ದೇಶ ದೊಡ್ಡ ಬೆಲೆಯನ್ನೇ ತೆರಬೇಕಾದೀತು: 'ಅಗ್ನಿಪಥ್' ವಿರುದ್ಧ ಕಿಡಿ ಕಾರಿದ ಸಿಯಾಚಿನ್ ಹೀರೋ ಕ್ಯಾಪ್ಟನ್ ಬನಾ ಸಿಂಗ್

Update: 2022-06-23 06:52 GMT
ಕ್ಯಾಪ್ಟನ್ ಬನಾ ಸಿಂಗ್ (Photo: telegraphindia)

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿರುವ 'ಅಗ್ನಿಪಥ್' ಯೋಜನೆಗೆ ದೇಶ ದೊಡ್ಡ ಬೆಲೆಯನ್ನೇ ತೆರಬೇಕಾದೀತು ಹಾಗೂ ಅದು ಮಿಲಿಟರಿಯನ್ನು 'ನಾಶಗೈಯ್ಯಲಿದೆ' ಮತ್ತು ಪಾಕಿಸ್ತಾನ ಮತ್ತು ಚೀನಾಗೆ ಸಹಾಯಕಾರಿಯಾಗಲಿದೆ ಎಂದು ಸಿಯಾಚಿನ್ ಹೀರೋ ಎಂದು ಕರೆಯಲ್ಪಡುವ ಗೌರವ ಕ್ಯಾಪ್ಟನ್ ಬನಾ ಸಿಂಗ್ ಹೇಳಿದ್ದಾರೆ ಎಂದು telegraphindia ವರದಿ ಮಾಡಿದೆ. ದೇಶದಲ್ಲಿ ಜೀವಂತವಿರುವ ಏಕೈಕ ಪರಮ ವೀರ್ ಚಕ್ರ ಪುರಸ್ಕೃತರಾಗಿರುವ ಸಿಂಗ್ ಅವರು ನಿವೃತ್ತಿಯಾಗುವ ವೇಳೆ ಸುಬೇದಾರ್ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ಗೌರವ ಕ್ಯಾಪ್ಟನ್ ಬಿರುದನ್ನೂ ಅವರಿಗೆ ನೀಡಲಾಗಿತ್ತು.

"ನಾಲ್ಕು ವರ್ಷದ ಗುತ್ತಿಗೆಯಾಧಾರಿತ ಅಗ್ನಿಪಥ್ ಯೋಜನೆಯು ಭಾರತೀಯ ಸೈನ್ಯವನ್ನು ನಾಶಗೈಯ್ಯಲಿದೆ. ಅದನ್ನು ಜಾರಿಗೊಳಿಸಲೇಬಾರದಾಗಿತ್ತು,'' ಎಂದು ಜಮ್ಮುವಿನಲ್ಲಿರುವ ತಮ್ಮ ಮನೆಯಿಂದ The Telegraph ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಅಗ್ನಿಪಥ್ ಯೋಜನೆಯನ್ನು ಟೀಕಿಸಿ ಸಿಂಗ್ ಅವರು ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ ನಂತರ ಅವರಿಗೆ 'ಫೋನ್ ಕರೆಗಳು' ಬರಲಾರಂಭಿಸಿದ್ದರಿಂದ ಅವರು ತಮ್ಮ ಟ್ವೀಟ್ ಅನ್ನು ತೆಗೆದುಹಾಕಿದ್ದರು. ಆದರೆ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳುವುದಾಗಿ ತಿಳಿಸುವ ಅವರು "ನಾನು ಯಾವತ್ತೂ ಸೇನೆ ಮತ್ತದರ ಕಲ್ಯಾಣದ ಕುರಿತಂತೆ ಮಾತನಾಡುತ್ತೇನೆ,'' ಎಂದಿದ್ದಾರೆ.

ಸುಮಾರು 21,000 ಅಡಿ ಎತ್ತರದಲ್ಲಿರುವ ಪಾಕಿಸ್ತಾನದ ಖ್ವಾಯೆದ್-ಇ-ಆಝಾಂ ಪೋಸ್ಟ್ ಮೇಲೆ ಜೂನ್ 1987ರಲ್ಲಿ ನಡೆದ ದಾಳಿಯ ನೇತೃತ್ವವನ್ನು ವಹಿಸಿದ್ದ ಸಿಂಗ್ ಅವರು ಈ ಕಾರಣಕ್ಕಾಗಿ ಸಿಯಾಚಿನ್ ಹೀರೋ ಎಂದು ಕರೆಯಲ್ಪಡುತ್ತಾರೆ. ಈ ದಾಳಿಯಲ್ಲಿ ಆರು ಪಾಕಿಸ್ತಾನಿ ಸೈನಿಕರು ಹತರಾಗಿದ್ದರಲ್ಲದೆ ಪ್ರಮುಖ ಪೋಸ್ಟ್ ಒಂದನ್ನು ಭಾರತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಪೋಸ್ಟ್ ಅನ್ನು ಬನಾ ಪೋಸ್ಟ್ ಎಂದು  ಮರುಹೆಸರಿಸಲಾಗಿತ್ತಲ್ಲದೆ ಸಿಂಗ್ ಅವರ ಶೌರ್ಯವನ್ನು ಮೆಚ್ಚಿನ ಅವರಿಗೆ 1988 ರಲ್ಲಿ ಪರಮ ವೀರ್ ಚಕ್ರ ನೀಡಿ ಗೌರವಿಸಲಾಗಿತ್ತು.

