್.ರಾಜು ಹೇಳಿದ್ದಾರೆ. ‘ನೇಮಕಾತಿ ವಿಧಾನ,ಧಾರಣ ಅಥವಾ ವಿಸ್ತರಣೆಗಳ ಶೇಕಡಾವಾರು...ಹೀಗೆ ಯಾವುದೇ ಪರಿಷ್ಕರಣೆಗಳನ್ನು ಅಗತ್ಯವಾದರೆ ನಮಗೆ ಸಾಕಷ್ಟು ದತ್ತಾಂಶಗಳು ಲಭ್ಯವಾದಾಗ ನಾಲ್ಕೈದು ವರ್ಷಗಳಲ್ಲಿ ಮಾಡಲಾಗುತ್ತದೆ ’ಎಂದಿದ್ದಾರೆ.

ಇದೇ ಕಾರಣದಿಂದಾಗಿ ಅಗ್ನಿಪಥ್ ಅನ್ನು ಪ್ರಾಯೋಗಿಕ ಯೋಜನೆ ಎಂದು ಪರಿಗಣಿಸಬೇಕು. ‘ನಾವದನ್ನು ಪ್ರಾಯೋಗಿಕ ಯೋಜನೆ ಎಂದು ಕರೆದಿಲ್ಲದಿರಬಹುದು,ಆದರೆ ಅದು ಸ್ಪಷ್ಟವಾಗಿ ಪ್ರಗತಿಯಲ್ಲಿದೆ ’ಎಂದು ಹೇಳುವ ಮೂಲಕ ಲೆ.ಜ.ರಾಜು,ಯೋಜನೆಯಲ್ಲಿ ಗಣನೀಯ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ ಎಂಬ ಸುಳಿವನ್ನು ನೀಡಿದ್ದಾರೆ.

ಲೆ.ಜ.ರಾಜು ಅವರು ಬಹುಶಃ ರಾಜಕೀಯ ಅಧಿಕಾರದ ದಿಗ್ಭ್ರಮೆಗೊಳಿಸುವ ಅಸಮರ್ಥತೆಯನ್ನು ಮುಚ್ಚಿಡುತ್ತ ಸ್ವಲ್ಪ ಸರಳವಾಗಿ ಮಾತನಾಡಿದ್ದಾರೆ. ಆಡಳಿತವನ್ನು ಪ್ರಮುಖ ಸುದ್ದಿಯಾಗುವ ಘಟನೆಗಳೊಂದಿಗೆ ಸಮೀಕರಿಸುವ ಆಡಳಿತ ವ್ಯವಸ್ಥೆಯ ಪ್ರವೃತ್ತಿಯಂತೆ ಅಗ್ನಿಪಥ್ ಅನ್ನು ಕೊಂಚ ನಾಟಕೀಯ ಉಪಕ್ರಮವಾಗಿರುವಂತೆ ಬಿಂಬಿಸಲಾಗಿತ್ತು.

ಲೆ.ಜ.ರಾಜು ಹೇಳಿದ್ದಂತೆ ಅಗ್ನಿಪಥ್ ಅನ್ನು ಪ್ರಮುಖವಲ್ಲದ ಪ್ರಾಯೋಗಿಕ ಯೋಜನೆಯೆಂದು ಪ್ರಕಟಿಸಿದ್ದರೆ ಹಲವಾರು ರಾಜ್ಯಗಳಲ್ಲಿ ನಡೆದಿರುವಂತೆ ಯುವಜನರು ಬೀದಿ ಹಿಂಸಾಚಾರಕ್ಕೆ ಇಳಿಯುತ್ತಿರಲಿಲ್ಲ. ಹೆಡ್‌ಲೈನ್‌ಗಳಿಗಾಗಿ ಅಸಮರ್ಥನೀಯ ಹಂಬಲದಿಂದ ಪ್ರೇರೇಪಿತ ಅದಕ್ಷ ಸಂವಹನದಿಂದಾಗಿ ಭಾರೀ ಹಾನಿಯುಂಟಾದ ಬಳಿಕ ಸರಕಾರವು ಈಗ ಸಶಸ್ತ್ರ ಪಡೆಗಳ ಮುಖ್ಯಸ್ಥರ ಹಿಂದೆ ಬಚ್ಚಿಟ್ಟುಕೊಂಡಿದೆ ಮತ್ತು ಹಾನಿಯನ್ನು ನಿಯಂತ್ರಿಸುವ ಸಂಪೂರ್ಣ ಹೊಣೆಗಾರಿಕೆ ಅವರ ಮೇಲೆ ಬಿದ್ದಿದೆ.

