ಸಿಸ್ಟರ್ ಅಭಯಾ ಹತ್ಯೆ ಪ್ರಕರಣ: ಆರೋಪಿಗಳಾದ ಪಾದ್ರಿ, ಕ್ರೈಸ್ತ ಸನ್ಯಾಸಿನಿಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್

Update: 2022-06-23 09:45 GMT
Photo:PTI

ತಿರುವನಂತಪುರ: ಸಿಸ್ಟರ್ ಅಭಯಾ ಹತ್ಯೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ತಪ್ಪಿತಸ್ಥರೆಂದು ತೀರ್ಪು ನೀಡಿದ ನಂತರ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕ್ಯಾಥೋಲಿಕ್ ಪಾದ್ರಿ  ಥಾಮಸ್ ಕೊಟ್ಟೂರ್ ಹಾಗೂ ಕ್ರೈಸ್ತ ಸಂನ್ಯಾಸಿನಿ ಸೆಫಿಗೆ ಕೇರಳ ಹೈಕೋರ್ಟ್ ನ ವಿಭಾಗೀಯ ಪೀಠವು ಗುರುವಾರ ಜಾಮೀನು ನೀಡಿದೆ.

ಆರೋಪಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಿರುವ  ಅರ್ಜಿಯನ್ನು ಪರಿಗಣಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಾಧೀಶರಾದ ವಿನೋದ್ ಚಂದ್ರನ್ ಹಾಗೂ ಜಯಚಂದ್ರನ್ ಅವರಿದ್ದ ಪೀಠ  ಅರ್ಜಿಯನ್ನು ಅಂಗೀಕರಿಸಿತು.

2020ರ ಡಿಸೆಂಬರ್ ನಲ್ಲಿ ತಿರುವನಂತಪುರದ  ಸಿಬಿಐ ನ್ಯಾಯಾಲಯವು ಸುದೀರ್ಘ ಕಾನೂನು ಹೋರಾಟದ ಬಳಿಕ  ಸಿಸ್ಟರ್ ಅಭಯಾ ಹತ್ಯೆಯಲ್ಲಿ ಪಾದ್ರಿ ಥಾಮಸ್ ಕೊಟ್ಟೂರ್ ಹಾಗೂ ಕ್ರೈಸ್ತ ಸನ್ಯಾಸಿನಿ ಸೆಫಿ ದೋಷಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. ಈ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 302(ಹತ್ಯೆ) ಹಾಗೂ ಸೆಕ್ಷನ್ 201(ಸಾಕ್ಷಿ ನಾಶ)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮತ್ತೊಬ್ಬ ಆರೋಪಿ ಫಾದರ್ ಜೋಸ್ ಪುತ್ರಿಕ್ಕಾಯಿಲ್ ಅವರ ಬಿಡುಗಡೆ ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ಸಮ್ಮತಿಸಿತ್ತು.

1992 ರ ಮಾರ್ಚ್ 27ರಂದು ಕೊಟ್ಟಾಯಂನ ಕಾನ್ವೆಂಟ್ ನ ಬಾವಿಯೊಳಗೆ ಸಿಸ್ಟರ್ ಅಭಯಾ ಮೃತದೇಹ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News