ಈಗ 73 ವರ್ಷದ ಸಿಂಗ್ ಅವರು ಅಗ್ನಿಪಥ್ ಬಗ್ಗೆ ಮಾತನಾಡುತ್ತಾ ಈ ಯೋಜನೆಯನ್ನು ಹೇರಿರುವ ರೀತಿ 'ಸರ್ವಾಧಿಕಾರಕ್ಕೆ' ಸಮ ಎಂದಿದ್ದಾರೆ ಎಂದು telegraphindia ವರದಿ ಮಾಡಿದೆ.

"ಇಂತಹ ನಿರ್ಧಾರಗಳನ್ನು ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸಂಬಂಧಿತರ ಹಾಗೂ ಮಿಲಿಟರಿಯ ಹಿರಿಯರ ಅಭಿಪ್ರಾಯಗಳನ್ನು ಸಂಗ್ರಹಿಸದೆ ಜಾರಿಗೊಳಿಸಬಾರದು. ಈ ರೀತಿ ಯಾವತ್ತೂ ಆಗಿರಲಿಲ್ಲ.'' ಎಂದು ಅವರು ಹೇಳಿದ್ದಾರೆ.

"ದೇಶವನ್ನು ರಕ್ಷಿಸಿ, ಅಗ್ನಿಪಥ ಯೋಜನೆ ನಮಗೆ ಹಾನಿಯುಂಟು ಮಾಡಲಿದೆ, ಭಾರತವು ಕಠಿಣ ಹಾದಿಯಲ್ಲಿದೆ ಯುವಜನರು ನಮ್ಮ ದೇಶದ ಭವಿಷ್ಯ,'' ಎಂದು ಮಂಗಳವಾರ ರಾತ್ರಿ ಅವರು ಟ್ವೀಟ್ ಮಾಡಿದ್ದರು. ಈ ಬಗ್ಗೆ ಮಾತನಾಡಿದ್ದಕ್ಕೆ ಹಲವು ಮಾಜಿ ಸೇನಾಧಿಕಾರಿಗಳು ಅವರನ್ನು ಶ್ಲಾಘಿಸಿದ್ದರು.

ಆದರೆ ಮರುದಿನ ಆ ಟ್ವೀಟ್ ಡಿಲೀಟ್ ಆಗಿತ್ತು. "ನನ್ನ ಮಗನಿಗೆ ಈ ಟ್ವೀಟ್ ಮಾಡುವಂತೆ ಹೇಳಿದ್ದೆ. ಆದರೆ ಫೋನ್ ಕರೆಗಳು ಬರಲಾರಂಭಿಸಿದ್ದವು. ಅದನ್ನು ಡಿಲೀಟ್ ಮಾಡಲು ಹೇಳಿದೆ. ಯೋಜನೆಯನ್ನು ಜಾರಿಗೊಳಿಸಲು ಸರಕಾರ ನಿರ್ಧರಿಸಿರುವಾಗ ಅದರಿಂದೇನು ಪ್ರಯೋಜನ?.'' ಎಂದು ಅವರು ಹೇಳಿದರು.

"ಒಬ್ಬ ವ್ಯಕ್ತಿ ಏನು ಹೇಳಿದರೂ ಅದರ ಚಿಂತೆಯಿಲ್ಲ. ಆದರೆ ಇಡೀ ದೇಶ ಹೇಳಬೇಕಿದೆ, ಇದಕ್ಕೆ ಇಡೀ ದೇಶ ದೊಡ್ಡ ಬೆಲೆ ತೆರಬೇಕಾದೀತು,'' ಎಂದು ಅವರು ಹೇಳಿದರು.

ಅಗ್ನಿಪಥ್ ಯೋಜನೆಯಿಂದ ದೇಶದ ವೈರಿಗಳಿಗೆ ಲಾಭವಾಗಬಹುದು. "ಸೈನಿಕನಾಗಿ ಕರ್ತವ್ಯ ನಿರ್ವಹಿಸುವುದು ಹುಡುಗಾಟವಲ್ಲ, ಹಲವಾರು ವರ್ಷಗಳ ತರಬೇತಿಯಿಂದ ಇದು ಸಾಧ್ಯ. ಆರು ತಿಂಗಳ ಅವಧಿಯಲ್ಲಿ ಯಾವ ರೀತಿಯ ತರಬೇತಿ ಅವರಿಗೆ ನೀಡಬಹುದು. ಸೇನೆಯನ್ನು ಆಟಿಕೆಯಂತೆ ಪರಿಗಣಿಸಬಾರದು. ನಮ್ಮ ನೆರೆಯ ಚೀನಾ ಮತ್ತು ಪಾಕಿಸ್ತಾನ ಇದರಿಂದ ಲಾಭ ಪಡೆಯಬಹುದು. ಚೀನಾದ ಪಡೆಗಳು ಇನ್ನಷ್ಟು ನಮ್ಮ ಪ್ರದೇಶದೊಳಗೆ ನುಸುಳಬಹುದು,'' ಎಂದು ಅವರು ಹೇಳಿದರು.

ಪ್ರತಿ ವರ್ಷ ಗಣರಾಜ್ಯೋತ್ಸವ ಪೆರೇಡ್ ಮತ್ತು ಸೇನಾ ದಿನಾಚರಣೆ ಸಂದರ್ಭ ಸಿಂಗ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News