‘ಅಗ್ನಿಪಥ್’ಗೆ ಅರ್ಜಿ ಸಲ್ಲಿಸುವವರನ್ನು ಸಾಮಾಜಿಕವಾಗಿ ದೂರ ಇರಿಸುವುದಾಗಿ ಹರ್ಯಾಣ ಖಾಪ್‌ ಪಂಚಾಯತ್‌ನಿಂದ ಬೆದರಿಕೆ

Update: 2022-06-23 17:20 GMT
ಸಾಂದರ್ಭಿಕ ಚಿತ್ರ (PTI)

ಚಂಡಿಗಢ, ಜೂ. 23: ಹರ್ಯಾಣದಲ್ಲಿ ಶಸಸ್ತ್ರ ಪಡೆಗಳಿಗೆ ನೇಮಕಾತಿ ಯೋಜನೆ ‘ಅಗ್ನಿಪಥ್’ನಲ್ಲಿ ಪಾಲ್ಗೊಳ್ಳುವ ಯುವಕರನ್ನು ಸಾಮಾಜಿಕವಾಗಿ ದೂರ ಇರಿಸಲಾಗುವುದು ಖಾಪ್ ಪಂಚಾಯತ್‌ನ ನಾಯಕರು ಹಾಗೂ ರೈತ ಒಕ್ಕೂಟದ ಪ್ರತಿನಿಧಿಗಳು ಘೋಷಿಸಿದ್ದಾರೆ.

‘ಅಗ್ನಿಪಥ್’ಯೋಜನೆಯನ್ನು ಬೆಂಬಲಿಸುತ್ತಿರುವ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಕೂಟದ ನಾಯಕರು ಹಾಗೂ ಕಾರ್ಪೋರೇಟ್ ಸಂಸ್ಥೆಗಳನ್ನು ಬಹಿಷ್ಕರಿಸುವಂತೆ ಅವರು ಕರೆ ನೀಡಿದ್ದಾರೆ.

ಸಶಸ್ತ್ರ ಪಡೆಗಳಿಗೆ ಕೇವಲ 4 ವರ್ಷಗಳ ಸೇವೆಗೆ ಮಾತ್ರ ನಿಯೋಜಿಸಲಾಗುತ್ತದೆ. ಅನಂತರ ಕನಿಷ್ಠ ಶೇ. 75 ಮಂದಿ ಪಿಂಚಣಿ ಸೌಲಭ್ಯ ಇಲ್ಲದೆ ಹೊರ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಗ್ನಿಪತ್ ಯೋಜನೆ ವಿರುದ್ಧ ರಾಷ್ಟ್ರಾದ್ಯಂತ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿತ್ತು. 

ಈ ಬಗ್ಗೆ ಹರ್ಯಾಣದ ರೋಹ್ಟಕ್ ಜಿಲ್ಲೆಯ ಸಾಂಪ್ಲಾ ಪಟ್ಟಣದಲ್ಲಿ ಬುಧವಾರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಹರ್ಯಾಣ, ರಾಜಸ್ಥಾನ, ಹಿಮಾಚಲಪ್ರದೇಶ ಹಾಗೂ ಪಂಜಾಬ್‌ನ ವಿವಿಧ ಖಾಪ್‌ಗಳು ಹಾಗೂ ಇತರ ಸಮುದಾಯ ಗುಂಪುಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.  ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಕೂಡ ಭಾಗಿಯಾಗಿದ್ದರು.

‘‘ಈ ಯೋಜನೆಗೆ ಅರ್ಜಿ ಸಲ್ಲಿಸುವವರನ್ನು ಸಾಮಾಜಿಕವಾಗಿ ದೂರ ಇರಿಸಲು ನಾವು ಪ್ರಯತ್ನಿಸಲಿದ್ದೇವೆ. ಅಗ್ನಿವೀರ್ ಹೆಸರಿನಲ್ಲಿ ಯುವ ಜನರನ್ನು ಕಾರ್ಮಿಕರಾಗಿ ಗುತ್ತಿಗೆ ತೆಗೆದುಕೊಳ್ಳಲು ಬಯಸುವ ಈ ಯೋಜನೆಯನ್ನು ನಾವು ಬಹಿಷ್ಕರಿಸುತ್ತೇವೆ’’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಧಂಕರ್ ಖಾಪ್‌ನ ಮುಖ್ಯಸ್ಥ ಓಂ ಪ್ರಕಾಶ್ ಧಂಕರ್ ಹೇಳಿದ್ದಾರೆ.

‘ಅಗ್ನಿಪಥ್’ ಯೋಜನೆಗೆ ಅರ್ಜಿ ಸಲ್ಲಿಸಿದವರನ್ನು ಬಹಿಷ್ಕರಿಸಲಾಗುವುದೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ನಾವು ಬಹಿಷ್ಕಾರ ಎಂಬ ಪದ ಬಳಸುವುದಿಲ್ಲ. ಆದರೆ, ಅಂತಹ ಜನರಿಂದ ಸಮುದಾಯ ಅಂತರ ಕಾಯ್ದುಕೊಳ್ಳಲಿದೆ’’ ಎಂದರು. 

ಈ ಯೋಜನೆಗೆ ಬೆಂಬಲ ನೀಡಿದ ರಾಜಕಾರಣಿಗಳು  ಹಾಗೂ ಕಾರ್ಪೋರೇಟ್‌ಗಳನ್ನು ಬಹಿಷ್ಕರಿಸುವಂತೆ ಅವರು ಜೂನ್ ೧೪ರಂದು  ಕರೆ ನೀಡಿದ್ದರು. ‘‘ಈ ಕಂಪೆನಿಗಳಿಂದ 10ಸಾವಿರ ರೂಪಾಯಿಗಿಂತ ಹೆಚ್ಚು ಬೆಲೆಯ ಯಾವುದೇ ಉತ್ಪನ್ನವನ್ನು ಖರೀದಿಸದಂತೆ ಆಗ್ರಹಿಸಲಾಗುವುದು’’ ಎಂದು ಅವರು ಹೇಳಿದ್ದಾರೆ. ಇದಕ್ಕೆ ಕೆಲವು ವಾರಗಳ ಹಿಂದೆ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಕೆಲವು ಬಿಜೆಪಿ ನಾಯಕರು ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಗಲ್ಭ್ ದೇಶಗಳಲ್ಲಿ ಭಾರತೀಯ ಉತ್ಪನ್ನವನ್ನು ಬಹಿಷ್ಕರಿಸಿದ ವರದಿಯನ್ನು ಉಲ್ಲೇಖಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News