ಉತ್ತಮ ರಾಜಕೀಯ ಸಂವಹನಕಾರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಷಯವು ಕೈಮೀರಿದಾಗ ಸುದೀರ್ಘ ವೌನಕ್ಕೆ ಮೊರೆ ಹೋಗುತ್ತಿರುವಂತಿದೆ.
ಅಗ್ನಿಪಥ್ ಯೋಜನೆ ಮತ್ತು ನೂತನ ಕೃಷಿಕಾಯ್ದೆಗಳನ್ನು ಪ್ರಕಟಿಸಿದ ರೀತಿಗಳಲ್ಲಿ ವಿಲಕ್ಷಣ ಹೋಲಿಕೆಗಳಿವೆ. ಕೃಷಿ ಕಾಯ್ದೆಗಳನ್ನು ಏನೋ ಒಂದು ಕೃಷಿ ಕ್ರಾಂತಿ ಸಂಭವಿಸಲಿದೆ ಎಂಬಂತೆ ಯಾವುದೇ ಚರ್ಚೆಯಿಲ್ಲದೆ ನಾಟಕೀಯವಾಗಿ ಪ್ರಕಟಿಸಲಾಗಿತ್ತು. 

ಮುಖಪುಟದ ಸುದ್ದಿಯಾಗಿದ್ದ ಪ್ರಕಟಣೆಗಳ ಬಳಿಕ ಸರಣಿ ಹಿಂಜರಿತಗಳು ಎದುರಾಗಿದ್ದವು ಮತ್ತು ಕೃಷಿ ಕಾಯ್ದೆಗಳ ಜಾರಿಯನ್ನು ತಡೆಹಿಡಿದು,ಅಂತಿಮವಾಗಿ ಅವುಗಳನ್ನು ರದ್ದುಗೊಳಿಸುವಂತಾಗಿತ್ತು. ಕೃಷಿ ಕಾಯ್ದೆಗಳ ರದ್ದತಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಪ್ರೇರಣೆಯಾಗಿದ್ದವು, ಏಕೆಂದರೆ ಅಲ್ಲಿನ ಹೆಚ್ಚಿನ ರೈತರು ಬಿಜೆಪಿ ವೋಟ್ ಬ್ಯಾಂಕ್ ದೃಷ್ಟಿಯಿಂದ ಶ್ರದ್ಧೆಯಿಂದ ಪೋಷಿಸುತ್ತಿರುವ ಹಿಂದುಳಿದ ಸಮುದಾಯಗಳಿಗೆ ಸೇರಿದವರಾಗಿದ್ದರು.
 
ಇದೇ ರೀತಿ ಅಗ್ನಿಪಥ್ ಯೋಜನೆಯನ್ನು ವಿರೋಧಿಸುತ್ತಿರುವವರು, ವಿಶೇಷವಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿಯ ಯುವಜನರು ಬಿಜೆಪಿಯು ತನ್ನ ಪರವಾಗಿರಬೇಕು ಎಂದು ಬಯಸುವ ಸಮೂಹಕ್ಕೆ ಸೇರಿದವರಾಗಿದ್ದಾರೆ. ಪ್ರತಿಭಟನೆಗಳ ತೀವ್ರತೆ ಮತ್ತು ಪ್ರಮಾಣದಿಂದಾಗಿ ಸರಕಾರವು ಸ್ಪಷ್ಟವಾಗಿ ಆಘಾತಗೊಂಡಿದೆ. ಪ್ರತಿಭಟನೆಗಳು ಎಷ್ಟೊಂದು ಸ್ವಯಂಪ್ರೇರಿತ ಮತ್ತು ವ್ಯಾಪಕವಾಗಿವೆಯೆಂದರೆ ಏನಾಗುತ್ತಿದೆ ಎನ್ನುವುದನ್ನು ತಕ್ಷಣ ಅರ್ಥ ಮಾಡಿಕೊಳ್ಳಲು ಪ್ರತಿಪಕ್ಷಗಳಿಗೂ ಸಾಧ್ಯವಾಗಿರಲಿಲ್ಲ.

ಎರಡು ವರ್ಷಗಳ ವಿರಾಮದ ಬಳಿಕ ಸೇನಾ ನೇಮಕಾತಿಗಳು ಆರಂಭಗೊಳ್ಳುವುದನ್ನು ಸಹನೆಯಿಂದ ಕಾಯುತ್ತಿದ್ದ ಯುವಜನರ ಋಣಾತ್ಮಕ ಪ್ರತಿಕ್ರಿಯೆಯನ್ನು ಕಂಡ ಬಳಿಕ ಸರಕಾರವು ತನ್ನ ಅಗ್ನಿಪಥ್ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ನೇಮಕಾತಿಯನ್ನು ತಪ್ಪಿಸಿಕೊಂಡಿದ್ದವರನ್ನು ಸಮಾಧಾನಗೊಳಿಸಲು ಗರಿಷ್ಠ ವಯೋಮಿತಿಯನ್ನು 21ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ. ಜೊತೆಗೆ ನಾಲ್ಕು ವರ್ಷಗಳ ಸೇವೆಯ ಬಳಿಕ ನಿವೃತ್ತಿಯ ಸಮಯದಲ್ಲಿ 11 ಲ.ರೂ.ಗಳ ಮೊತ್ತ ಸಿಗುವಂತಹ ಇತರ ಸವಲತ್ತುಗಳಿಗೂ ಸೇನೆಯ ಹಿರಿಯ ನಾಯಕತ್ವವು ಒತ್ತು ನೀಡುತ್ತಿದೆ.
 
