ಸಾರ್ವಜನಿಕ ಸ್ಥಳದಲ್ಲಿ ಜಾತಿನಿಂದನೆಗೈದಿದ್ದರೆ ಮಾತ್ರ ಎಸ್‍ಸಿ/ಎಸ್‍ಟಿ ದೌರ್ಜನ್ಯ ತಡೆ ಕಾಯಿದೆ ಅನ್ವಯ: ಹೈಕೋರ್ಟ್

Update: 2022-06-24 09:15 GMT

 ಹೊಸದಿಲ್ಲಿ: ಕಟ್ಟಡವೊಂದರ ತಳಅಂತಸ್ತಿನಲ್ಲಿ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಜಾತಿ ನಿಂದನೆಗೈದ ಆರೋಪ ಹೊತ್ತ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್, ಪರಿಶಿಷ್ಟ ಜಾತಿ ವರ್ಗಗಳ ದೌರ್ಜನ್ಯ ತಡೆ ಕಾಯಿದೆ ಅನ್ವಯವಾಗಬೇಕಿದ್ದರೆ ನಿಂದನೆ ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು ಎಂದು ಹೇಳಿದೆ.

ಈ ಪ್ರಕರಣದ ಅರ್ಜಿದಾರ ರಿತೇಶ್ ಪಾಯಸ್ ವಿರುದ್ಧ ಕಟ್ಟಡವೊಂದರ ತಳಂತಸ್ತಿನಲ್ಲಿ ವ್ಯಕ್ತಿಯೊಬ್ಬರ ಜಾತಿ ನಿಂದನೆಗೈದ ಆರೋಪ ಹೊರಿಸಿ ಕೇಸ್ ದಾಖಲಿಸಾಗಿತ್ತು. ಈ ಸಂದರ್ಭ ಸಂತ್ರಸ್ತ ಮೋಹನ್ ಮತ್ತಾತನ ಸಹೋದ್ಯೋಗಿಗಳು  ಮಾತ್ರ ಉಪಸ್ಥಿತರಿದ್ದರು. ಮೋಹನ್ ಮತ್ತು ಇತರ ಕೆಲಸದವರನ್ನು ಕಟ್ಟಡ ಮಾಲೀಕ ಜಯಕುಮಾರ್ ಆರ್ ನಾಯರ್ ಎಂಬಾತನಿಗಾಗಿ ಕೆಲಸ ಮಾಡುತ್ತಿದ್ದರು.

"ಈ ಪ್ರಕರಣ ನಡೆದ ಕಟ್ಟಡವೊಂದರ ತಳಅಂತಸ್ತು ಸಾರ್ವಜನಿಕವಾಗಿ ಗೋಚರಿಸುತ್ತಿರಲಿಲ್ಲ ಹಾಗೂ ಅಲ್ಲಿ ದೂರುದಾರ, ಜಯಕುಮಾರ್ ಆರ್ ನಾಯರ್‍ನ ಉದ್ಯೋಗಿಗಳು ಅಥವಾ ದೂರುದಾರನ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು, ಇಲ್ಲಿ ನಿಂದನೆ ಸಾರ್ವಜನಿಕರೆದುರು ಅಥವಾ ಸಾರ್ವಜನಿಕ ಸ್ಥಳದಲ್ಲಿ ನಡೆದಿಲ್ಲ" ಎಂದು ಜೂನ್ 10ರಂದು ತೀರ್ಪು ನೀಡುವ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದ್ದಾರೆ.

"ಆರೋಪಿ ಪಾಯಸ್‍ಗೂ ಕಟ್ಟಡ ಮಾಲೀಕ ಜಯಕುಮಾರ್‌ ನಡುವೆ ವ್ಯಾಜ್ಯವೊಂದಿತ್ತು ಹಾಗೂ ಪಾಯಸ್ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿದ್ದರು, ಇದೇ ವಿವಾದಕ್ಕೂ ಈ ಘಟನೆಗೂ ನಂಟು ಇರುವಂತೆ ತೋರುತ್ತಿದೆ" ಎಂದು ನ್ಯಾಯಾಲಯ ಹೇಳಿದೆ.

ಮೇಲಾಗಿ ಐಪಿಸಿ ಸೆಕ್ಷನ್ 323 ಅನ್ವಯ ಹಲ್ಲೆಯು ಅಪರಾಧವೆಂದೆನಿಸಿಕೊಳ್ಳಲು ಗಾಯಗಳಾಗಿರಬೇಕು ಆದರೆ ಇಲ್ಲಿ ಹಲ್ಲೆಯಲ್ಲಿ ಕೇವಲ ತರಚು ಗಾಯಗಳಾಗಿರುವುದು ಕಂಡು ಬಂದಿದೆ ಎಂಬುದನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡು ಅರ್ಜಿದಾರನ ವಿರುದ್ಧ ಕೆಳಗಿನ ಹಂತದ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News