ಭಾರತ-ಚೀನಾ ಗಡಿ ಬಿಕ್ಕಟ್ಟು: ದನ ಮೇಯಿಸುವ ಹಕ್ಕು ಕಳೆದುಕೊಳ್ಳುತ್ತಿರುವ ಅಲೆಮಾರಿಗಳು

Update: 2022-06-23 18:19 GMT

ಚುಸುಲ್(ಲಡಾಕ್), ಜೂ. 23:  ಹಿಮಾಲಯದಲ್ಲಿರುವ ತಮ್ಮ ವಿವಾದಿತ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವಿನ ಸೇನಾ ಬಿಕ್ಕಟ್ಟು ಮುಂದುವರಿದಿರುವುದು ತಮ್ಮ ಜೀವ ಹಾಗೂ ಜೀವನಕ್ಕೆ ಬೆದರಿಕೆ ಒಡ್ಡಿದೆ  ಎಂದು ಲಡಾಕ್‌ನಲ್ಲಿ ಶತಮಾನಗಳಿಂದ ಜೀವಿಸುತ್ತಿರುವ ಅಲೆಮಾರಿಗಳು ಹೇಳಿದ್ದಾರೆ.

‘‘ಮೂರು ತಲೆಮಾರಿನಿಂದ ನಮ್ಮ ಕುಟುಂಬ ದೆಮ್‌ಚೋಕ್‌ನಲ್ಲಿ ಜಾನುವಾರು ಮೇಯಿಸುತ್ತಿವೆ. ಆದರೆ, ಸೇನಾ ಬಿಕ್ಕಟ್ಟು ನಮ್ಮ ದನ ಮೇಯಿಸುವ ಹಕ್ಕನ್ನು ಕಸಿದುಕೊಳ್ಳುತ್ತಿದೆ’’ ಎಂದು ಪೂರ್ವ ಲಡಾಕ್‌ನ ಚುಶುಲ್ ಕಣಿವೆಯ 43ರ ಹರೆಯದ ಅಲೆಮಾರಿ ಕೊಂಚೋಕ್ ಇಶೆ ತಿಳಿಸಿದ್ದಾರೆ.

೨೦೨೦ರಲ್ಲಿ ಭಾರತ-ಚೀನಾ ನಡುವಿನ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ನಾವು ದನ ಮೇಯಿಸುವ ಭೂಮಿ ಕಳೆದುಕೊಂಡೆವು ಎಂದು ಈ ವಲಯದಲ್ಲಿರುವ ದಮ್‌ಚೇಲೆ, ಡೆಮ್‌ಚೋಕ್, ಚುಮುರ್, ತ್ಸಾಗಾ ಲಾ, ಕೊಯುಲ್ ಹಾಗೂ ಲೋಮಾದಲ್ಲಿ ಜೀವಿಸುತ್ತಿರುವ ಚೆಂಗ್ಪಾಸ್‌ನಂತಹ ಅಲೆಮಾರಿ ಬುಡಕಟ್ಟುಗಳು ಹೇಳಿವೆ.

‘‘ಸಂಘರ್ಷಕ್ಕಿಂತ ಮೊದಲು ನಾವು ಗುರುಂಗ್ ಹಿಲ್ (ಎಲ್‌ಎಸಿಯ ಸಮೀಪದ ಪರ್ವತ)ಗೆ ಹೋಗುತ್ತಿದ್ದೆವು. ಅಲ್ಲಿ ದನಗಳನ್ನು ಮೇಯಿಸುತ್ತಾ ದಿನಗಳನ್ನು ಕಳೆಯುತ್ತಿದ್ದೆವು. ಆದರೆ, ಈ ಭೂಮಿ ಭಾರತದ ನಿಯಂತ್ರಣದಲ್ಲಿ ಇರುವ ಹೊರತಾಗಿಯೂ ಅಲ್ಲಿ ಜಾನುವಾರು ಮೇಯಿಸಲು ನಮಗೆ ಅವಕಾಶ ನೀಡುತ್ತಿಲ್ಲ’’ ಎಂದು ಚೆಂಗ್ಪಾ ಬುಡಕಟ್ಟಿಗೆ ಸೇರಿದ ೪೯ರ ಹರೆಯದ ನಾಮ್‌ಗ್ಯಾಲ್ ಫುಂಟ್‌ಸೋಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News