×
Ad

ಅಧಿಕೃತ ನಿವಾಸದಿಂದ ಕುಟುಂಬದ ಮನೆಗೆ ಸ್ಥಳಾಂತರಗೊಂಡ ಉದ್ಧವ್ ಠಾಕ್ರೆ: ಗರಿಗೆದರಿದ ಊಹಾಪೋಹಗಳು

Update: 2022-06-22 23:26 IST

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು ತಮ್ಮ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಹಿರಿಯ ಸಂಪುಟ ಸದಸ್ಯ ಏಕನಾಥ್ ಶಿಂಧೆ ಅವರ ಬಂಡಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ತಮಗೆ ಕೋವಿಡ್‌ ಪಾಸಿಟಿವ್‌ ಕಂಡು ಬಂದಿದ್ದರೂ, ರಾಜಕೀಯದ ಬಿಕ್ಕಟ್ಟಿನ ನಡುವೆ ತಮ್ಮ ಕುಟುಂಬದ ಮನೆಗೆ ಸ್ಥಳಾಂತರವಾದ ಉದ್ಧವ್‌ ಠಾಕ್ರೆ ಅವರ ನಡೆಯಲ್ಲಿ ಪರೋಕ್ಷ ಸಂದೇಶವಿದೆಯೆಂದು ವಿಶ್ಲೇಷಿಸಲಾಗಿದೆ. ಉದ್ಧವ್‌ ಠಾಕ್ರೆ ತಂದೆ ಬಾಳಾ ಸಾಹೇಬ್‌ ಠಾಕ್ರೆ ವಾಸಿಸಿದ್ದ ಅವರ ಕುಟುಂಬದ ಮನೆಗೂ ಶಿವಸೇನೆ ಪಕ್ಷಕ್ಕೂ ಇರುವ ಅವಿನಾಭಾವ ಸಂಬಂಧದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆಂಬ ಚರ್ಚೆ ಮಹರಾಷ್ಟ್ರ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಇಂದು ಮುಂಜಾನೆ, ತಮ್ಮ ಸರ್ಕಾರಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಫೇಸ್‌ಬುಕ್ ಲೈವ್ ಮುಖಾಂತರ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ ಠಾಕ್ರೆ, “ನನ್ನ ಸ್ವಂತ ಜನರಿಗೆ ನಾನು ಮುಖ್ಯಮಂತ್ರಿಯಾಗಲು ಇಷ್ಟವಿಲ್ಲದಿದ್ದರೆ, ಅವರು ನನ್ನ ಬಳಿಗೆ ಬಂದು ನೇರವಾಗಿ ಹೇಳಬೇಕು., ನಾನು ರಾಜಿನಾಮೆ ನೀಡಲು ಸಿದ್ಧ... ನಾನು ಬಾಳಾಸಾಹೇಬರ ಮಗ, ನಾನು ಹುದ್ದೆಯ ಹಿಂದೆ ಬಿದ್ದಿಲ್ಲ.. ನಾನು ರಾಜೀನಾಮೆ ನೀಡಬೇಕೆಂದು ಬಯಸಿದರೆ, ರಾಜಿನಾಮೆ ನೀಡಲು ಬಿಡಿ.. ನನ್ನೆಲ್ಲಾ ಆಸ್ತಿಯನ್ನು ಮಾತೋಶ್ರೀಗೆ ತೆಗೆದುಕೊಳ್ಳಲಿ" ಎಂದ ಹೇಳಿದ್ದರು.

“ನಾನು ಹುದ್ದೆಯಿಂದ ಕೆಳಗಿಳಿಯಲು ಸಿದ್ಧನಿದ್ದೇನೆ, ಆದರೆ, ಮುಂದಿನ ಮುಖ್ಯಮಂತ್ರಿ ಶಿವಸೇನೆಯವರೇ ಆಗಿರುತ್ತಾರೆ ಎಂದು ನನಗೆ ಭರವಸೆ ಕೊಡುತ್ತೀರ?" ಎಂದು ಅವರು ಪ್ರಶ್ನಿದ್ದಾರೆ.

ಉದ್ಧವ್‌ ಠಾಕ್ರೆ ಅವರು ಮೃದು ಆಗಿದ್ದಾರೆ ಮತ್ತು, ತನ್ನ ಬಣವನ್ನು ನಿಜವಾದ ಶಿವಸೇನೆ ಎಂದು ಬಿಂಬಿಸುತ್ತಿರುವ ಹಾಗೂ ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವ ಸಿದ್ಧಾಂತವನ್ನು ಉಲ್ಲೇಖಿಸುತ್ತಿರುವ ಏಕನಾಥ್ ಶಿಂಧೆ ಅವರಿಗೆ ಇದು ನೇರ ಸವಾಲಾಗಿದೆ. ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲು ಪ್ರಯತ್ನ ಪಡುತ್ತಿರುವ ʼಬಂಡಾಯʼ ಶಿವಸೇನೆ ಶಾಸಕರಿಗೆ ಮುಖ್ಯಮಂತ್ರಿಯವರ ಈ ಸವಾಲು ಎದುರಿಸುವುದು ಅಸಾಧ್ಯವಾದ ವಾತಾವರಣವಿದೆ. ಯಾಕೆಂದರೆ, ಉದ್ಧವ್‌ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಲು ಬಿಜೆಪಿಯ ನಿರಾಕರಿಸಿದ್ದೇ ದೀರ್ಘಕಾಲದ ಮೈತ್ರಿಯ ಅಂತ್ಯಕ್ಕೆ ಕಾರಣವಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಈ ನಡುವೆ, ಎದುರಾಗಿರುವ ಬಿಕ್ಕಟ್ಟನ್ನು ಕೊನೆಗೊಳಿಸುವ ಮಾರ್ಗವಾಗಿ ಶಿಂಧೆಗೆ ಉನ್ನತ ಹುದ್ದೆಯನ್ನು ನೀಡುವ ಆಲೋಚನೆಯನ್ನು ಶರದ್‌ ಪವಾರ್‌ ಹೊಂದಿದ್ದಾರೆ ಎಂದು ಮೈತ್ರಿಕೂಟದ ಇನ್ನೊಂದು ಪಕ್ಷವಾದ ಕಾಂಗ್ರೆಸ್ ಮೂಲಗಳು ಹೇಳಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News