ನನ್ನ ಖಾತೆ ವಿರುದ್ಧ ಕ್ರಮಕ್ಕೆ ಸರಕಾರ ಟ್ವಿಟರ್‌ಗೆ ಮನವಿ ಮಾಡಿತ್ತು: ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಝುಬೈರ್‌

Update: 2022-06-23 09:29 GMT

ಹೊಸದಿಲ್ಲಿ: ತಮ್ಮ ಟ್ವಿಟರ್‌ ಖಾತೆ ಭಾರತೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಟ್ವಿಟರ್‌ಗೆ ಭಾರತ ಸರಕಾರದಿಂದ ಮನವಿ ಬಂದಿತ್ತು ಎಂದು ಆಲ್ಟ್‌ ನ್ಯೂಸ್‌ ಸಹಸ್ಥಾಪಕ ಮುಹಮ್ಮದ್‌ ಝುಬೈರ್‌ ಹೇಳಿದ್ದಾರೆ.

ಈ ಮನವಿಯ ಮೂಲಕ  ಭಾರತ ಸರಕಾರ ಯಾವ ಕ್ರಮಕ್ಕೆ ಕೋರಿತ್ತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸರಕಾರದ ಮನವಿಯಂತೆ ಯಾವುದೇ ಕ್ರಮ ಸದ್ಯಕ್ಕೆ ಕೈಗೊಂಡಿಲ್ಲ ಎಂದು ಟ್ವಿಟರ್‌ ಝುಬೈರ್‌ ಅವರಿಗೆ ಮಾಹಿತಿ ನೀಡಿದೆ.

ದ್ವೇಷದ ಭಾಷಣ ನೀಡಿದ ಸಂಬಂಧ ಪ್ರಕರಣ ಎದುರಿಸುತ್ತಿರುವ ಮೂವರು ಹಿಂದುತ್ವ ನಾಯಕರುಗಳಾದ ಯತಿ ನರಸಿಂಗಾನಂದ ಸರಸ್ವತಿ, ಬಜರಂಗ ಮುನಿ ಮತ್ತು ಆನಂದ್‌ ಸ್ವರೂಪ್‌ ಅವರನ್ನು ದ್ವೇಷ ಹರಡುವವರು ಎಂದು ಬಣ್ಣಿಸಿ ಟ್ವೀಟ್‌ ಮಾಡಿದ್ದಾರೆಂಬ ಆರೋಪದ ಮೇಲೆ ಝುಬೈರ್‌ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಜೂನ್‌ 1ರಂದು ಐಪಿಸಿ ಸೆಕ್ಷನ್‌ 295ಎ ಮತ್ತು ಐಟಿ ಕಾಯಿದೆಯ ಸೆಕ್ಷನ್‌ 67 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಆದರೆ ಇದು ಅವರ ವಿರುದ್ಧದ ಮೊದಲ ಪ್ರಕರಣ ಆಗಿರಲಿಲ್ಲ.

ಸೆಪ್ಟೆಂಬರ್‌ 2020ರಲ್ಲಿ ದಿಲ್ಲಿ ಪೊಲೀಸರು ಅವರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಅಪ್ರಾಪ್ತೆಯೊಬ್ಬಳಿಗೆ ಕಿರುಕುಳ ನೀಡಿದ ಆರೋಪ ಅವರ ಮೇಲೆ ಹೊರಿಸಲಾಗಿತ್ತು.

ಟ್ವಿಟರ್‌ ಬಳಕೆದಾರ ಜಗದೀಶ್‌ ಸಿಂಗ್‌ ಎಂಬವರ ನಿಂದನಾತ್ಮಕ ಪೋಸ್ಟ್‌ಗೆ ಝುಬೈರ್‌ ಪ್ರತಿಕ್ರಿಯಿಸಿದ ಒಂದು ತಿಂಗಳ ಬಳಿಕ ಈ ಪ್ರಕರಣಗಳು ದಾಖಲಾಗಿದ್ದವು.

ತಮ್ಮ ಟ್ವೀಟ್‌ನಲ್ಲಿ ಝುಬೈರ್‌ ಅವರು ಸಿಂಗ್‌ನ ಡಿಸ್ಪ್ಲೇ  ಚಿತ್ರವನ್ನು ಪೋಸ್ಟ್‌ ಮಾಡಿದ್ದರು. ಅದರಲ್ಲಿ  ಆ ವ್ಯಕ್ತಿಯ ಮೊಮ್ಮಗಳದ್ದೆಂದು ತಿಳಿಯಲಾದ ಚಿತ್ರವೂ ಇತ್ತು. ಆದರೆ ತಮ್ಮ ಪೋಸ್ಟ್‌ನಲ್ಲಿ ಝುಬೈರ್‌ ಬಾಲಕಿಯ ಮುಖವನ್ನು ಮಬ್ಬಾಗಿಸಿದ್ದರು.

ಆದರೆ ಈ ಟ್ವೀಟ್‌ ಗಂಭೀರ ಅಪರಾಧವೆಂದು ಪರಿಗಣಿಸಲಾಗದು ಎಂದು ದಿಲ್ಲಿ ಪೊಲೀಸರು ಹೈಕೋರ್ಟ್‌ಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News