ನಿವೃತ್ತಿಯ ಬಳಿಕ ಅಗ್ನಿವೀರರು ಸೂಕ್ತ ಉದ್ಯೋಗಗಳನ್ನು ಪಡೆಯಲಿದ್ದಾರೆ ಎಂದು ಭರವಸೆ ನೀಡಲು ಮಹೀಂದ್ರಾ,ಟಾಟಾ ಮತ್ತು ಅಂಬಾನಿಗಳಂತಹ ಕೈಗಾರಿಕೋದ್ಯಮಿಗಳನ್ನೂ ರಂಗಕ್ಕೆ ತರಲಾಗಿದೆ. ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರಂತೂ ಅಗ್ನಿವೀರರಿಗೆ ಪಕ್ಷದ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಉದ್ಯೋಗದ ಭರವಸೆಯನ್ನು ನೀಡಿದ್ದಾರೆ. ಈ ಭರವಸೆಯನ್ನು ನೀಡುವಾಗ ಅಧಿಕಾರಿ ದರ್ಜೆಗಿಂತ ಕೆಳಗಿನವರಿಗೆ ಖಾತ್ರಿಯಾಗಿ ಸಿಗುವ ಪಿಂಚಣಿಯೊಂದಿಗೆ 17 ವರ್ಷಗಳ ಸೇವಾವಧಿಯನ್ನು ಪಡೆಯುವಲ್ಲಿ ಯೋಧರು ಗಳಿಸುವ ಪ್ರತಿಷ್ಠೆ ಮತ್ತು ಸ್ಥಾನಮಾನವನ್ನು ವಿಜಯವರ್ಗೀಯ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ಎಲ್ಲಿಯ ಯೋಧ,ಎಲ್ಲಿಯ ಸೆಕ್ಯೂರಿಟ ಗಾರ್ಡ್?

ವಿಶೇಷವಾಗಿ ಬಿಜೆಪಿ ತನ್ನ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗಳಿಸುತ್ತಿರುವ ಹಿಂದಿ ಭಾಷಿಕ ರಾಜ್ಯಗಳಲ್ಲಿಯ ಭಾವಿ ಅಗ್ನಿವೀರರ ರಾಜಕೀಯ ಸಂದೇಶದ ಬಗ್ಗೆಯೂ ಮೋದಿ ಸಮಾನ ಕಳವಳವನ್ನು ಹೊಂದಿರುವಂತಿದೆ.
  
ಮೋದಿ ನೀತಿಗಳನ್ನು ಜಾರಿಗೊಳಿಸುವಲ್ಲಿ ಅಸಮರ್ಥರಾಗಿರಬಹುದು, ಆದರೆ ಅವರ ರಾಜಕೀಯ ಜಾಣ್ಮೆಯನ್ನು ಕಡೆಗಣಿಸುವಂತಿಲ್ಲ. ಕಳೆದ ಎಂಟು ವರ್ಷಗಳಿಂದಲೂ ಅವರು ಭಾವಿ ಅಗ್ನಿವೀರರು ಹೆಚ್ಚಾಗಿ ಪ್ರತಿನಿಧಿಸುವ ರಾಜಕೀಯ ಕ್ಷೇತ್ರವನ್ನು ಪೋಷಿಸುತ್ತಿದ್ದಾರೆ. ಹೀಗಾಗಿ ಅವರು ಯೋಜನೆಯ ಮೇಲೆ ವೈಯಕ್ತಿಕ ನಿಗಾಯಿರಿಸಿದರೆ ಮತ್ತು 2024ರ ಚುನಾವಣೆಗಳಿಗೆ ಮೊದಲು ಸೂಕ್ತ ಬದಲಾವಣೆಗಳನ್ನು ಮಾಡಿದರೆ ಅಚ್ಚರಿ ಪಡಬೇಕಿಲ್ಲ.
ಎಷ್ಟೆಂದರೂ ಲೆ.ಜ.ರಾಜು ಅವರು ಅಗ್ನಿಪಥ್ ಅನ್ನು ‘ಪರಿಗಣಿತ ಪ್ರಾಯೋಗಿಕ ಯೋಜನೆ ’ಎಂದು ಮರುನಾಮಕರಣ ಮಾಡುತ್ತಿರುವುದು ಅದರದೇ ಆದ ರಾಜಕೀಯ ಉಪಯೋಗಗಳನ್ನು ಹೊಂದಿರಬಹುದು.

ಕೃಪೆ: thewire.in

Writer - ಎಂ.ಕೆ.ವೇಣು (thewire.in)

contributor

Editor - ಎಂ.ಕೆ.ವೇಣು (thewire.in)

contributor

Similar News